ಮಂಗಳವಾರ, ಏಪ್ರಿಲ್ 20, 2021
32 °C
ಇಂಗ್ಲೆಂಡ್ ಎದುರಿನ ಸರಣಿಯಲ್ಲಿ 2–1ರ ಮನ್ನಡೆ ಗಳಿಸಿದ ಭಾರತ

ಅಶ್ವಿನ್–ಪಟೇಲ್ ದರಬಾರಿನಲ್ಲಿ ಬಸವಳಿದ ರೂಟ್ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಎರಡು ದಿನಗಳ ಆಟದಲ್ಲಿ ಒಟ್ಟು ಮೂವತ್ತು ವಿಕೆಟ್‌ಗಳು ಪತನವಾದ ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭರ್ಜರಿ ಜಯ ದಾಖಲಿಸಿತು. 

ಸ್ಥಳೀಯ ಹೀರೊ ಅಕ್ಷರ್ ಪಟೇಲ್ (32ಕ್ಕೆ5) ಮತ್ತು ಆಫ್‌ಸ್ಪಿನ್ನರ್  ಆರ್. ಅಶ್ವಿನ್ (48ಕ್ಕೆ4) ಅವರಿಬ್ಬರ ಜೊತೆಯಾಟದ ಮುಂದೆ ಇಂಗ್ಲೆಂಡ್ ಬಳಗವು ದೂಳೀಪಟವಾಯಿತು. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹಗಲು–ರಾತ್ರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗವು 10 ವಿಕೆಟ್‌ಗಳ ಜಯ ದಾಖಲಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಸನಿಹ ಸಾಗಿತು.

ಗುರುವಾರ ಊಟದ ವಿರಾಮಕ್ಕೂ ಮುನ್ನವೇ ಭಾರತ ತಂಡವು ಜಯದ ಸನಿಹ ಬಂದು ನಿಂತಿತ್ತು. ಬುಧವಾರ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಅಕ್ಷರ್ ಪಟೇಲ್ ಮೋಡಿಯ ಮುಂದೆ  ಮೊದಲ ಇನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲೌಟ್ ಆಗಿತ್ತು. ದಿನದಾಟದ ಕೊನೆಗೆ ಭಾರತ ತಂಡವು ಮೂರು ವಿಕೆಟ್‌ ನಷ್ಟಕ್ಕೆ 99 ರನ್ ಗಳಿಸಿತ್ತು.

ಎರಡನೇ ದಿನದಾಟದಲ್ಲಿ ಇಂಗ್ಲೆಂಡ್‌ನ ಸಾಂದರ್ಭಿಕ ಬೌಲರ್, ನಾಯಕ ಜೋ ರೂಟ್ ಕೇವಲ ಎಂಟು ರನ್‌ಗಳನ್ನು ನೀಡಿ ಐದು ವಿಕೆಟ್‌ ಕಬಳಿಸಿದ್ದರಿಂದ ಭಾರತ ತಂಡವು 145 ರನ್‌ಗಳಿಗೆ ಆಲೌಟ್ ಆಯಿತು. ಕೇವಲ 33 ರನ್‌ಗಳ ಮುನ್ನಡೆ ಗಳಿಸಿತು. 

ಮುಳುವಾದ ನೇರ ಎಸೆತಗಳು: ಮೊದಲ ದಿನದಿಂದಲೇ ದೂಳು ಚಿಮ್ಮುತ್ತಿದ್ದ ಪಿಚ್‌ನಲ್ಲಿ ಚೆಂಡು ಹೆಚ್ಚು ಎತ್ತರ ಪುಟಿಯುತ್ತಿರಲಿಲ್ಲ ಮತ್ತು ಮೊನಚಾದ ತಿರುವುಗಳನ್ನೂ ಪಡೆಯುತ್ತಿರಲಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿಯು ಭಾರತದ ಮಧ್ಯಮವೇಗಿಗಳ ಕೈಗೆ ಚೆಂಡನ್ನೇ ಕೊಡಲಿಲ್ಲ.

ಎರಡನೇ ಇನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡಿದ ಅಕ್ಷರ್‌ ಮೊದಲ ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಜ್ಯಾಕ್ ಕ್ರಾಲಿ ಹಾಗೂ ಜಾನಿ ಬೆಸ್ಟೋ ವಿಕೆಟ್ ಉರುಳಿಸಿದರು.  ಮೊದಲ ಇನಿಂಗ್ಸ್‌ನಲ್ಲಿ ಪ್ರಯೋಗಿಸಿದ್ದಂತಹ ನೇರ ಎಸೆತಗಳನ್ನೇ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಹಾಕಿದರು. ಇನ್ನೊಂದು ತುದಿಯಿಂದ ಅಶ್ವಿನ್ ಕೂಡ ಅದೇ ನೀತಿ ಅನುಸರಿಸಿದರು.

 ಒಂಬತ್ತನೇ ಓವರ್‌ನಲ್ಲಿ ಡ್ಯಾಮ್ ಸಿಬ್ಲಿ ಕಟ್ ಮಾಡಲು ಪ್ರಯತ್ನಿಸಿದ ಅಕ್ಷರ್ ಎಸೆತವು ವಿಕೆಟ್‌ಕೀಪರ್ ರಿಷಭ್‌ ಪಂತ್‌ಗೆ ಕ್ಯಾಚ್ ಆಯಿತು. ಈ ಹಂತದಲ್ಲಿ ನಾಯಕ ಜೋ ರೂಟ್ (19 ರನ್) ಮತ್ತು ಬೆನ್ ಸ್ಟೋಕ್ಸ್‌ (25 ರನ್) ಒಂದಿಷ್ಟು ದಿಟ್ಟತನ ತೋರುವ ಪ್ರಯತ್ನ ಮಾಡಿದರು. ಇಬ್ಬರಿಗೂ ಕೆಲಕಾಲ ಅದೃಷ್ಟವೂ ಜೊತೆಗೂಡಿತು.ಏಕೆಂದರೆ, ಇಬ್ಬರೂ ತಲಾ ಒಂದು ಬಾರಿ ಯುಡಿಆರ್‌ಎಸ್‌ನಲ್ಲಿ ಜೀವದಾನ ಪಡೆದರು.

ಆದರೂ ಅಶ್ವಿನ್ ಚಾಣಾಕ್ಷ ಸ್ಪಿನ್‌ಗೆ ಬೆನ್ ಸ್ಟೋಕ್ಸ್‌ ಎಲ್‌ಬಿ ಬಲೆಗೆ ಬಿದ್ದರು. 31 ರನ್‌ಗಳ ಜೊತೆಯಾಟವು ಮುರಿದುಬಿತ್ತು.  ಜೋ ರೂಟ್ ಅವರ ವಿಕೆಟ್‌ ಅನ್ನು ಅಕ್ಷರ್ ಕಬಳಿಸಿದರು. ನಂತರ ಒಲಿ ಪೋಪ್ (12 ರನ್) ಬಿಟ್ಟರೆ ಉಳಿದವರಾರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. 24ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 400ನೇ ವಿಕೆಟ್ ಪಡೆದ ಸಾಧನೆ ಮಾಡಿದರು.

ಕೊನೆಯ ಬ್ಯಾಟ್ಸ್‌ಮನ್ ಜೇಮ್ಸ್‌ ಆ್ಯಂಡರ್ಸನ್ ಅವರ ವಿಕೆಟ್‌ ಅನ್ನು ಎಡಗೈ ಸ್ಪಿನ್ನರ್  ವಾಷಿಂಗ್ಟನ್ ಸುಂದರ್  ತಮ್ಮ ಬುಟ್ಟಿಗೆ ಹಾಕಿಕೊಂಡರು.

ಅಲ್ಪಮೊತ್ತದ ಗುರಿ ಬೆನ್ನತ್ತಿದ್ದ ಭಾರತವನ್ನು ರೋಹಿತ್ ಶರ್ಮಾ (ಔಟಾಗದೆ 25) ಮತ್ತು ಶುಭಮನ್ ಗಿಲ್ (ಔಟಾಗದೆ 15) ನಿರಾಯಾಸವಾಗಿ ಗೆಲುವಿನ ದಡ ಸೇರಿಸಿದರು. ವಿಜಯದ ಹೊಡೆತದಲ್ಲಿ ಸಿಕ್ಸರ್ ಬಾರಿಸಿದ ರೋಹಿತ್ ಮಿಂಚಿದರು.

ಮೊದಲ ಇನಿಂಂಗ್ಸ್‌ನಲ್ಲಿ ರೋಹಿತ್ (66 ರನ್) ಅರ್ಧಶತಕ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು