ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್ ಟೂರ್ನಿ: ಆಸ್ಟ್ರೇಲಿಯಾ ಅಜೇಯ ಓಟ

ಎಲಿಸ್, ಆ್ಯಶ್ಲಿ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್‌; ಮೋಹಕ ಅರ್ಧಶತಕ ಗಳಿಸಿದ ರಾಚೆಲ್
Last Updated 15 ಮಾರ್ಚ್ 2022, 11:32 IST
ಅಕ್ಷರ ಗಾತ್ರ

ವೆಲಿಂಗ್ಟನ್: ಆಸ್ಟ್ರೇಲಿಯಾ ತಂಡ, ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಳು ವಿಕೆಟ್‌ಗಳಿಂದ ಜಯ ಗಳಿಸಿದ ಮೆಗ್‌ ಲ್ಯಾನಿಂಗ್ ಬಳಗ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.

ಮಧ್ಯಮ ವೇಗಿ ಎಲಿಸ್ ಪೆರಿ ಮತ್ತು ಆಫ್‌ ಬ್ರೇಕ್ ಬೌಲರ್ ಆ್ಯಶ್ಲಿ ಗಾರ್ಡನರ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ಕೇವಲ 131 ರನ್ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 30.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ರಾಚೆಲ್ ಹೇನ್ಸ್ (83; 95 ಎ, 9 ಬೌಂಡರಿ) ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು.

ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ಹಿಂದಿನ ಮೂರು ಪಂದ್ಯಗಳಂತೆ ಈ ಪಂದ್ಯದಲ್ಲೂ ಆಧಿಪತ್ಯ ಮೆರೆಯಿತು. ಮೆಗ್‌ ಲ್ಯಾನಿಂಗ್ ನಾಯಕತ್ವದ ಕಾಂಗರೂ ನಾಡಿನ ಬಳಗ ಗುರಿ ಬೆನ್ನತ್ತುವುದರಲ್ಲಿ ಸಮರ್ಥ ತಂಡ ಎಂಬುದನ್ನು ಸಾಬೀತು ಮಾಡಿತು. ಆರಂಭಿಕ ಬ್ಯಾಟರ್ ರಾಚೆಲ್ ಹೇನ್ಸ್ ಇದಕ್ಕೆ ಪುಷ್ಠಿ ನೀಡಿದರು.

ತಂಡದ ಮೊತ್ತ ಏಳು ರನ್ ಆಗುವಷ್ಟರಲ್ಲಿ ವಿಕೆಟ್ ಕೀಪರ್ ಅಲಿಸಾ ಹೀಲಿ ಮತ್ತು ನಾಯಕಿ ಮೆಗ್‌ ಲ್ಯಾನಿಂಗ್ ಅವರ ವಿಕೆಟ್ ಉರುಳಿದರೂ ರಾಚೆಲ್ ಎದೆಗುಂದದೆ ಬ್ಯಾಟ್ ಬೀಸಿದರು. ಎಲಿಸ್ ಪೆರಿ ಜೊತೆ 51 ರನ್ ಸೇರಿಸಿದ ಅವರು ಬೇತ್ ಮೂನಿ ಜೊತೆ ಮುರಿಯದ ನಾಲ್ಕನೇ ವಿಕೆಟ್‌ಗೆ 74 ರನ್ ಕಲೆ ಹಾಕಿದರು.

ಸ್ಟೆಫಾನಿ ದಿಟ್ಟ ಬ್ಯಾಟಿಂಗ್

ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಪದೇ ಪದೇ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಸ್ಟೆಫಾನಿ ಟೇಲರ್ ಮಾತ್ರ ದಿಟ್ಟ ಆಟವಾಡಿದರು. ತಂಡ ನಾಲ್ಕು ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟರ್ ಮತ್ತು ಹೇಲಿ ಮ್ಯಾಥ್ಯೂಸ್ ಮತ್ತು ಮೂರನೇ ಕ್ರಮಾಂಕದ ಕಿಸಿಯಾ ನೈಟ್ ಅವರ ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್‌ನಲ್ಲಿದ್ದ ಸ್ಟೆಫಾನಿ ಅವರಿಗೆ ಜೊತೆ ನೀಡಿದ ಡಿಯಾಂಡ್ರ ದಾಟಿನ್ ಹಾಗೂ ಶೆಮೈನ್ ಕ್ಯಾಂಬೆಲ್ ಸ್ವಲ್ಪ ಪ್ರತಿರೋಧ ಒಡ್ಡಿದರು.

ಉಳಿದ ಯಾರಿಗೂ ನಿರೀಕ್ಷೆಗೆ ತಕ್ಕಂತೆ ಅಡಲು ಸಾಧ್ಯವಾಗಲಿಲ್ಲ. ಮೂವರು ಶೂನ್ಯಕ್ಕೆ ಔಟಾದರೆ ಮೂವರಿಗೆ ಎರಡಂಕಿ ಮೊತ್ತ ದಾಟಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT