ಗುರುವಾರ , ಜೂನ್ 30, 2022
24 °C
ಪಾಕಿಸ್ತಾನಕ್ಕೆ 115 ರನ್‌ಗಳಿಂದ ಸೋಲುಣಿಸಿದ ಕಮಿನ್ಸ್ ಬಳಗ

ಲಾಹೋರ್‌ ಟೆಸ್ಟ್: ಪಾಕ್ ನೆಲದಲ್ಲಿ ಐತಿಹಾಸಿಕ ಸರಣಿ ಗೆದ್ದ ಆಸ್ಟ್ರೇಲಿಯಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಾಹೋರ್: ಕುತೂಹಲ ಕೆರಳಿಸಿದ್ದ ಕೊನೆಯ ದಿನ ಸಂಪೂರ್ಣ ಪಾರಮ್ಯ ಮೆರೆದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಸಂಭ್ರಮಿಸಿತು.

ಗಡಾಫಿ ಕ್ರೀಡಾಂಗಣದಲ್ಲಿ ಶುಕ್ರವಾರ ಕೊನೆಗೊಂಡ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಪ್ರವಾಸಿ ತಂಡ 115 ರನ್‌ಗಳಿಂದ ಜಯ ಗಳಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1–0 ಅಂತರದಿಂದ ತನ್ನದಾಗಿಸಿಕೊಂಡಿತು.

351 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ನಾಲ್ಕನೇ ದಿನವಾದ ಗುರುವಾರ ವಿಕೆಟ್ ಕಳೆದುಕೊಳ್ಳದೆ 73 ರನ್ ಗಳಿಸಿತ್ತು. ಹೀಗಾಗಿ ತಂಡದ ಆಟಗಾರರಲ್ಲೂ ಅಭಿಮಾನಿಗಳಲ್ಲೂ ಭರವಸೆ ಮೂಡಿತ್ತು. ಆದರೆ ಶುಕ್ರವಾರ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು. ನೇಥನ್ ಲಯನ್ ಐದು ಮತ್ತು ನಾಯಕ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಉರುಳಿಸಿ ಪಾಕಿಸ್ತಾನದ ಅಸೆಗೆ ತಣ್ಣೀರು ಸುರಿದರು. 

ಗುರುವಾರದ ಮೊತ್ತಕ್ಕೆ ನಾಲ್ಕು ರನ್ ಸೇರಿಸುವಷ್ಟರಲ್ಲಿ ಪಾಕಿಸ್ತಾನ ಮೊದಲ ವಿಕೆಟ್ ಕಳೆದುಕೊಂಡಿತು. ಅಬ್ದುಲ್ಲ ಶಫೀಕ್ ಅವರನ್ನು ಕ್ಯಾಮರಾನ್ ಗ್ರೀನ್ ವಾಪಸ್ ಕಳುಹಿಸಿದರು. ಅಜರ್ ಅಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅವರು ನೇಥನ್ ಲಯನ್‌ಗೆ ಬಲಿಯಾದರು. ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್ (70; 199 ಎಸೆತ, 5 ಬೌಂಡರಿ) ಜೊತೆಗೂಡಿದ ನಾಯಕ ಬಾಬರ್ ಆಜಂ (55; 104 ಎ, 6 ಬೌಂ) ನಿರೀಕ್ಷೆ ಮೂಡಿಸಿದರು. 

ಆದರೆ ಹಕ್ ಔಟಾದ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. ತಂಡವು 22 ರನ್‌ಗಳಿಗೆ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. 

1998ರ ನಂತರ ಇದೇ ಮೊದಲ ಬಾರಿ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ತಂಡ ಪ್ರವಾಸ ಕೈಗೊಂಡಿತ್ತು. ರಾವಲ್ಪಿಂಡಿ ಮತ್ತು ಕರಾಚಿ ಟೆಸ್ಟ್‌ಗಳು ಡ್ರಾದಲ್ಲಿ ಕೊನೆಗೊಂಡಿದ್ದವು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಚಿ ಬೆನಾಡ್ ಮತ್ತು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಹೆಸರಿನಲ್ಲಿ ಬೆನಾಡ್ ಖಾದಿರ್ ಟ್ರೋಫಿ ಆಯೋಜಿಸಲಾಗಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 391, ಪಾಕಿಸ್ತಾನ: 268; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 3ಕ್ಕೆ 227 (ಡಿಕ್ಲೇರ್ಡ್‌); ಪಾಕಿಸ್ತಾನ (ಗುರುವಾರ ವಿಕೆಟ್ ಕಳೆದುಕೊಳ್ಳದೆ 73): 92.1 ಓವರ್‌ಗಳಲ್ಲಿ 235 (ಅಬ್ದುಲ್ಲ ಶಫೀಕ್ 27, ಇಮಾಮ್ ಉಲ್ ಹಕ್ 70, ಬಾಬರ್ ಆಜಂ 55, ಸಾಜಿದ್ ಖಾನ್ 21, ಹಸನ್ ಅಲಿ 13; ಮಿಚೆಲ್ ಸ್ಟಾರ್ಕ್ 53ಕ್ಕೆ1, ಪ್ಯಾಟ್ ಕಮಿನ್ಸ್ 23ಕ್ಕೆ3, ನೇಥನ್ ಲಯನ್ 83ಕ್ಕೆ 5, ಕ್ಯಾಮರಾನ್ ಗ್ರೀನ್ 18ಕ್ಕೆ1). ಫಲಿತಾಂಶ: ಆಸ್ಟ್ರೇಲಿಯಾಗೆ 115 ರನ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 1–0 ಗೆಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು