ಬುಧವಾರ, ಮಾರ್ಚ್ 29, 2023
23 °C

ಟೆಸ್ಟ್ | ಕೇರಿ ಶತಕ, ಒತ್ತಡದಲ್ಲಿ ದ.ಆಫ್ರಿಕಾ; ಆಸ್ಟ್ರೇಲಿಯಾಕ್ಕೆ ಜಯದ ನಿರೀಕ್ಷೆ

ಎಪಿ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಗೆಲುವಿನ ನಿರೀಕ್ಷೆಯಲ್ಲಿದೆ.

ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಅಲೆಕ್ಸ್‌ ಕೇರಿ (111 ರನ್‌, 149 ಎ) ಗಳಿಸಿದ ಶತಕದ ನೆರವಿನಿಂದ ಆತಿಥೇಯ ತಂಡ 8 ವಿಕೆಟ್‌ಗಳಿಗೆ 575 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

386 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಬುಧವಾರದ ಆಟದ ಅಂತ್ಯಕ್ಕೆ ಒಂದು ವಿಕೆಟ್‌ಗೆ 15 ರನ್‌ ಗಳಿಸಿದೆ. ಡೀನ್ ಎಲ್ಗರ್‌ (0) ಖಾತೆ ತೆರೆಯದೆಯೇ ಪೆವಿಲಿಯನ್‌ಗೆ ಮರಳಿದರು. ಇನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 371 ರನ್‌ ಗಳಿಸಬೇಕಾದ ಸವಾಲು ಪ್ರವಾಸಿ ತಂಡದ ಮುಂದಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಎರಡನೇ ದಿನ ಡೇವಿಡ್‌ ವಾರ್ನರ್‌ ದ್ವಿಶತಕ ಗಳಿಸಿ ಮಿಂಚಿದ್ದರೆ, ಮೂರನೇ ದಿನ ಕೇರಿ ಮೆರೆದಾಡಿದರು. 9 ರನ್‌ಗಳೊಂದಿಗೆ ಆಟ ಮುಂದುವರಿಸಿದ್ದ ಅವರು ತಮ್ಮ 14ನೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದರು.

ಕ್ಯಾಮರಾನ್‌ ಗ್ರೀನ್‌ (51) ಮತ್ತು ನೇಥನ್‌ ಲಿಯೊನ್‌ (25) ಅವರು ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಕೇರಿ ಹಾಗೂ ಗ್ರೀನ್‌ 117 ರನ್‌ಗಳ ಜತೆಯಾಟ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 68.4 ಓವರ್‌ಗಳಲ್ಲಿ 189. ಆಸ್ಟ್ರೇಲಿಯಾ 145 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 575 ಡಿಕ್ಲೇರ್ಡ್ (ಟ್ರ್ಯಾವಿಸ್‌ ಹೆಡ್‌ 51, ಕ್ಯಾಮರಾನ್‌ ಗ್ರೀನ್‌ ಔಟಾಗದೆ 51, ಅಲೆಕ್ಸ್‌ ಕೇರಿ 111, ನೇಥನ್ ಲಿಯೊನ್ 25, ಎನ್ರಿಕ್‌ ನಾರ್ಕಿಯಾ 92ಕ್ಕೆ 3, ಕಗಿಸೊ ರಬಾಡ 144ಕ್ಕೆ 2) ಎರಡನೇ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 15

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು