ನವದೆಹಲಿ (ಪಿಟಿಐ): ಬಾಂಗ್ಲಾದೇಶ ಎದುರಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಇಶಾನ್ ಕಿಶನ್ ಅವರಿಗೆ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.
ಸರಣಿಯಲ್ಲಿ 3 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಅಕ್ಟೋಬರ್ 6ರಂದು ಗ್ವಾಲಿಯರ್‌ನಲ್ಲಿ ನಡೆಯಲಿದೆ. ನವದೆಹಲಿ (ಅ. 9) ಮತ್ತು ಹೈದರಾಬಾದ್ (ಅ.12) ನಗರಗಳಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಪಂದ್ಯಗಳೂ ನಡೆಯಲಿವೆ. ಈ ಪಂದ್ಯಗಳಿಗಾಗಿ ಭಾರತ ತಂಡವನ್ನು ಇದೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ರಿಷಭ್ ಪಂತ್ ಅವರು ಈ ವರ್ಷದಲ್ಲಿ ನಡೆಯಲಿರುವ 10 ಟೆಸ್ಟ್ ಪಂದ್ಯಗಳಲ್ಲಿ ಆಡುವತ್ತ ಹೆಚ್ಚು ಗಮನ ಇಟ್ಟಿದ್ದಾರೆ. ಆದ್ದರಿಂದ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಅವರು ಮೊದಲ ವಿಕೆಟ್‌ಕೀಪರ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಿಶನ್ ಅವರನ್ನು ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಅ.16ರಿಂದ ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿಯು ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದೆ. ಅದರಿಂದಾಗಿ ಬಾಂಗ್ಲಾ ಎದುರಿನ ಟಿ20 ಸರಣಿಗೆ ಶುಭಮನ್ ಗಿಲ್, ರಿಷಭ್ ಪಂತ್, ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಅದರಿಂದಾಗಿ ಯುವ ಆಟಗಾರರಾದ ರಿಂಕು ಸಿಂಗ್, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ಆವೇಶ್ ಖಾನ್ ಮತ್ತಿತರರಿಗೆ ಕಣಕ್ಕಿಳಿಯಲು ಅವಕಾಶ ಲಭಿಸಬಹುದು.