ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಟೆಸ್ಟ್‌: ಮಲಾನ್, ರೂಟ್ ಜೊತೆಯಾಟದ ರಂಗು

ಟ್ರಾವಿಡ್ ಹೆಡ್ ಅಮೋಘ ಆಟದಿಂದ ಆಸ್ಟ್ರೇಲಿಯಾ ಉತ್ತಮ ಮೊತ್ತ
Last Updated 10 ಡಿಸೆಂಬರ್ 2021, 16:41 IST
ಅಕ್ಷರ ಗಾತ್ರ

ಬ್ರಿಸ್ಬೇನ್: ಮೂರನೇ ಕ್ರಮಾಂಕದ ಡೇವಿಡ್ ಮಲಾನ್ ಮತ್ತುನಾಯಕ ಜೋ ರೂಟ್ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ಕುಸಿಯುತ್ತಿದ್ದ ಇಂಗ್ಲೆಂಡ್‌ ತಂಡಕ್ಕೆ ಆಸರೆಯಾದರು.

ಗಾಬಾ ಕ್ರೀಡಾಂದಣದಲ್ಲಿ ನಡೆಯುತ್ತಿರುವ ಆ್ಯಷಸ್ ಕ್ರಿಕೆಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ರೂಟ್ ಮತ್ತು ಮಲಾನ್ ಅವರ ಸೊಗಸಾದ, ದಿಟ್ಟ ಜೊತೆಯಾಟದಿಂದಾಗಿ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳಿಗೆ 220 ರನ್ ಗಳಿಸಿದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ ಮೊತ್ತಕ್ಕಿಂತ ಇಂಗ್ಲೆಂಡ್ ಈಗ 58 ರನ್‌ಗಳಿಂದ ಹಿಂದೆ ಉಳಿದಿದ್ದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ನಿರೀಕ್ಷೆ ಮೂಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಎದುರಾಳಿಗಳನ್ನು 147 ರನ್‌ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 425 ರನ್ ಗಳಿಸಿ 278 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲೂ ಇಂಗ್ಲೆಂಡ್ ಆರಂಭದಲ್ಲಿ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡಿತು.

ತಂಡದ ಮೊತ್ತ 23 ರನ್ ಆಗಿದ್ದಾಗ ರೋರಿ ಬರ್ನ್ಸ್‌ ಔಟಾದರೆ, 61 ರನ್‌ಗಳಾಗುವಷ್ಟರಲ್ಲಿ ಹಸೀಬ್ ಹಮೀದ್ ಕೂಡ ಮರಳಿದರು. ಈ ಸಂದರ್ಭದಲ್ಲಿ ಜೊತೆಗೂಡಿದ ಮಲಾನ್ ಮತ್ತು ರೂಟ್ 159 ರನ್ ಸೇರಿಸಿದರು. ಚಹಾ ವಿರಾಮಕ್ಕೂ ಮೊದಲು ಜೊತೆಗೂಡಿದ ಇವರಿಬ್ಬರು ದಿನದಾಟದ ಮುಕ್ತಾಯದ ವರೆಗೂ ಇನಿಂಗ್ಸ್ ಮುಂದುವರಿಸಿದರು.

ಹಸೀಬ್ ಹಮೀದ್‌ ಜೊತೆ 38 ರನ್‌ಗಳನ್ನು ಸೇರಿಸಿದ್ದ ಮಲಾನ್, ನಾಯಕ ಕ್ರೀಸ್‌ಗೆ ಬಂದ ನಂತರ ಇನ್ನಷ್ಟು ಭರವಸೆಯಿಂದ ಬ್ಯಾಟ್ ಬೀಸಿದರು. ಜೋ ರೂಟ್ ಮೋಹಕ ಹೊಡೆತಗಳ ಮೂಲಕ ರಂಜಿಸಿದರು. ಡ್ರೈವ್ ಮತ್ತು ಕಟ್‌ಗಳ ಮೂಲಕ ಮನಸೆಳೆದ ಅವರು ನೇಥನ್ ಲಯನ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಿ ಬೌಂಡರಿಗೆ ಅಟ್ಟುವ ಮೂಲಕ ಬ್ಯಾಟಿಂಗ್ ವೈವಿಧ್ಯವನ್ನು ಮೆರೆದರು. ಆಸ್ಟ್ರೇಲಿಯಾದಲ್ಲಿ ಗರಿಷ್ಠ ರನ್ ಸಾಧನೆಯನ್ನು ಮೈಲುಗಲ್ಲು ಸ್ಥಾಪಿಸಲು ಅವರಿಗೆ ಇನ್ನು ಒಂದು ರನ್ ಬೇಕು.

ಮೂರನೇ ದಿನವೂ ಮಿಂಚಿದ ಟ್ರಾವಿಸ್ ಹೆಡ್
ಎರಡನೇ ದಿನ ಶತಕ ಗಳಿಸಿ ಅಜೇಯರಾಗಿದ್ದ ಐದನೇ ಕ್ರಮಾಂಕದ ಟ್ರಾವಿಸ್ ಹೆಡ್ ಶುಕ್ರವಾರವೂ ಮಿಂಚಿದರು. ವೈಯಕ್ರಿಕ ಮೊತ್ತವನ್ನು 152ಕ್ಕೇರಿಸಿದ ಅವರು ತಂಡ 400 ರನ್‌ಗಳ ಗಡಿ ದಾಟಲು ನೆರವಾದರು. ಭೋಜನ ವಿರಾಮಕ್ಕೆ ಸ್ವಲ್ಪ ಮೊದಲು ಔಟಾದರು.

ಜೋ ರೂಟ್ ದಾಖಲೆ
ಬ್ರಿಸ್ಬೇನ್ (ಎಪಿ):
ಒಂದೇ ಋತುವಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎಂಬ ಶ್ರೇಯಸ್ಸು ಜೋ ರೂಟ್ ಅವರದಾಯಿತು. ಮೂರನೇ ದಿನವಾದ ಶುಕ್ರವಾರ ಅಮೋಘ ಬ್ಯಾಟಿಂಗ್ ಮಾಡಿದ ಅವರು ಈ ವರ್ಷ 1,541 ರನ್‌ ಸಾಧನೆ ಮಾಡಿದರು.

2002ರಲ್ಲಿ ಮೈಕೆಲ್ ವಾನ್ ಗಳಿಸಿದ 1,481 ರನ್ ಈ ವರೆಗೆ ಇಂಗ್ಲೆಂಡ್‌ನ ದಾಖಲೆಯಾಗಿತ್ತು. ಟೆಸ್ಟ್ ಕ್ರಿಕೆಟ್‌ನ ಋತುವೊಂದರಲ್ಲಿ ಗರಿಷ್ಠ ರನ್ ಕಲೆ ಹಾಕಿದ ವಿಶ್ವ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್‌ ಅವರ ಹೆಸರಿನಲ್ಲಿದೆ. ಅವರು 2006ರಲ್ಲಿ 11 ಪಂದ್ಯಗಳಿಂದ 1,788 ರನ್ ಗಳಿಸಿದ್ದರು.

ಋತುವೊಂದರಲ್ಲಿ ಹೆಚ್ಚು ರನ್ ಗಳಿಸಿದವರು (ಇಂಗ್ಲೆಂಡ್)

ಆಟಗಾರ;ರನ್;ಪಂದ್ಯ;ಗರಿಷ್ಠ;ವರ್ಷ

ಜೋ ರೂಟ್;1541;13*;228;2021

ಮೈಕೆಲ್ ವಾನ್;1481;14;197;2002

ಜೋ ರೂಟ್;1477;17;254;2016

ಜಾನಿ ಬೇಸ್ಟೊ;1470;17;167*;2016

ಜೋ ರೂಟ್;1385;14;182*;2015

ಋತುವೊಂದರಲ್ಲಿ ಹೆಚ್ಚು ರನ್ (ರೂಟ್ ಹೊರತುಪಡಿಸಿ)

ಆಟಗಾರ;ದೇಶ;ರನ್;ಪಂದ್ಯ;ಗರಿಷ್ಠ;ವರ್ಷ

ಮೊಹಮ್ಮದ್ ಯೂಸುಫ್;ಪಾಕಿಸ್ತಾನ;1788;11;202;2006

ವಿವಿಯನ್ ರಿಚರ್ಡ್ಸ್‌;ವೆಸ್ಟ್ ಇಂಡೀಸ್‌;1710;11;291;1976

ಗ್ರೇಮ್ ಸ್ಮಿತ್;ದಕ್ಷಿಣ ಆಫ್ರಿಕಾ;1656;15;232;2008

ಮೈಕೆಲ್ ಕ್ಲಾರ್ಕ್‌;ಆಸ್ಟ್ರೇಲಿಯಾ;1595;11;329*;2012

ಸಚಿನ್ ತೆಂಡೂಲ್ಕರ್;ಭಾರತ;1562;14;214;2010

ಸುನಿಲ್ ಗಾವಸ್ಕರ್;ಭಾರತ;1555;18;221;1979

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT