ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಆಸ್ಟ್ರೇಲಿಯಾ ಎರಡನೇ ಟೆಸ್ಟ್‌: ವಿರಾಟ್ ಶತಕ, ಲಯನ್ ಸ್ಪಿನ್ ಮೋಡಿ

ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್: 175 ರನ್ ಮುನ್ನಡೆ; ಭಾರತಕ್ಕೆ ಮೊದಲ ಇನಿಂಗ್ಸ್ ಹಿನ್ನಡೆ
Last Updated 16 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಪರ್ತ್: ಇಲ್ಲಿಯ ಆಪ್ಟಸ್ ಕ್ರೀಡಾಂಗಣದ ಪಿಚ್‌ನಲ್ಲಿ ಭಾನುವಾರ ಇಡೀ ದಿನ ಹತ್ತಾರು ನಾಟಕೀಯ ಘಟನೆಗಳು ನಡೆದವು. ವೇಗಿಗಳ ಚೆಂಡುಗಳು ಬ್ಯಾಟ್ಸ್‌ಮನ್‌ಗಳ ಎದೆ, ತಲೆಗೆ ಅಪ್ಪಳಿಸಿದವು. ಭಾರತ, ಆಸ್ಟ್ರೇಲಿಯಾ ತಂಡಗಳ ನಾಯಕರಿಬ್ಬರ ಮಾತಿನ ಚಕಮಕಿಯ ಬಿಸಿ ಏರಿತು. ಸ್ಪಿನ್ನರ್‌ಗಳ ಎಸೆತಗಳು ಅನಿರೀಕ್ಷಿತ ತಿರುವು, ಬೌನ್ಸ್‌ಗಳಿಂದ ಬ್ಯಾಟ್ಸ್‌ಮನ್‌ಗಳನ್ನು ಆವಾಕ್ಕಾಗಿಸಿದವು.

ಇವೆಲ್ಲವುಗಳ ನಡುವೆ ವಿರಾಟ್ ಕೊಹ್ಲಿಯ ಶತಕ ಮತ್ತು ಆಸ್ಟೇಲಿಯಾದ ನೇಥನ್ ಲಯನ್ ಅವರ ಐದು ವಿಕೆಟ್‌ಗಳ ಸಾಧನೆ ನೆನಪಿನಲ್ಲಿ ಉಳಿದವು. ಭಾರತ ತಂಡ ಮೊದಲ ಇನಿಂಗ್ಸ್‌ ಹಿನ್ನಡೆಯ ನಿರಾಶೆ ಅನುಭವಿಸಿದರೆ, ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 48 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 132 ರನ್‌ ಗಳಿಸಿದ ಆತಿಥೇಯ ತಂಡವು, 175 ರನ್‌ಗಳ ಮುನ್ನಡೆ ಸಾಧಿಸಿತು. ಒರಟಾಗಿ ವರ್ತಿಸುತ್ತಿರುವ ಅಂಗಳದಲ್ಲಿ 200 ಕ್ಕೂ ಹೆಚ್ಚು ರನ್‌ಗಳ ಗುರಿ ಸಾಧಿಸುವುದು ಕಷ್ಟಸಾಧ್ಯದ ಕೆಲಸ. ನಾಲ್ಕನೇ ದಿನವಾದ ಸೋಮವಾರ ಆಸ್ಟ್ರೇಲಿಯಾದ ಆರು ವಿಕೆಟ್‌ಗಳನ್ನು ಬೇಗನೆ ಕಬಳಿಸಿದರೆ; ಭಾರತವು ಮರುಹೋರಾಟ ಮಾಡಬಹುದು. ಆದರೆ, ಫೀಲ್ಡಿಂಗ್‌ ಲೋಪಗಳು ಮುಂದುವರಿದರೆ ಮಾತ್ರ ಪಂದ್ಯ ಕೈಜಾರುವ ಎಲ್ಲ ಸಾಧ್ಯತೆಗಳೂ ಇವೆ.

ಸಚಿನ್ ದಾಖಲೆ ಮೀರಿದ ವಿರಾಟ್
ಟೆಸ್ಟ್‌ ಕ್ರಿಕೆಟ್‌ನಲ್ಲಿ 25ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು. 75ನೇ ಟೆಸ್ಟ್‌ ಆಡುತ್ತಿರುವ ವಿರಾಟ್ ಅವರು ವೇಗವಾಗಿ 25 ಶತಕ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆದರು. ಅವರು ಡಾನ್‌ ಬ್ರಾಡ್ಮನ್ (68 ಇನಿಂಗ್ಸ್) ನಂತರದ ಸ್ಥಾನ ಪಡೆದರು. ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗಾವಸ್ಕರ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಗಳಿಸಿದ 326 ರನ್‌ಗಳಿಗೆ ಉತ್ತರವಾಗಿ ಭಾರತವು 105.5 ಓವರ್‌ಗಳಲ್ಲಿ 283 ರನ್‌ ಗಳಿಸಿತು. 43 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತು. ಶನಿವಾರ ಇನಿಂಗ್ಸ್‌ ಅರಂಭಿಸಿದ್ದ ಭಾರತ ತಂಡವು 82 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತ್ತು.

ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. 82 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ವಿರಾಟ್ (123; 257ಎಸೆತ, 13 ಬೌಂಡರಿ, 1ಸಿಕ್ಸರ್) ಮೂರನೇ ದಿನ ಬೆಳಿಗ್ಗೆ ಶತಕ ಪೂರೈಸಿದರು. ‍ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಹ್ಯಾಂಡ್ಸ್‌ಕಂಬ್ ಪಡೆದ ಕ್ಯಾಚ್‌ಗೆ ವಿರಾಟ್ ನಿರ್ಗಮಿಸಿದರು. ಆದರೆ ಹ್ಯಾಂಡ್ಸ್‌ಕಂಬ್ ಕ್ಯಾಚ್ ಪಡೆಯುವ ಮುನ್ನ ಚೆಂಡು ನೆಲಕ್ಕೆ ತಾಗಿದಂತೆ ವಿಡಿಯೊ ತುಣುಕುಗಳಲ್ಲಿ ಕಂಡಿತ್ತು. ಇದು ವಿವಾದಕ್ಕೆ ನಾಂದಿ ಹಾಡಿದೆ.

ಫಿಂಚ್‌ಗೆ ಗಾಯ: ಎರಡನೇ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ಬಿಸಿ ಎದುರಿಸಬೇಕಾಯಿತು.

ಭಾರತದ ವೇಗದ ಬೌಲರ್‌ಗಳು ಪಿಚ್‌ನ ಗುಣವನ್ನು ಸಮರ್ಥವಾಗಿ ಬಳಸಿಕೊಂಡರು. ಫುಲ್‌ ಲೆಂಗ್ತ್‌, ಶಾಟ್‌ ಪಿಚ್‌
ಎಸೆತಗಳಿಂದ ಎದುರಾಳಿಗಳಿಗೆ ಬಿಸಿ ಮುಟ್ಟಿಸಿದರು. ಮೊಹಮ್ಮದ್ ಶಮಿಯ ಎಸೆತವನ್ನು ಆಡುವ ಪ್ರಯತ್ನದಲ್ಲಿ ಆ್ಯರನ್‌ ಫಿಂಚ್‌ ಎಡಗೈ ಬೆರಳಿಗೆ ಗಾಯ ಮಾಡಿಕೊಂಡರು. ಇದರಿಂದಾಗಿ ನಿವೃತ್ತಿ ಪಡೆದು ಪೆವಿಲಿಯನ್‌ಗೆ ತೆರಳಿದರು. ಸ್ವಲ್ಪ ಹೊತ್ತಿನ ನಂತರ ತಂಡವು 85 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಉತ್ತಮ ವಾಗಿ ಆಡಿದ ಉಸ್ಮಾನ್ ಖ್ವಾಜಾ (ಬ್ಯಾಟಿಂಗ್ 41) ತಂಡಕ್ಕೆ ಚೇತರಿಕೆ ನೀಡಿದರು . ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಎಸೆತವೊಂದು ಖ್ವಾಜಾ ಹೆಲ್ಮೆಟ್‌ಗೆ ಅಪ್ಪಳಿಸಿತು. ಕೆಲ ನಿಮಿಷ ಸುಧಾರಿಸಿಕೊಂಡ ಉಸ್ಮಾನ್ ಮತ್ತೆ ಆಟ ಮುಂದುವರಿಸಿದರು.

ಕೊಹ್ಲಿ ಔಟ್‌, ಬೂಮ್ರಾ ಬೇಸರ
‘ಫೀಲ್ಡ್ ಅಂಪೈರ್‌, ವಿರಾಟ್ ಕೊಹ್ಲಿ ಅವರನ್ನು ಔಟ್ ಎಂದು ಘೋಷಿಸಿದ್ದು ತಂಡಕ್ಕೆ ಬೇಸರ ಉಂಟುಮಾಡಿತ್ತು. ಆದರೆ ಆ ಬಗ್ಗೆ ಹೆಚ್ಚು ಚಿಂತೆ ಮಾಡದೆ ಬೌಲಿಂಗ್ ಮಾಡಿದೆವು; ಆಸ್ಟ್ರೇಲಿಯಾದ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದೆವು’ ಎಂದು ವೇಗಿ ಜಸ್‌ಪ್ರೀತ್ ಬೂಮ್ರಾ ಹೇಳಿದರು.

ಪ್ಯಾಟ್ ಕಮಿನ್ಸ್ ಅವರ ಎಸೆತದಲ್ಲಿ ಕೊಹ್ಲಿ ಬ್ಯಾಟಿಗೆ ಅಂಚಿಗೆ ಸವರಿದ ಚೆಂಡು ಎರಡನೇ ಸ್ಲಿಪ್‌ನಲ್ಲಿದ್ದ ಪೀಟರ್ ಹ್ಯಾಂಡ್ಸ್‌ಕಂಬ್ ಅವರ ಬಳಿಗೆ ಸಾಗಿತ್ತು. ಅವರು ಕ್ಯಾಚ್‌ ಪಡೆದಿದ್ದರು. ಆದರೆ ಚೆಂಡು ನೆಲಕ್ಕೆ ತಾಗಿ ಅವರ ಕೈ ಸೇರಿತ್ತು. ಟಿವಿ ಅಂಪೈರ್‌ಗೆ ಇದು ಸ್ಪಷ್ಟವಾಗದ ಕಾರಣ ಔಟ್ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT