ಮಂಗಳವಾರ, ಜೂನ್ 15, 2021
27 °C

ಬಾಬರ್, ಅಲಿಸಾ ತಿಂಗಳ ಆಟಗಾರರು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ದುಬೈ: ಪಾಕಿಸ್ತಾನದ ನಾಯಕ ಬಾಬರ್ ಆಜಂ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ವಿಕೆಟ್ ಕೀಪರ್ ಅಲಿಸಾ ಹೀಲಿ ಅವರನ್ನು ತಿಂಗಳ ಆಟಗಾರರಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಆಯ್ಕೆ ಮಾಡಿದೆ. ಏಪ್ರಿಲ್‌ನಲ್ಲಿ ಇಬ್ಬರೂ ತೋರಿದ ಅಮೋಘ ಸಾಮರ್ಥ್ಯಕ್ಕೆ ಈ ಮನ್ನಣೆ ದೊರಕಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಕ್ರಿಕೆಟ್ ಸರಣಿಗಳ ಮೂರೂ ಮಾದರಿಗಳಲ್ಲಿ ಬಾಬರ್ ಆಜಂ ಅತ್ಯುತ್ತಮ ಆಟ ಆಡಿದ್ದರು. ಕ್ರಿಕೆಟ್ ಪ್ರಿಯರು ಮತ್ತು ಐಸಿಸಿ ಮತದಾರರ ಅಕಾಡೆಮಿ ಅವರ ಪರವಾಗಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದೆ.

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 82 ಎಸೆತಗಳಲ್ಲಿ 94 ರನ್ ಗಳಿಸಿರುವುದು ಅವರಿಗೆ 13 ರೇಟಿಂಗ್ ಪಾಯಿಂಟ್‌ಗಳನ್ನು ತಂದುಕೊಟ್ಟಿತು. ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅವರಿಗೆ ಜೀವನಶ್ರೇಷ್ಠ 865 ಪಾಯಿಂಟ್ ಲಭಿಸಿತ್ತು. ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 59 ಎಸೆತಗಳಲ್ಲಿ 122 ರನ್ ಗಳಿಸಿದ್ದ ಅವರು ಬೃಹತ್ ಮೊತ್ತವನ್ನು ಬೆನ್ನತ್ತಿ ಪಂದ್ಯ ಮತ್ತು ಸರಣಿ ಗೆಲ್ಲಲು ನೆರವಾಗಿದ್ದರು.

‘ವಿಶ್ವದ ಏಕದಿನ ಮತ್ತು ಟಿ20 ಕ್ರಿಕೆಟ್‌ ಈಗ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ. ಒಂದೆಡೆ ಭರ್ಜರಿ ಹೊಡೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ಕಂಗೆಡಿಸುತ್ತಿದ್ದರೆ ಬಾಬರ್ ಆಜಂ ಅವರಂಥ ಆಟಗಾರರು ಸೊಗಸಾಗಿ ಬ್ಯಾಟ್ ಬೀಸಿ ಆಟಕ್ಕೆ ಮೋಹಕತೆ ತುಂಬುತ್ತಿದ್ದಾರೆ. ಅವರು ಈ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ’ ಎಂದು ಐಸಿಸಿ ಮತದಾರರ ಅಕಾಡೆಮಿಯನ್ನು ಪ್ರತಿನಿಧಿಸುತ್ತಿರುವ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಶೈಲಿಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಇರುವ ಅಲಿಸಾ ಹೀಲಿ, ನ್ಯೂಜಿಲೆಂಡ್ ಎದುರು ಈಚೆಗೆ ನಡೆದ ಸರಣಿಯಲ್ಲಿ ಅಮೋಘ ಆಟವಾಡಿದ್ದರು. ಮೂರು ಏಕದಿನ ಪಂದ್ಯಗಳಲ್ಲಿ ಅವರು 155 ರನ್ ಗಳಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು