ಐಸಿಸಿ ವಿಶ್ವಕಪ್: ಶಕೀಬ್ ದಾಖಲೆ ‘ಆಟ’ಕ್ಕೆ ಒಲಿದ ಜಯ

ಶುಕ್ರವಾರ, ಜೂಲೈ 19, 2019
24 °C
ಅಫ್ವಾನಿಸ್ತಾನ ಬೌಲರ್‌ಗಳಿಗೆ ದಿಟ್ಟ ಉತ್ತರ:

ಐಸಿಸಿ ವಿಶ್ವಕಪ್: ಶಕೀಬ್ ದಾಖಲೆ ‘ಆಟ’ಕ್ಕೆ ಒಲಿದ ಜಯ

Published:
Updated:

ಸೌತಾಂಪ್ಟನ್: ಬ್ಯಾಟಿಂಗ್‌ ಕಷ್ಟಕರವಾದ ಪಿಚ್‌ನಲ್ಲಿ ತಾಳ್ಮೆಯ ಅರ್ಧಶತಕ ಗಳಿಸಿದ ಶಕೀಬ್ ಅಲ್ ಹಸನ್ ಮಿಂಚಿನ ದಾಳಿಯ ಮೂಲಕವೂ ಗಮನ ಸೆಳೆದರು. ಅವರ ‘ದಾಖಲೆ’ ಆಲ್‌ರೌಂಡ್ ಆಟದ ನೆರವಿನಿಂದ ಬಾಂಗ್ಲಾದೇಶ ಜಯಭೇರಿ ಮೊಳಗಿಸಿತು.

ಇಲ್ಲಿನ ಹ್ಯಾಂಪ್‌ಶೈರ್ ಬೌಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮಷ್ರಫೆ ಮೊರ್ತಜಾ ಬಳಗ ಅಫ್ಗಾನಿಸ್ತಾನವನ್ನು 62 ರನ್‌ಗಳಿಂದ ಮಣಿಸಿತು. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿತು.

ಟಾಸ್ ಗೆದ್ದ ಅಫ್ಗಾನಿಸ್ತಾನ ಫೀಲ್ಡಿಂಗ್ ಮಾಡಿತು. ಶಕೀಬ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಮುಷ್ಫಿಕ್‌ ಉರ್‌ ರಹೀಂ (83; 87 ಎ, 1 ಸಿಕ್ಸರ್‌, 4 ಬೌಂಡರಿ) ಅವರ ಅಮೋಘ ಜೊತೆಯಾಟದ ಬಲದಿಂದ ಬಾಂಗ್ಲಾದೇಶ ಏಳು ವಿಕೆಟ್‌ಗಳಿಗೆ 262 ರನ್‌ ಗಳಿಸಿತು.

ಗುರಿ ಬೆನ್ನತ್ತಿದ ಅಫ್ಗಾನ್‌ 47ನೇ ಓವರ್‌ನಲ್ಲಿ 200 ರನ್‌ಗಳಿಗೆ ಆಲೌಟಾಯಿತು. ಆರಂಭ ಆಟಗಾರ ಗುಲ್ಬದೀನ್‌ ನೈಬ್ ಮತ್ತು ಮಧ್ಯಮ ಕ್ರಮಾಂಕದ ಶಮೀವುಲ್ಲಾ ಶಿನ್ವಾರಿ ಪ್ರತಿರೋಧ ಒಡ್ಡಿದರು. ಆದರೆ ಅಫ್ಗಾನಿಸ್ತಾನದ ಇತರ ಯಾವ ಬ್ಯಾಟ್ಸ್‌ಮನ್‌ಗೂ ಬಾಂಗ್ಲಾ ದಾಳಿ ಮೆಟ್ಟಿ ನಿಲ್ಲಲು ಆಗಲಿಲ್ಲ. ಐದು ವಿಕೆಟ್ ಕಬಳಿಸಿದ ಶಕೀಬ್ ಒಂದೇ ಪಂದ್ಯದಲ್ಲಿ ಅರ್ಧಶತಕ ಮತ್ತು ಐದು ವಿಕೆಟ್ ಉರುಳಿಸಿದ ಮೂರನೇ ಆಟಗಾರ ಎನಿಸಿದರು. ಬಾಂಗ್ಲಾ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯೂ ಅವರದಾಯಿತು. ವಿಶ್ವಕಪ್‌ ಟೂರ್ನಿಯಲ್ಲಿ ಸಾವಿರ ರನ್ ಗಳಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆಯನ್ನೂ ಮಾಡಿದರು.

ಲಿಟನ್‌ ದಾಸ್‌ಗೆ ನಿರಾಸೆ; ಶಕೀಬ್‌–ಮುಷ್ಫಿಕ್ ಉರ್‌ ಮಿಂಚು: ಸೌಮ್ಯಾ ಸರ್ಕಾರ್ ಅವರನ್ನು ಕೆಳ ಕ್ರಮಾಂಕದಲ್ಲಿ ಕಳುಹಿಸಲು ನಿರ್ಧರಿಸಿದ ಬಾಂಗ್ಲಾದೇಶ, ತಮೀಮ್ ಇಕ್ಬಾಲ್ ಜೊತೆ ಲಿಟನ್ ದಾಸ್ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿತು. ಆದರೆ ಅವಕಾಶವನ್ನು ಬಳಸಿಕೊಳ್ಳಲು ಲಿಟನ್ ದಾಸ್‌ ವಿಫಲರಾದರು. ತಂಡದ ಮೊತ್ತ 23 ರನ್‌ಗಳಾಗಿದ್ದಾಗ ಅವರು ವಿಕೆಟ್ ಒಪ್ಪಿಸಿದರು.

ಇಕ್ಬಾಲ್‌ ಮತ್ತು ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅಫ್ಗಾನ್ ಬೌಲರ್‌ಗಳನ್ನು ಕಾಡಿದರು. 59 ರನ್‌ಗಳನ್ನು ಸೇರಿಸಿದ ಇವರಿಬ್ಬರ ಜೊತೆಯಾಟವನ್ನು ಮೊಹಮ್ಮದ್ ನಬಿ ಮುರಿದರು. ನಂತರ ಶಕೀಬ್ ಮತ್ತು ವಿಕೆಟ್ ಕೀಪರ್‌ ಮುಷ್ಫಿಕ್‌ ಉರ್‌ ರಹೀಂ ಆಟ ಕಳೆಗಟ್ಟಿತು. ಈ ಜೋಡಿಯ 61 ರನ್‌ಗಳ ಜೊತೆಯಾಟದಿಂದಾಗಿ ತಂಡದ ಮೊತ್ತ 150ರ ಸನಿಹ ತಲುಪಿತು. ತಾಳ್ಮೆಯಿಂದ ಆಡಿದ ಶಕೀಬ್ ಟೂರ್ನಿಯಲ್ಲಿ ವೈಯಕ್ತಿಕ ಮೂರನೇ ಅರ್ಧಶತ ಬಾರಿಸಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲಿಗರಾದರು. ಅವರು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದರು. ಶಕೀಬ್‌ ಖಾತೆಯಲ್ಲಿ ಈಗ 476 ರನ್‌ಗಳಿವೆ. ಅವರು ಈಗಾಗಲೇ ಎರಡು ಶತಕಗಳನ್ನು ಸಿಡಿಸಿದ್ದಾರೆ.

ಮೊಸಾಡೆಕ್‌ ಮಿಂಚಿನ ಬ್ಯಾಟಿಂಗ್‌: ಅಂತಿಮ ಓವರ್‌ಗಳಲ್ಲಿ ಏಳನೇ ಕ್ರಮಾಂಕದ ಮೊಸಾಡೆಕ್ ಹೊಸೇನ್ ಮಿಂಚಿನ ಬ್ಯಾಟಿಂಗ್ ಮಾಡಿದರು. 24 ಎಸೆತಗಳಲ್ಲಿ 35 ರನ್‌ ಗಳಿಸಿದ ಅವರು ಬೌಲರ್‌ಗಳ ಬೆವರಿಳಿಸಿದರು.

ಸೌಮ್ಯಾ ಸರ್ಕಾರ್ ಕೇವಲ ಮೂರು ರನ್ ಗಳಿಸಿ ವಾಪಸಾದಾಗ ತಂಡದ ಮೊತ್ತ 151 ಆಗಿತ್ತು. ಈ ಸಂದರ್ಭದಲ್ಲಿ ರಹೀಂ ಜೊತೆಗೂಡಿದ ಮೊಹಮದುಲ್ಲಾ ಐದನೇ ವಿಕೆಟ್‌ಗೆ 56 ರನ್ ಸೇರಿಸಿದರು. ರಹೀಂ ಮತ್ತು ಮೊಸಾಡೆಕ್ 33 ಎಸೆತಗಳಲ್ಲಿ 44 ರನ್ ಕಲೆ ಹಾಕಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !