ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ 64 ಅಭ್ಯರ್ಥಿಗಳಿಗೆ ಠೇವಣಿ ನಷ್ಟ

ಜಿಲ್ಲೆಯ ಐದು ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿದ್ದ 77 ಅಭ್ಯರ್ಥಿಗಳ ಪೈಕಿ 13 ಹುರಿಯಾಳುಗಳಿಗೆ ಮಾತ್ರ ಠೇವಣಿ ಉಳಿತಾಯ
Last Updated 17 ಮೇ 2018, 8:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳ ಸ್ಪರ್ಧಾ ಕಣಕ್ಕಿಳಿದು ತೊಡೆ ತಟ್ಟಿದ 77 ಅಭ್ಯರ್ಥಿಗಳ ಪೈಕಿ 64 ಹುರಿಯಾಳುಗಳಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರಮುಖ ಅಭ್ಯರ್ಥಿಗಳ ಪೈಕಿ 13 ಜನರಿಗೆ ಮಾತ್ರ ಠೇವಣಿ ಉಳಿದಿದೆ.

ಠೇವಣಿ ಗಿಟ್ಟಿಸಿಕೊಳ್ಳಲಾಗದವರ ಪಟ್ಟಿಯಲ್ಲಿ ಶಾಸಕರು, ವಿವಿಧ ಪಕ್ಷಗಳ ಅಭ್ಯರ್ಥಿಗಳ ಜತೆಗೆ ಅತಿ ಹೆಚ್ಚಿನ ಸಂಖ್ಯೆಯ ಪಕ್ಷೇತರರು ಇದ್ದಾರೆ. ಕಳೆದ ವಿಧಾನಸಭೆ (2013) ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸ್ಪರ್ಧಾ ಕಣದಲ್ಲಿದ್ದ 83 ಅಭ್ಯರ್ಥಿಗಳ ಪೈಕಿ 72 ಮಂದಿ ಠೇವಣಿ ಕಳೆದುಕೊಂಡಿದ್ದರು.

ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ತಲಾ ಮೂರು ಮತ್ತು ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರಗಳಲ್ಲಿ ತಲಾ ಇಬ್ಬರು ಅಭ್ಯರ್ಥಿಗಳಿಗೆ ಠೇವಣಿ ಉಳಿದಿದೆ. ಠೇವಣಿ ಉಳಿಸಿಕೊಂಡ ಬಹುತೇಕರಲ್ಲಿ ಪ್ರಮುಖ ಪಕ್ಷಗಳ ಹುರಿಯಾಳುಗಳಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಣದಲ್ಲಿದ್ದ ಕೆ.ವಿ.ನವೀನ್ ಕಿರಣ್ ಒಬ್ಬರೇ ಜಿಲ್ಲೆಯಲ್ಲಿ ಈ ಬಾರಿ ಸ್ಪರ್ಧಿಸಿದ್ದ 35 ಪಕ್ಷೇತರ ಅಭ್ಯರ್ಥಿಗಳ ಪೈಕಿ ಠೇವಣಿ ಉಳಿಸಿಕೊಂಡ ಏಕೈಕ ಹುರಿಯಾಳು.

ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಈ ಬಾರಿ ಚಿಂತಾಮಣಿ ಕ್ಷೇತ್ರದ ಚುನಾವಣಾ ಕಣದಲ್ಲಿ ಅತಿ ಹೆಚ್ಚು (22) ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆ ಪೈಕಿ 20 ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿದೆ. ಜೆಡಿಎಸ್ ಅಭ್ಯರ್ಥಿ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಭಾರತೀಯ ಪ್ರಜಾ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರಿಗೆ ಮಾತ್ರ ಠೇವಣಿ ಉಳಿಸಿದಿದೆ.

ಪ್ರಮುಖ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ವಾಣಿ ಕೃಷ್ಣಾರೆಡ್ಡಿ ಅವರು ತಮ್ಮ ಎರಡನೇ ಚುನಾವಣೆಯಲ್ಲಿ ಕೂಡ ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ನಾ.ಶಂಕರ್ ಅವರಿಗೆ ಸಹ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಬಾಗೇಪಲ್ಲಿ ಸ್ಪರ್ಧಾ ಕಣದಲ್ಲಿದ್ದ 15 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ, ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಮತ್ತು ಜೆಡಿಎಸ್ ಅಭ್ಯರ್ಥಿ, ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅವರಿಗೆ ಮಾತ್ರ ಠೇವಣಿ ಉಳಿದಿದೆ. ಉಳಿದಂತೆ 12 ಹುರಿಯಾಳುಗಳಿಗೆ ಠೇವಣಿ ವಾಪಸ್‌ ಬರದಂತಹ ಫಲಿತಾಂಶ ಲಭಿಸಿದೆ. ಈ ಪೈಕಿ ಬಿಜೆಪಿ ಅಭ್ಯರ್ಥಿ, ನಟ ಪಿ.ಸಾಯಿಕುಮಾರ್, ಜೆಡಿಎಸ್ ಬಂಡಾಯ ಅಭ್ಯರ್ಥಿ ಗುಂಜೂರು ಶ್ರೀನಿವಾಸ ರೆಡ್ಡಿ ಪ್ರಮುಖರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಣದಲ್ಲಿದ್ದ 15 ಹುರಿಯಾಳುಗಳ ಪೈಕಿ ಶಾಸಕ ಎಂ.ರಾಜಣ್ಣ ಸೇರಿದಂತೆ 13 ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ, ವಿ.ಮುನಿಯಪ್ಪ, ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಅವರು ಉತ್ತಮ ಪೈಪೋಟಿ ಮೂಲಕ ಠೇವಣಿ ಕಾಯ್ದುಕೊಂಡಿದ್ದಾರೆ.

ಈ ಬಾರಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 13 ಜನರು ‘ಅದೃಷ್ಟ’ ಪರೀಕ್ಷೆಗೆ ಇಳಿದಿದ್ದರು. ಇವರಲ್ಲಿ ಶಿವಶಂಕರ್ ರೆಡ್ಡಿ ಅವರು ಸತತ ಐದನೇ ಬಾರಿಗೆ ‘ವಿಜಯಲಕ್ಷ್ಮೀ’ ಒಲಿಸಿಕೊಳ್ಳುವ ಮೂಲಕ ಠೇವಣಿ ಉಳಿಸಿಕೊಂಡವರಲ್ಲಿ ಮೊದಲಿಗರಾಗಿದ್ದಾರೆ. ಜತೆಗೆ ಉತ್ತಮ ಪೈಪೋಟಿ ನೀಡಿದ ಜೆಡಿಎಸ್ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಮತ್ತು ಬಿಜೆಪಿ ಹುರಿಯಾಳು ಕೆ.ಜೈಪಾಲ್ ರೆಡ್ಡಿ ಅವರಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದಂತೆ 10 ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 12 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದರು. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ಕೆ.ಸುಧಾಕರ್ ಮತ್ತು ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಕೆ.ಬಿ.ಬಚ್ಚೇಗೌಡ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ವಿ.ನವೀನ್ ಕಿರಣ್ ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಠೇವಣಿ ಕಳೆದುಕೊಂಡ ಒಂಬತ್ತು ಅಭ್ಯರ್ಥಿಗಳ ಪೈಕಿ ಬಿಜೆಪಿ ಹುರಿಯಾಳು ಡಾ.ಜಿ.ವಿ.ಮಂಜುನಾಥ್ ಪ್ರಮುಖರು.


ಅಂಕಿಅಂಶಗಳು..

97

ನಾಮಪತ್ರಗಳು ಸಲ್ಲಿಕೆ

2
ನಾಮಪತ್ರ ತಿರಸ್ಕೃತ

95
ಕ್ರಮಬದ್ಧಗೊಂಡ ನಾಮಪತ್ರಗಳು

18
ಉಮೇದುವಾರಿಕೆ ಹಿಂಪಡೆದವರು

77
ಸ್ಪರ್ಧಾ ಕಣದಲ್ಲಿ ಉಳಿದವರು

64
ಠೇವಣಿ ನಷ್ಟವಾದ ಅಭ್ಯರ್ಥಿಗಳು

ಏನಿದು ಠೇವಣಿ ನಷ್ಟ?

ಚುನಾವಣೆಗಳಲ್ಲಿ ಪಕ್ಷೇತರರ ಅಭ್ಯರ್ಥಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಠೇವಣಿ ಪದ್ಧತಿ ಜಾರಿಗೆ ತಂದಿದೆ. ಪ್ರಸ್ತುತ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸುವ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ₨5000 ಮತ್ತು ಇತರೆ ವರ್ಗದವರು ₨10 ಸಾವಿರ ಠೇವಣಿ ಮೊತ್ತವನ್ನು ನಾಮಪತ್ರದೊಂದಿಗೆ ಚುನಾವಣಾಧಿಕಾರಿ ಅವರಿಗೆ ಸಲ್ಲಿಸಬೇಕು. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳ ಆರನೇಯ ಒಂದು ಭಾಗ ಮತ ಪಡೆದ ಅಭ್ಯರ್ಥಿಗಳಿಗೆ ಠೇವಣಿ ಮೊತ್ತ ಹಿಂದಿರುಗಿಸಲಾಗುತ್ತದೆ. ಕಳಪೆ ಸಾಧನೆ ತೋರುವವರ ಠೇವಣಿ ಮೊತ್ತವನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ನೋಟಾ: ಶಿಡ್ಲಘಟದಲ್ಲಿ ಹೆಚ್ಚು, ಬಾಗೇಪಲ್ಲಿಯಲ್ಲಿ ಕಡಿಮೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ 4,013 ‘ನೋಟಾ’ (ಮೇಲಿನ ಯಾರಿಗೂ ಮತವಿಲ್ಲ) ಮತಗಳು ಚಲಾವಣೆಗೊಂಡಿದ್ದು, ಈ ಪೈಕಿ ಶಿಡ್ಲಘಟ್ಟ ಮೊದಲ ಸ್ಥಾನದಲ್ಲಿದ್ದರೆ, ಬಾಗೇಪಲ್ಲಿ ಕೊನೆಯ ಸ್ಥಾನದಲ್ಲಿದೆ. ವಿಶೇಷವೆಂದರೆ ಎಲ್ಲ ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿರುವ ಬಹುತೇಕ ಸಣ್ಣಪುಟ್ಟ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳಿಗಿಂತಲೂ ನೋಟಾಗೆ ಹೆಚ್ಚು ಮತಗಳನ್ನು ಮತದಾರ ಚಲಾಯಿಸಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಸ್ಪರ್ಧಿಸಿದ 22 ಅಭ್ಯರ್ಥಿಗಳ ಪೈಕಿ 17 ಅಭ್ಯರ್ಥಿಗಳು ಒಟ್ಟು ಚಲಾವಣೆಯಾದ ನೋಟಾ ಮತಗಳಿಗಿಂತಲೂ ಕಡಿಮೆ ಮತಗಳನ್ನು ಗಳಿಸಿದ್ದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT