ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ಎದುರಿನ ಮೊದಲ ಟ್ವೆಂಟಿ–20 ಕ್ರಿಕೆಟ್‌: ವೆಸ್ಟ್ ಇಂಡೀಸ್‌ ಜಯಭೇರಿ

Last Updated 17 ಡಿಸೆಂಬರ್ 2018, 11:19 IST
ಅಕ್ಷರ ಗಾತ್ರ

ಸಿಲೆಟ್‌, ಬಾಂಗ್ಲಾದೇಶ: ಶೆಲ್ಡನ್‌ ಕಾಟ್ರೆಲ್‌ (28ಕ್ಕೆ4) ಅವರ ವೈಯಕ್ತಿಕ ಶ್ರೇಷ್ಠ ಬೌಲಿಂಗ್ ಮತ್ತು ವಿಕೆಟ್‌ ಕೀಪರ್‌ ಶಾಯ್‌ ಹೋಪ್‌ (55; 23ಎ, 3ಬೌಂ, 6ಸಿ) ಅವರ ಸ್ಫೋಟಕ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಬಾಂಗ್ಲಾದೇಶ ಎದುರಿನ ಮೊದಲ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿದೆ.

ಸಿಲೆಟ್‌ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ಬಾಂಗ್ಲಾ 19 ಓವರ್‌ಗಳಲ್ಲಿ 129ರನ್‌ಗಳಿಗೆ ಆಲೌಟ್‌ ಆಯಿತು. 130ರನ್‌ಗಳ ಗೆಲುವಿನ ಗುರಿಯನ್ನು ವಿಂಡೀಸ್‌ 10.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಶಕೀಬ್‌ ಅಲ್‌ ಹಸನ್‌ ಬಳಗ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ತಮಿಮ್‌ ಇಕ್ಬಾಲ್‌ (5), ಲಿಟನ್‌ ದಾಸ್‌ (6), ಸೌಮ್ಯ ಸರ್ಕಾರ್‌ (5) ಮತ್ತು ಮುಷ್ಫಿಕರ್‌ ರಹೀಮ್‌ (5) ವಿಕೆಟ್‌ ನೀಡಲು ಅವಸರಿಸಿದರು! ಮಹಮದುಲ್ಲಾ (17;18ಎ, 2ಬೌಂ) ಕೂಡಾ ಬೇಗನೆ ಪೆವಿಲಿಯನ್‌ ಸೇರಿದರು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ನಾಯಕ ಶಕೀಬ್‌ ಎದೆಗುಂದಲಿಲ್ಲ. ಏಕಾಂಗಿ ಹೋರಾಟ ನಡೆಸಿದ ಅವರು ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. 43 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 61ರನ್‌ ಗಳಿಸಿದ ಶಕೀಬ್‌, 18ನೇ ಓವರ್‌ನಲ್ಲಿ ಶೆಲ್ಡನ್‌ ಕಾಟ್ರೆಲ್‌ಗೆ ವಿಕೆಟ್‌ ಒಪ್ಪಿಸಿದರು.

ಅಬ್ಬರದ ಆರಂಭ: ಗುರಿ ಬೆನ್ನಟ್ಟಿದ ವಿಂಡೀಸ್‌ ತಂಡಕ್ಕೆ ಎವಿನ್‌ ಲೂಯಿಸ್‌ (18; 11ಎ, 1ಬೌಂ, 1ಸಿ) ಮತ್ತು ಶಾಯ್‌ ಹೋಪ್‌ ಅಬ್ಬರ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 20 ಎಸೆತಗಳಲ್ಲಿ 51ರನ್‌ ಸೇರಿಸಿತು. ಇವರು ಔಟಾದ ನಂತರ ನಿಕೋಲಸ್‌ ಪೂರಣ್‌ (ಔಟಾಗದೆ 23;17ಎ, 3ಬೌಂ) ಮತ್ತು ಕೀಮೊ ಪಾಲ್‌ (ಔಟಾಗದೆ 28; 14ಎ, 1ಬೌಂ, 3ಸಿ) ಮಿಂಚಿನ ಆಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ: 19 ಓವರ್‌ಗಳಲ್ಲಿ 129 (ಶಕೀಬ್ ಅಲ್‌ ಹಸನ್‌ 61, ಮಹಮದುಲ್ಲಾ 12, ಆರಿಫುಲ್‌ ಹಕ್‌ 17; ಒಶಾನೆ ಥಾಮಸ್‌ 33ಕ್ಕೆ1, ಶೆಲ್ಡನ್‌ ಕಾಟ್ರೆಲ್‌ 28ಕ್ಕೆ4, ಕೀಮೊ ಪಾಲ್‌ 23ಕ್ಕೆ2, ಕಾರ್ಲೊಸ್‌ ಬ್ರಾಥ್‌ವೇಟ್‌ 13ಕ್ಕೆ1, ಫಾಬಿಯಾನ್‌ ಅಲೆನ್‌ 19ಕ್ಕೆ1).

ವೆಸ್ಟ್‌ ಇಂಡೀಸ್‌: 10.5 ಓವರ್‌ಗಳಲ್ಲಿ 2 ವಿಕೆಟ್‌ಗೆ 130 (ಎವಿನ್‌ ಲೂಯಿಸ್‌ 18, ಶಾಯ್‌ ಹೋಪ್‌ 55, ನಿಕೋಲಸ್‌ ಪೂರಣ್‌ ಔಟಾಗದೆ 23, ಕೀಮೊ ಪಾಲ್‌ ಔಟಾಗದೆ 28; ಮೊಹಮ್ಮದ್‌ ಸೈಫುದ್ದೀನ್‌ 13ಕ್ಕೆ1, ಮಹಮದುಲ್ಲಾ 13ಕ್ಕೆ1).

ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 8 ವಿಕೆಟ್‌ ಜಯ. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯಶ್ರೇಷ್ಠ: ಶೆಲ್ಡನ್‌ ಕಾಟ್ರೆಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT