ಗುರುವಾರ , ನವೆಂಬರ್ 14, 2019
19 °C

ಆಟಗಾರರ ಮುಷ್ಕರದ ಹಿಂದೆ ಪಿತೂರಿ: ಬಾಂಗ್ಲಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ

Published:
Updated:

ಢಾಕಾ: ಸವಲತ್ತುಗಳಿಗಾಗಿ ಆಗ್ರಹಿಸಿ ಬಾಂಗ್ಲಾದೇಶ ಆಟಗಾರರು ನಡೆಸಿದ ಮುಷ್ಕರವನ್ನು ಅಲ್ಲಿಯ ಕ್ರಿಕೆಟ್‌ ಮಂಡಳಿ ತರಾಟೆಗೆ ತೆಗೆದುಕೊಂಡಿದೆ.  ಮುಷ್ಕರದ ಮೂಲಕ ದೇಶದಲ್ಲಿ ಕ್ರಿಕೆಟ್‌ ಅನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ‘ಪಿತೂರಿ’ ಇದು ಎಂದು ಜರಿದಿದೆ. ಆದರೆ ‘ಅಂತರರಾಷ್ಟ್ರೀಯ ಆಟಗಾರರ ಸಂಸ್ಥೆಗಳ ಒಕ್ಕೂಟ(ಎಫ್‌ಐಸಿಎ) ಬಾಂಗ್ಲಾ ಆಟಗಾರರ ಬೆಂಬಲಕ್ಕೆ ಧಾವಿಸಿದೆ.

ಬಾಂಗ್ಲಾ ರಾಷ್ಟ್ರೀಯ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ನೇತೃತ್ವದಲ್ಲಿ ಪ್ರಮುಖ ಆಟಗಾರರು ಸೂಕ್ತ ಸಂಭಾವನೆ, ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ  ಸೋಮವಾರ ಪ್ರತಿಭಟನೆ ನಡೆಸಿದ್ದರು. ಇದು ನವೆಂಬರ್‌ 3ರಂದು ಬಾಂಗ್ಲಾ ತಂಡ ಕೈಗೊಳ್ಳಬೇಕಿದ್ದ ಭಾರತದ ಪ್ರವಾಸದ ಮೇಲೆ ಅನಿಶ್ಚಿತತೆ ಕಾರ್ಮೋಡ ಕವಿಯುವಂತೆ ಮಾಡಿದೆ.

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ (ಬಿಸಿಬಿ) ಅಧ್ಯಕ್ಷ ನಜ್ಮುಲ್‌ ಹಸನ್‌ ಆಟಗಾರರ ನಡೆಯನ್ನು ಟೀಕಿಸಿದ್ದಾರೆ. ‘ಮಂಡಳಿ ಈ ಕುರಿತು ಚರ್ಚೆಗೆ ಮುಕ್ತ ಮನಸ್ಸು ಹೊಂದಿದೆ. ಇದು ಆಘಾತಕಾರಿ. ನಮ್ಮ ಆಟಗಾರರು ಹೀಗೆ ಮಾಡುತ್ತಾರೆಂದು ಕಲ್ಪನೆಯೂ ಇರಲಿಲ್ಲ. ಈ ಪಿತೂರಿಯ ಹಿಂದೆ ಯಾರಿ ಇದ್ದಾರೆ ಎಂಬುದನ್ನು ಕಂಡುಹಿಡಿಯುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಎಫ್‌ಐಸಿಎ ಬಾಂಗ್ಲಾ ಆಟಗಾರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಆಟಗಾರರು ಒಟ್ಟಾಗಿ ತೆಗೆದುಕೊಂಡ ನಿಲುವನ್ನು ಪ್ರಶಂಸಿಸಿದೆ.

ಪ್ರತಿಕ್ರಿಯಿಸಿ (+)