ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಅಲೆಯಲ್ಲಿ ತೇಲಿದ ದಿಗ್ಗಜರು

ಬಿಯುಸಿಸಿ 100 ನಾಟ್‌ಔಟ್
Last Updated 16 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಆ ದಿನ ಬಿಇಎಲ್ ಮೈದಾನದಲ್ಲಿ ನಡೆದಿದ್ದ ಪ್ರಥಮ ಡಿವಿಷನ್ ಪಂದ್ಯದಲ್ಲಿ ವಿಕೆಟ್‌ಕೀಪಿಂಗ್ ಮಾಡುವ ಹೊಣೆ ವಹಿಸಲಾಗಿತ್ತು.ಆಗಿನ್ನೂ 16 ವರ್ಷದವನಾಗಿದ್ದೆ. ಬಿಯುಸಿಸಿ ಪರವಾಗಿ ಆಡುತ್ತಿದ್ದೆ. ಆದರೆ ವಿಶ್ವಪ್ರಸಿದ್ಧ ಇಬ್ಬರು ವಿಕೆಟ್‌ಕೀಪರ್‌ಗಳಾದ ಸೈಯದ್ ಕಿರ್ಮಾನಿ ಮತ್ತು ಸದಾನಂದ ವಿಶ್ವನಾಥ್ ಅವರೂ ನಮ್ಮ ತಂಡದಲ್ಲಿ ಆಡುತ್ತಿದ್ದರು. ಅವರು ಫೀಲ್ಡಿಂಗ್ ಮಾಡುತ್ತಿದ್ದರು. ಯುವ ಪೀಳಿಗೆಗೆ ಒಂದು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ವರ್ಗಾಯಿಸಿದ ಪ್ರಕ್ರಿಯೆ ಅದಾಗಿತ್ತು. ತಮ್ಮ ನಂತರವೂ ಒಂದು ಕ್ಲಬ್‌ ಬೆಳೆಯಬೇಕು ಎಂಬ ಉದಾತ್ತ ಚಿಂತನೆ ಹಿರಿಯರದ್ದಾಗಿತ್ತು. ಈ ಕ್ಲಬ್‌ನಲ್ಲಿ ಕ್ರಿಕೆಟ್‌ ಜೊತೆಗೆ ಕಲಿತ ಅಮೂಲ್ಯ ಮೌಲ್ಯಗಳು ಇವು’–

ಶುಕ್ರವಾರ ನಡೆದ ಬೆಂಗಳೂರು ಯುನೈಟೆಡ್ ಕ್ರಿಕೆಟ್‌ ಕ್ಲಬ್‌ನ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾ ಗಿದ್ದ ‘ದ ನೈಟ್‌ ಆಫ್ ಚಾಂಪಿಯನ್ಸ್‌’ ಕಾರ್ಯಕ್ರಮದಲ್ಲಿ ಕ್ಲಬ್‌ ಕ್ರಿಕೆಟ್‌ನ ಮಹತ್ವದ ಕುರಿತ ಸಂವಾದದಲ್ಲಿ ಅವರು ನೆನಪಿನ ದೋಣಿಯಲ್ಲಿ ವಿಹರಿಸಿದರು. ಕ್ಲಬ್‌ನ ಅಧ್ಯಕ್ಷರೂ ಆಗಿರುವ ದ್ರಾವಿಡ್ ತಮ್ಮ ಯಶಸ್ವಿ ಕ್ರಿಕೆಟ್ ಪಯಣಕ್ಕೆ ಬಿಯುಸಿಸಿಯ ಕಾಣಿಕೆಯನ್ನು ನೆನಪಿಸಿಕೊಂಡರು.

‘ಇನ್ನೊಂದು ಸಲ ಎಚ್‌ಎಂಟಿ ಮೈದಾನದಲ್ಲಿ ಐದನೇ ಡಿವಿಷನ್ ಪಂದ್ಯ ನಡೆಯುತ್ತಿತ್ತು. ಆಗ ಬಿಯುಸಿಸಿಗೆ ಎಸ್‌. ಮಹೇಂದ್ರ ನಾಯಕರಾಗಿದ್ದರು. ಮಹೇಂದ್ರ ಸರ್ ಅವರಂತೆ ಚೆಂಡನ್ನು ಸ್ಪಿನ್ ಮಾಡುವ ಮತ್ತೊಬ್ಬ ಬೌಲರ್‌ನನ್ನು ಅದುವರೆಗೂ ನಾನು ನೋಡಿರಲಿಲ್ಲ. ಆ ಪಂದ್ಯದಲ್ಲಿ ಅವರು ಐದು ವಿಕೆಟ್ ಗಳಿಸಿದರು. ಆಗಿನ್ನೂ ಶಾಲಾ ಬಾಲಕನಾಗಿದ್ದ ನನಗೆ ಅಬ್ಬಾ ಇಂತಹ ಸ್ಪಿನ್ ಎಸೆತಗಳನ್ನು ಎದುರಿಸಿ ಬ್ಯಾಟಿಂಗ್ ಮಾಡುವುದು ಹೇಗಪ್ಪ? ಎನಿಸಿತ್ತು. ಆದರೆ ನಾನು ಅವರದ್ದೇ ತಂಡದಲ್ಲಿದ್ದದ್ದು ಅದೃಷ್ಟ’ ಎಂದು ನಕ್ಕರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ, ‘ನಾನು ವಿವಿ ಪುರಂ ಕ್ಲ್‌ನಲ್ಲಿ ಮೊದಲು ಆಡುತ್ತಿದ್ದೆ. ಆಮೇಲೆ ಅದನ್ನು ಬಿಟ್ಟು ಯಂಗ್ ಕ್ರಿಕೆಟರ್ಸ್‌ ಸೇರಿಕೊಂಡೆ. ಆಗ ಬಿಯುಸಿಸಿ, ಸ್ವಸ್ತಿಕ್ ಯೂನಿಯನ್ ಮತ್ತಿತರ ಕ್ಲಬ್‌ಗಳ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗುತ್ತಿದ್ದರು. ಆದರೆ, ಯಂಗ್‌ ಕ್ರಿಕೆಟರ್ಸ್‌ನಿಂದಲೇ ರಾಜ್ಯ ತಂಡಕ್ಕೆ ಹೋಗುತ್ತೇನೆ ಎಂಬ ಛಲದಿಂದ ಆಡಿದೆ. ನಮ್ಕ ಕಾಲದಲ್ಲಿ ಕ್ಲಬ್‌ಗಳಿಗೆ ಸೇರಿದಾಗ ಮೊದಲು ಸಿಗುತ್ತಿದ್ದದ್ದು ಪಂದ್ಯಗಳಲ್ಲಿ ಸ್ಕೋರಿಂಗ್ ಮಾಡುವ ಕಾರ್ಯ. ಜಯನಗರದಿಂದ ಐಟಿಐ ಮೈದಾನಕ್ಕೆ ಸೈಕಲ್ ಅಥವಾ ಬಸ್ ಮೂಲಕ ಹೋಗುತ್ತಿದ್ದೆ. ಸ್ಕೋರಿಂಗ್ ಮಾಡುತ್ತಿದ್ದೆ. ಆದರೆ ಕ್ಲಬ್‌ಗಾಗಿ ಪ್ರಥಮ ಡಿವಿಷನ್ ನಲ್ಲಿ ಆಡಲಿಲ್ಲ.

ಆದರೆ ವಿಜಯಾ ಬ್ಯಾಂಕ್‌ ತಂಡವನ್ನು ಪ್ರತಿನಿಧಿಸಿದ್ದೆ. ಆದರೆ ಇಂದಿನ ಹುಡುಗರಿಗೆ ಸ್ಕೋರಿಂಗ್ ಮಾಡುವ ಅನುಭವ ಇರುವುದು ಕಡಿಮೆ. ಈಗ ಬದಲಾಗಿದೆ’ ಎಂದರು.

ಸಂವಾದದಲ್ಲಿದ್ದ ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್, ‘ ನಾನು ಬಿಯುಸಿಸಿಗೆ ಸೇರಿದಾಗ ರಾಜ್ಯ ತಂಡದ 6–7 ಪ್ರಮುಖ ಆಟಗಾರರು ಅಲ್ಲಿದ್ದರು. ಮಂಗಳೂರಿನಿಂದ ಬಂದಿದ್ದ ನನಗೆ ಅದೊಂದು ಅಭೂತಪೂರ್ವ ಅನುಭವ ಸ್ಟುವರ್ಟ್ ಬಿನ್ನಿ, ಜಿ.ಕೆ. ಸರ್ ಅವರ ಒಡನಾಟ ಲಭಿಸಿತ್ತು’ ಎಂದು ನೆನಪಿಸಿಕೊಂಡರು.

‘ಮಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡುವಾಗ ಸ್ಕೋರಿಂಗ್ ಕೂಡ ಮಾಡಿದ್ದೆ. ಸಿಮೆಂಟ್ ವಿಕೆಟ್‌ (ಪಿಚ್) ಅನ್ನು ಗುಡಿಸಿ ಸ್ವಚ್ಛ ಮಾಡಿ, ಅದರ ಮೇಲೆ ಮ್ಯಾಟ್ ಹಾಕುತ್ತಿದ್ದೆವು.

ಪಂದ್ಯದ ನಂತರ ಮತ್ತೆ ಎಲ್ಲವನ್ನೂ ತೆಗೆದಿಟ್ಟು ಮರಳುತ್ತಿದ್ದೆವು. ಇಂತಹ ಕೆಲಸಗಳಿಂದ ಕಲಿಕೆಯು ಆಪ್ತವಾಗುತ್ತದೆ. ಆಟದ ಮೇಲೆ ಪ್ರೀತಿ ಹೆಚ್ಚುತ್ತ ಹೋಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಕ್ಲಬ್‌ಗಳಲ್ಲಿ ಸಾಕಷ್ಟು ಸೌಲಭ್ಯಗಳು ಬಂದಿವೆ. ಆದ್ದರಿಂದ ಈಗಿಯ ಆಟಗಾರರು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದ ಕಡಿಮೆಯಾಗಿದೆ. ಅದು ತಪ್ಪಲ್ಲ. ಅವರು ತಮ್ಮ ಸಂಪೂರ್ಣ ಸಮಯವನ್ನು ಆಟದ ಮೇಲೆಯೇ ವಿನಿಯೋಗಿಸುತ್ತಿದ್ದಾರೆ’ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಆಟಗಾರ ಕರುಣ್ ನಾಯರ್, ‘ನಾನು 14 ವರ್ಷದವನಿದ್ದಾಗ ಫಜಲ್ ಕಣ್ಣಿಗೆ ಬಿದ್ದೆ. ಅವರು ಒಡೆಯರ್ ಕ್ರಿಕೆಟ್‌ ಕ್ಲಬ್‌ ಗೆ ಸೇರಿಸಿದರು.

ಅಲ್ಲಿಂದಲೇ ನಾನು ಮೊದಲ ಡಿವಿಷನ್ ಟೂರ್ನಿಗೆ ಪದಾರ್ಪಣೆ ಮಾಡಿದೆ. ನಾನು ನಿಜಕ್ಕೂ ಅದೃಷ್ಟವಂತ. ಬಹಳಷ್ಟು ಅವಕಾಶಗಳು ಲಭಿಸಿವೆ’ ಎಂದರು.

ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಸುಜಿತ್ ಸೋಮಸುಂದರ, ರೋಜರ್ ಬಿನ್ನಿ, ಸದಾನಂದ ವಿಶ್ವನಾಥ್, ಜಿ.ಆರ್. ವಿಶ್ವನಾಥ್, ಸೈಯದ್ ಕಿರ್ಮಾನಿ ಮತ್ತಿತರರು ಹಾಜರಿದ್ದರು.

*
1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಇಬ್ಬರು ಬಿಯುಸಿಸಿ ಆಟಗಾರರು ಇದ್ದರು. ಅವರು ರೋಜರ್ ಬಿನ್ನಿ ಮತ್ತು ಸೈಯದ್ ಕಿರ್ಮಾನಿ. ಇಂತಹ ದಾಖಲೆ ಯಾವುದೇ ತಂಡದಲ್ಲಿಯೂ ಇಲ್ಲ. ಇದು ಬಿಯುಸಿಸಿ ಹೆಗ್ಗಳಿಕೆ.
- ರಾಮಚಂದ್ರ ಗುಹಾ, ಇತಿಹಾಸಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT