ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌: ಆಸ್ಟ್ರೇಲಿಯಾಗೆ ಮಣಿದ ನ್ಯೂಜಿಲೆಂಡ್‌

ಬ್ಲಂಡೆಲ್‌ ಹೋರಾಟದ ಶತಕ ವ್ಯರ್ಥ
Last Updated 29 ಡಿಸೆಂಬರ್ 2019, 22:41 IST
ಅಕ್ಷರ ಗಾತ್ರ

ಮೆಲ್ಬರ್ನ್‌: ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಟಾಮ್‌ ಬ್ಲಂಡೆಲ್‌ ಶತಕ ವ್ಯರ್ಥವಾಯಿತು. ನೇಥನ್‌ ಲಯನ್‌ ಗಳಿಸಿದ ನಾಲ್ಕು ವಿಕೆಟ್‌ಗಳ ಬಲದಿಂದ ಆಸ್ಟ್ರೇಲಿಯಾ ತಂಡ ಭಾನುವಾರ ಕಿವೀಸ್‌ ತಂಡವನ್ನು 247 ರನ್‌ಗಳಿಂದ ಮಣಿಸಿತು. ಒಂದು ಪಂದ್ಯ ಉಳಿದಿರುವಂತೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2–0ಯಿಂದ ವಶಪಡಿಸಿಕೊಂಡಿತು.

488 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ 240 ರನ್‌ ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು. ಕೊನೆಯವರಾಗಿ ವಿಕೆಟ್‌ ಕೈಚೆಲ್ಲಿದ ಬ್ಲಂಡೆಲ್‌, 121 ರನ್‌ ಸಂಪಾದಿಸಿದರು.

ಕಾಂಗರೂ ಪಡೆಯ ವೇಗಿ ಜೇಮ್ಸ್ ಪ್ಯಾಟಿನ್ಸನ್‌ ನ್ಯೂಜಿಲೆಂಡ್‌ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಿದರು. 38 ರನ್‌ ಆಗುವಷ್ಟರಲ್ಲಿ ಆ ತಂಡದ ಮೂರು ವಿಕೆಟ್‌ ಉರುಳಿದ್ದವು.

ಟಾಮ್‌ ಲಾಥಮ್‌ (8), ನಾಯಕ ಕೇನ್‌ ವಿಲಿಯಮ್ಸನ್‌ (0) ಹಾಗೂ ರಾಸ್‌ ಟೇಲರ್‌ (2) ಪ್ಯಾಟಿನ್ಸನ್‌ ದಾಳಿಯಲ್ಲಿ ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿದರು.

ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನಿಂತ ಬ್ಲಂಡೆಲ್‌ ಎರಡನೇ ಟೆಸ್ಟ್‌ ಶತಕ ಬಾರಿಸಿದರು.

ಹೆನ್ರಿ ನಿಕೋಲ್ಸ್ (33) ಹಾಗೂ ಬಿ.ಜೆ.ವಾಟ್ಲಿಂಗ್‌ (22) ಬ್ಲಂಡೆಲ್‌ ಅವರಿಗೆ ಅಲ್ಪ ಬೆಂಬಲ ನೀಡಿದರು. ಆದರೆ ಇದು ಗೆಲುವಿಗೆ ಸಾಕಾಗಲಿಲ್ಲ. ಲಯನ್‌ 81 ರನ್‌ ನೀಡಿ ನಾಲ್ಕು ವಿಕೆಟ್‌ ಕಿತ್ತರು.

ಇದಕ್ಕೂ ಮೊದಲು ನಾಲ್ಕು ವಿಕೆಟ್‌ಗೆ 137 ರನ್‌ಗಳಿಂದ ದಿನದಾಟಆರಂಭಿಸಿದ ಆಸ್ಟ್ರೇಲಿಯಾ ಆ ಮೊತ್ತಕ್ಕೆ 31 ರನ್‌ ಸೇರಿಸಿ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡಿತ್ತು. ಮ್ಯಾಥ್ಯು ವೇಡ್‌ ಔಟಾಗದೆ 30 ರನ್‌ ಗಳಿಸಿದರು. ನೀಲ್‌ ವ್ಯಾಗ್ನರ್‌ ಮೂರು ವಿಕೆಟ್‌ ಕಬಳಿಸಿದರು.

ಈ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್ ಅನುಭವಿಸಿದ ಎರಡನೇ ದೊಡ್ಡ ಅಂತರದ ಸೋಲು ಇದು. ಪರ್ತ್‌ ಟೆಸ್ಟ್‌ನಲ್ಲಿ ಆ ತಂಡ 296 ರನ್‌ಗಳಿಂದ ಪರಾಭವ ಕಂಡಿತ್ತು.

ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಜನವರಿ 3ರಿಂದ ಸಿಡ್ನಿಯಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 467 ಹಾಗೂ 5 ವಿಕೆಟ್‌ಗೆ 168 ಡಿಕ್ಲೇರ್ಡ್, ನ್ಯೂಜಿಲೆಂಡ್‌ 148 ಹಾಗೂ ಎರಡನೇ ಇನಿಂಗ್ಸ್ 71 ಓವರ್‌ಗಳಲ್ಲಿ 240 (ಟಾಮ್‌ ಬ್ಲಂಡೆಲ್‌ 121, ಹೆನ್ರಿ ನಿಕೋಲ್ಸ್ 33, ಮಿಷೆಲ್‌ ಸ್ಯಾಂಟ್ನರ್‌ 27, ಬಿ.ಜೆ.ವಾಟ್ಲಿಂಗ್‌ 22; ನೇಥನ್‌ ಲಯನ್‌ 81ಕ್ಕೆ 4, ಜೇಮ್ಸ್ ಪ್ಯಾಟಿನ್ಸನ್‌ 35ಕ್ಕೆ 3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT