ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡ ಸರಿದರೂ ಹೆಚ್ಚಲಿಲ್ಲ ಮತದಾನ

Last Updated 12 ಮೇ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಉಳಿದ ಜಿಲ್ಲೆಗಳಿಗಿಂತ ಕಡಿಮೆ ಮತದಾನವಾಗಿದೆ. ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ತಿಂಗಳಾನುಗಟ್ಟಲೆ ನಡೆಸಿದ್ದ ವಿಶೇಷ ಕಾರ್ಯಕ್ರಮಗಳ ಹೊರತಾಗಿಯೂ ಈ ಬಾರಿ ಇಲ್ಲಿನ 26 ಕ್ಷೇತ್ರಗಳಲ್ಲಿ ಆಗಿರುವ ಮತದಾನ ಶೇ 54ರಷ್ಟು ಮಾತ್ರ.

ಶುಕ್ರವಾರದಂತೆ ಶನಿವಾರವೂ ಧಾರಾಕಾರ ಮಳೆಯಾದರೆ ಮತದಾನ ಕಡಿಮೆಯಾಗಬಹುದು ಎಂಬ ಆತಂಕವಿತ್ತು. ದಿನವಿಡೀ ಮೋಡ ಕವಿದ ವಾತಾವರಣವಿದ್ದರೂ ಹನಿ ಮಳೆಯೂ ಸುರಿದಿಲ್ಲ. ಆದರೂ ಅರ್ಧದಷ್ಟು ಮತದಾರರು ಮತಗಟ್ಟೆಯತ್ತ ಸುಳಿಯಲೇ ಇಲ್ಲ. 2013ರ ಚುನಾವಣೆಗೆ ಹೋಲಿಸಿದರೆ (ಶೇ 57.33ರಷ್ಟು ಮತದಾನವಾಗಿತ್ತು) ಈ ಬಾರಿ ಶೇ 3.33ರಷ್ಟು ಕಡಿಮೆ ಮತದಾನವಾಗಿದೆ.

ಇಲ್ಲಿನ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದ್ದರೂ ಬೆಳಿಗ್ಗೆ 9 ಗಂಟೆವರೆಗೆ ಶೇ 10ರಷ್ಟೂ ಮತಗಳು ಚಲಾವಣೆ ಆಗಿರಲಿಲ್ಲ. ಬೆಳಿಗ್ಗೆ 11ರ ವೇಳೆಗೆ ಶೇ 20ರಷ್ಟು ಮತದಾರರು ಮಾತ್ರ ಹಕ್ಕನ್ನು ಚಲಾಯಿಸಿದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 30ರಷ್ಟು ಮತಗಳು ಚಲಾವಣೆಯಾಗಿದ್ದವು. ಸಂಜೆ ವೇಳೆಗಾದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಹೆಜ್ಜೆ ಹಾಕಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಸಂಜೆ 3ರ ವೇಳೆಗೆ ಶೇ 40ರಷ್ಟು ಮಂದಿ ಹಾಗೂ ಸಂಜೆ 5ರ ವೇಳೆಗೆ ಶೇ 48 ಮಂದಿ ಮತ ಹಾಕಿದ್ದರು. ಈ ಬಾರಿ ಮತದಾನದ ಅವಧಿಯನ್ನು ಸಂಜೆ 6 ಗಂಟೆವರೆಗೆ ವಿಸ್ತರಿಸಿದ್ದರೂ (ಕಳೆದ ಸಲ ಸಂಜೆ 5ರವರೆಗೆ ಮಾತ್ರ ಇತ್ತು) ಮತದಾನದ ಪ್ರಮಾಣದಲ್ಲಿ ಅದರ ಪರಿಣಾಮ ಕಾಣಿಸಿಲ್ಲ.

ಮತಯಂತ್ರಗಳಲ್ಲಿ ದೋಷ: ಹೆಬ್ಬಾಳ, ಶಾಂತಿನಗರ, ಯಶವಂತಪುರ, ಪುಲಕೇಶೀನಗರ, ಆನೇಕಲ್‌, ಬೆಂಗಳೂರು ದಕ್ಷಿಣ, ಸಿ.ವಿ. ರಾಮನ್‌ನಗರದ (ತಿಪ್ಪೆಸಂದ್ರ) ಮತಗಟ್ಟೆಗಳ ಮತಯಂತ್ರಗಳಲ್ಲಿ ಲೋಪ ಕಾಣಿಸಿಕೊಂಡಿದ್ದವು. ಗೋವಿಂದರಾಜನಗರ, ವಿಜಯನಗರ ಕ್ಷೇತ್ರಗಳಲ್ಲಿ ಮತಯಂತ್ರದ ಗುಂಡಿ ಒತ್ತಿದ ಬಳಿಕವೂ ಸುಮಾರು 200 ಮತಗಳು ದಾಖಲಾಗಿಲ್ಲ. ಶಾಂತಿನಗರದ ಅಂಬೇಡ್ಕರ್‌ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾವಣೆಯಾದ ಬಳಿಕ ವಿವಿಪ್ಯಾಟ್‌ನಲ್ಲಿ ಆ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಳ್ಳುತ್ತಿರಲಿಲ್ಲ.

‘ಇಂತಹ ಪರಿಸ್ಥಿತಿ ಎದುರಾದರೆ  ಬಳಸುವುದಕ್ಕಾಗಿ ಪರ್ಯಾಯ ಮತಯಂತ್ರಗಳನ್ನು ಚುನಾವಣಾ ಆಯೋಗವು ಒದಗಿಸಬೇಕು’ ಎಂದು ಜಿ.ಆರ್‌.ಅನಿಲ್‌ ಅಭಿಪ್ರಾಯಪಟ್ಟರು.

ಯಶವಂತಪುರ ಕ್ಷೇತ್ರದ 198ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 9.15 ಆದರೂ ಮತದಾನ ಆರಂಭವಾಗಿರಲಿಲ್ಲ. ಅಲ್ಲಿ ಮತದಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

‘ನಾನು ಮಧ್ಯಾಹ್ನದೊಳಗೆ ಗ್ರಾಹಕರಿಗೆ ಊಟ ಪೂರೈಸಬೇಕು. ಇಲ್ಲಿ ಒಂದು ಗಂಟೆಯಿಂದ ಕಾದರೂ ಮತ ಚಲಾಯಿಸಲು ಆಗಿಲ್ಲ’ ಎಂದು ರೇವತಿ ಅಳಲು ತೋಡಿಕೊಂಡರು.

‘ಆದಷ್ಟು ಬೇಗ ಮತ ಚಲಾಯಿಸಬೇಕೆಂಬ ಉದ್ದೇಶದಿಂದ ಬೆಳಿಗ್ಗೆ 7 ಗಂಟೆಗೇ ಮತಗಟ್ಟೆಗೆ ಬಂದಿದ್ದೆ. ಮತಯಂತ್ರ ಕೆಟ್ಟಿರುವುದರಿಂದ 1 ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು’ ಎಂದು ಶಿವಾಜಿನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಗೀತಾ ಬೆಳ್ಳಿಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT