ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಪಂದ್ಯಗಳ ಸರಣಿಗೆ ಆಸ್ಟ್ರೇಲಿಯಾ ಒಲವು

ಖಾಲಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಆಯೋಜಿಸುವ ಸುಳಿವು ನೀಡಿದ ರಾಬರ್ಟ್ಸ್‌
Last Updated 21 ಏಪ್ರಿಲ್ 2020, 20:02 IST
ಅಕ್ಷರ ಗಾತ್ರ

ಸಿಡ್ನಿ: ಕೊರೊನಾ ಮಹಾಮಾರಿಯಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಇದರಿಂದ ಚೇತರಿಸಿಕೊಳ್ಳಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಭಾರತದ ವಿರುದ್ಧ ನಾಲ್ಕರ ಬದಲು ಐದು ಪಂದ್ಯಗಳ ಟೆಸ್ಟ್‌ ಸರಣಿ ಆಯೋಜಿಸಲು ಒಲವು ವ್ಯಕ್ತಪಡಿಸಿದೆ.

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವು ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿದೆ. ಈ ವೇಳೆ ಮೊದಲು ಟ್ವೆಂಟಿ–20 ಸರಣಿ ಆಡಲಿರುವ ತಂಡವು ಬಳಿಕ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ಇದಾದ ನಂತರ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ನಿಗದಿಯಾಗಿದೆ.

‘ಕೊರೊನಾದಿಂದಾಗಿ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಐಸಿಸಿ ಟೂರ್ನಿಗಳು ರದ್ದಾದರೆ ಮತ್ತಷ್ಟು ಹೊರೆ ಬೀಳಲಿದೆ. ಇದರಿಂದ ಪಾರಾಗಲು ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಸಿಎ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆವಿನ್‌ ರಾಬರ್ಟ್ಸ್‌ ಮಂಗಳವಾರ ತಿಳಿಸಿದ್ದಾರೆ.

‘ಈಗಾಗಲೇ ನಿಗದಿಯಾಗಿರುವ ಕೆಲ ಟೂರ್ನಿಗಳನ್ನು ಆಯೋಜಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಬೇಕೊ ಅಥವಾ ಪ್ರೇಕ್ಷಕರ ಸಮ್ಮುಖದಲ್ಲಿ ಆಯೋಜಿಸಬೇಕೊ ಎಂಬುದರ ಬಗ್ಗೆಯೂ ಚರ್ಚಿಸುತ್ತೇವೆ’ ಎಂದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್‌ ಸರಣಿಗೆ ಮತ್ತೊಂದು ಪಂದ್ಯ ಸೇರ್ಪಡೆ ಮಾಡಿ ಅದನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಸಿಎ ಚಿಂತಿಸಿದೆ.

ಈ ಕುರಿತು ಮಾತನಾಡಿರುವ ರಾಬರ್ಟ್ಸ್‌ ‘ಭಾರತದ ಎದುರಿನ ಸರಣಿಯ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚಿಸಬೇಕಿದೆ. ಟೆಸ್ಟ್‌ ಸರಣಿಗೆ ಮತ್ತೊಂದು‍ಪಂದ್ಯ ಸೇರ್ಪಡೆ ಮಾಡುವ ಆಲೋಚನೆಯೂ ಇದೆ’ ಎಂದು ನುಡಿದಿದ್ದಾರೆ.

‘ವಿಶ್ವಕಪ್‌ ಪ್ರಸಾರದಿಂದ ದೊಡ್ಡ ಆದಾಯ ಸಿಗಲಿದೆ. ಅದನ್ನು ಕಳೆದುಕೊಳ್ಳಲು ನಾವ್ಯಾರೂ ಸಿದ್ಧರಿಲ್ಲ. ಹೀಗಾಗಿ ಟ್ವೆಂಟಿ–20 ವಿಶ್ವಕಪ್‌ ಆಯೋಜಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

ಈ ಮೂಲಕ ಖಾಲಿ ಮೈದಾನದಲ್ಲಾದರೂ ವಿಶ್ವಕಪ್‌ ಆಯೋಜಿಸಿಯೇ ತೀರುತ್ತೇವೆ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.

‘ಮುಂದಿನ ನಾಲ್ಕು ವರ್ಷಗಳ ಆಯವ್ಯಯದ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಬ್ಬಂದಿಯ ವೇತನ ಕಡಿತ ಮಾಡದೇ ಬೇರೆ ದಾರಿಯೇ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಇಂತಹ ಹಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ. ನಾವೀಗ ಕಷ್ಟದಲ್ಲಿದ್ದೇವೆ. ಇದನ್ನು ಆಟಗಾರರೂ ಅರ್ಥಮಾಡಿಕೊಳ್ಳುವ ಭರವಸೆ ಇದೆ’ ಎಂದೂ ಹೇಳಿದ್ದಾರೆ.

ಆಸ್ಟ್ರೇಲಿಯಾ ಕೈ ಜೋಡಿಸಲಿ: ಗಾವಸ್ಕರ್‌

ನವದೆಹಲಿ: ಕೊರೊನಾ ವೈರಸ್‌ ಹಾವಳಿಯಿಂದಾಗಿ ವಿಶ್ವದ ಎಲ್ಲ ಕ್ರೀಡಾಕೂಟಗಳೂ ಸ್ತಬ್ಧವಾಗಿವೆ. ಇದೇ ವರ್ಷ ನಡೆಯಲಿರುವ ಕೆಲವು ಮಹತ್ವದ ಕ್ರಿಕೆಟ್ ಟೂರ್ನಿಗಳೂ ಅನಿಶ್ಚಿತವಾಗಿವೆ.

ಐಪಿಎಲ್, ಟಿ20 ವಿಶ್ವಕಪ್ ಮತ್ತು ಟಿ20 ಏಷ್ಯಾ ಕಪ್ ಟೂರ್ನಿಗಳನ್ನು ಇದೇ ವರ್ಷ ನಡೆಸುವುದು ಹೇಗೆಂಬ ದ್ವಂದ್ವದಲ್ಲಿ ಆಯೋಜಕರಿದ್ದಾರೆ. ಅದಕ್ಕಾಗಿ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಒಂದು ಸಲಹೆಯನ್ನು ಮುಂದಿಟ್ಟಿದ್ದಾರೆ.

"ಆಸ್ಟ್ರೇಲಿಯಾವು ಸೆ.30ರವರೆಗೆ ವಿದೇಶಿ ವಿಮಾನಗಳನ್ನು ತನ್ನ ದೇಶಕ್ಕೆ ಬರದಂತೆ ನಿಷೇಧ ಹೇರಿದೆ. ಅ ಮೂಲಕ ವಿದೇಶಿಗರಿಗೂ ಪ್ರವೇಶ ನಿರ್ಬಂಧಿಸಿರುವ ವಿಷಯ ನಮಗೆ ಗೊತ್ತಿದೆ. ಟೂರ್ನಿಯು ಟಿ20 ವಿಶ್ವಕಪ್ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಆರಂಭವಾಗುತ್ತದೆ. ಆ ಹೊತ್ತಿಗೆ ಭಾರತದಲ್ಲಿ ಕೊರೊನಾ ಪ್ರಭಾವವು ಸಂಪೂರ್ಣ ಕಮ್ಮಿಯಾಗುವ ನಿರೀಕ್ಷೆ ಇದೆ. ಆದ್ದರಿಂದ 2021ರಲ್ಲಿ ಭಾರತವು ಟಿ20 ವಿಶ್ವಕಪ್ ನಡೆಸಲು ಯೋಜಿಸಲಾಗಿದೆ. ಅದಕ್ಕಿಂತ ಈಗ ಆಸ್ಟ್ರೇಲಿಯಾ ಮತ್ತು ಭಾರತವು ಕೈಜೋಡಿಸಿ ಈ ವರ್ಷ ಇಲ್ಲಿಯೇ ನವೆಂಬರ್‌ನಲ್ಲಿ ಆಯೋಜಿಸಲಿ’ ಎಂದಿದ್ದಾರೆ.

‘ಇಲ್ಲಿ ವಿಶ್ವಕಪ್ ನಡೆಯುವಂತಾದರೆ, ಅದಕ್ಕೂ ಮುನ್ನ ಐಪಿಎಲ್ ನಡೆಸಬಹುದು. ಅದರಿಂದ ಆಟಗಾರರಿಗೂ ಒಂದಿಷ್ಟು ಅಭ್ಯಾಸ ಅವಕಾಶ ಸಿಗುತ್ತದೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಏಷ್ಯಾಕಪ್ ಟೂರ್ನಿ ಆಯೋಜಿಸಲಾಗಿದೆ. ಅದನ್ನು ಡಿಸೆಂಬರ್‌ಗೆ ಸ್ಥಳಾಂತರ ಮಾಡಿ ಯುಎಇಯಲ್ಲಿಯೇ ನಡೆಸಲಿ. ಅದು ಸೂಕ್ತ ಸಮಯವೂ ಹೌದು’ ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT