ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಏಕದಿನ ಪಂದ್ಯ: ರೋಹಿತ್ ಶತಕದ ಆಟ ವ್ಯರ್ಥ

ಆಸ್ಟ್ರೇಲಿಯಾಕ್ಕೆ ವಿಜಯ: ಧೋನಿ ಅರ್ಧಶತಕ
Last Updated 12 ಜನವರಿ 2019, 20:01 IST
ಅಕ್ಷರ ಗಾತ್ರ

ಸಿಡ್ನಿ: ಏಕದಿನ ಕ್ರಿಕೆಟ್‌ನಲ್ಲಿ ತಾವು ‘ಹಿಟ್‌ಮ್ಯಾನ್’ ಎಂಬುದನ್ನು ಭಾರತದ ರೋಹಿತ್ ಶರ್ಮಾ ಶನಿವಾರ ಮತ್ತೊಮ್ಮೆ ಸಾಬೀತು ಮಾಡಿದರು. ಆಸ್ಟ್ರೇಲಿಯಾ ಅಂಗಳದಲ್ಲಿಯೂ ಅಬ್ಬರದ ಶತಕ ಬಾರಿಸಿದರು. ಒಂದು ವರ್ಷದ ನಂತರ ಅರ್ಧಶತಕ ಬಾರಿಸಿದ ಮಹೇಂದ್ರಸಿಂಗ್ ಧೋನಿ ಮಿಂಚಿದರು. ಆದರೆ ಇದಾವುದೂ ಭಾರತ ತಂಡವನ್ನು ಗೆಲುವಿನ ದಡ ಸೇರಿಸಲಿಲ್ಲ.

ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 34 ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 288 ರನ್‌ ಗಳಿಸಿತು. ಉಸ್ಮಾನ್ ಖ್ವಾಜಾ (59; 81ಎಸೆತ, 6ಬೌಂಡರಿ), ಶಾನ್ ಮಾರ್ಷ್ (54; 70ಎಸೆತ; 4ಬೌಂಡರಿ) ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ (73;61ಎಸೆತ, 6ಬೌಂಡರಿ, 2ಸಿಕ್ಸರ್) ಅವರು ಅರ್ಧಶತಕಗಳ ಕಾಣಿಕೆ ನೀಡಿದರು. ಗುರಿ ಬೆನ್ನಟ್ಟಿದ ಭಾರತ ತಂಡ50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 254 ರನ್‌ ಗಳಿಸಿತು.

‌ಆರಂಭಿಕ ಆಘಾತ: ಭಾರತ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ಏಕೆಂದರೆ, ಕೇವಲ ನಾಲ್ಕು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಮತ್ತು ಅಂಬಟಿ ರಾಯುಡು ಅವರು ಸೊನ್ನೆ ಸುತ್ತಿದರು. ನಾಯಕ ವಿರಾಟ್ ಕೊಹ್ಲಿ ಎಂಟು ಎಸೆತಗಳಲ್ಲಿ ಮೂರು ರನ್ ಮಾತ್ರ ಗಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ರೋಹಿತ್ ಶರ್ಮಾ (133; 129ಎ, 10ಬೌಂಡರಿ,6 ಸಿಕ್ಸರ್) ಮತ್ತು ಧೋನಿ (51; 96ಎಸೆತ, 3ಬೌಂಡರಿ, 1ಸಿಕ್ಸರ್) ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 137 ರನ್‌ ಸೇರಿಸಿದರು. ಇದರಿಂದಾಗಿ ಭಾರತದ ಪಾಳಯದಲ್ಲಿ ಜಯದ ಭರವಸೆ ಕುಡಿಯೊಡೆದಿತ್ತು.

ಜೇಸನ್ ಬೆಹ್ರನ್‌ಡ್ರಾಫ್ ಹಾಕಿದ 33ನೇ ಓವರ್‌ನಲ್ಲಿ ಧೋನಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರೊಂದಿಗೆ ಅವರ ತಾಳ್ಮೆಯ ಇನಿಂಗ್ಸ್‌ಗೆ ತೆರೆಬಿತ್ತು. ಇದು ಅವರ 68ನೇ ಅರ್ಧಶತಕ. 2017ರ ಡಿಸೆಂಬರ್‌ನಲ್ಲಿ ಧರ್ಮಶಾಲಾದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 67ನೇ ಅರ್ಧಶತಕ ಗಳಿಸಿದ್ದರು.

ಇನ್ನೊಂದೆಡೆ ಆತಿಥೇಯ ಬೌಲರ್‌ಗಳ ಬೆವರಿಳಿಸುತ್ತಿದ್ದ ರೋಹಿತ್ ಬರೋಬ್ಬರಿ ಅರ್ಧ ಡಜನ್ ಸಿಕ್ಸರ್‌ಗಳನ್ನು ಸಿಡಿಸಿದರು. ತಮ್ಮ ಖಾತೆ ತೆರೆಯಲು ನಿಧಾನ ಮಾಡಿದ್ದರು. ಆದರೆ, ನಂತರದ ಆಟದಲ್ಲಿ ಮುಂಬೈಕರ್ ಡ್ರೈವ್, ಲಾಫ್ಟ್‌, ಫ್ಲಿಕ್‌ಗಳ ರಸದೌತಣ ಉಣಬಡಿಸಿದರು. ಆದರೆ ಅವರಿಗೆ ಉತ್ತಮ ಜೊತೆ ನೀಡುವಲ್ಲಿ ದಿನೇಶ್ ಕಾರ್ತಿಕ್ (12 ರನ್) ಮತ್ತು ರವೀಂದ್ರ ಜಡೇಜ (8 ರನ್) ವಿಫಲರಾದರು. ಭುವನೇಶ್ವರ್ ಕುಮಾರ್ (ಔಟಾಗದೆ 29; 23 ಎಸೆತ, 4ಬೌಂಡರಿ) ಮಾತ್ರ ಒಂದಿಷ್ಟು ರನ್ ಗಳಿಸುವ ಪ್ರಯತ್ನ ಮಾಡಿದರು. ಆದರೆ, 45ನೇ ಓವರ್‌ನಲ್ಲಿ ರೋಹಿತ್ ಔಟಾಗುವುದರೊಂದಿಗೆ ಗೆಲುವಿನ ಆಸೆ ಕಮರಿತು.

ಆಸ್ಟ್ರೇಲಿಯಾದ ಸಾವಿರ ಜಯದ ಸಾಧನೆ
ಶನಿವಾರ ಭಾರತದ ಎದುರಿನ ಪಂದ್ಯ ಗೆಲ್ಲುವುದರೊಂದಿಗೆ ಆಸ್ಟ್ರೇಲಿಯಾ ತಂಡವು ಅಪರೂಪದ ಸಾಧನೆ ಮಾಡಿತು. ಎಲ್ಲ ಮಾದರಿಗಳ ಕ್ರಿಕೆಟ್‌ನಲ್ಲಿ ಸೇರಿ ಒಟ್ಟು ಒಂದು ಸಾವಿರ ಜಯ ಸಾಧಿಸಿದ ದಾಖಲೆ ಮಾಡಿತು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇಂಗ್ಲೆಂಡ್, ಭಾರತ ಮತ್ತು ಪಾಕಿಸ್ತಾನ ತಂಡಗಳು ನಂತರದ ಸ್ಥಾನದಲ್ಲಿವೆ.

ಹತ್ತು ಸಹಸ್ರ ರನ್ ಪೇರಿಸಿದ ಧೋನಿ
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಭಾರತದ ಐದನೇ ಮತ್ತು ವಿಶ್ವದ 12ನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. 37 ವರ್ಷ ವಯಸ್ಸಿನ ಮಹೇಂದ್ರ ಸಿಂಗ್‌ ಧೋನಿ 330 ಏಕದಿನ ಪಂದ್ಯಗಳಲ್ಲಿ 10,000 ರನ್‌ಗಳ ಗಡಿ ದಾಟಿದ್ದಾರೆ. 9 ಶತಕಗಳು, 68 ಅರ್ಧ ಶತಕಗಳನ್ನು ಒಳಗೊಂಡಂತೆ 49.75 ಸರಾಸರಿಯೊಂದಿಗೆ ಈ ಸಾಧನೆ ಮಾಡಿದ್ದಾರೆ.

ಆವರು ಈ ಪಂದ್ಯದಲ್ಲಿ 93 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು. ಇದು ಅವರು ತಮ್ಮ ವೃತ್ತಿಜೀವನದಲ್ಲಿ ಗಳಿಸಿದ ಅತಿ ನಿಧಾನಗತಿಯ ಅರ್ಧಶತಕ. 2017ರಲ್ಲಿ ವೆಸ್ಟ್ ಇಂಡೀಸ್ ಎದುರು ಅರ್ಧಶತಕ ಹೊಡೆಯಲು 108 ಎಸೆತಗಳನ್ನು ಆಡಿದ್ದರು.

2017ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ 20 ಏಕದಿನ ಪಂದ್ಯಗಳಲ್ಲಿ ಅವರು ಒಂದೇ ಒಂದು ಅರ್ಧಶತಕವನ್ನೂ ಗಳಿಸದೆಯೇ 25 ಸರಾಸರಿಯಲ್ಲಿ ಗಳಿಸಿದ್ದು 275 ರನ್‌ಗಳನ್ನು ಮಾತ್ರ. ಇದರಿಂದ ಅವರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಈಗ ಸಿಡ್ನಿಯಲ್ಲಿ ಅವರು ಲಯಕ್ಕೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT