ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯ ‘ಕೈಚೆಲ್ಲಿದ’ ರೋಹಿತ್ ಬಳಗ!

ಕ್ರಿಕೆಟ್: ‘ಜೀವದಾನ’ದ ಲಾಭ ಪಡೆದ ಮಿರಾಜ್–ಬಾಂಗ್ಲಾಗೆ ರೋಚಕ ಜಯ
Last Updated 5 ಡಿಸೆಂಬರ್ 2022, 5:18 IST
ಅಕ್ಷರ ಗಾತ್ರ

ಢಾಕಾ: ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಮೆಹದಿ ಹಸನ್ ಮಿರಾಜ್ ಕ್ಯಾಚ್‌ಅನ್ನು ಭಾರತದ ವಿಕೆಟ್‌ಕೀಪರ್ ಕೆ.ಎಲ್. ರಾಹುಲ್ ಕೈಚೆಲ್ಲಿದರು. ಅದರೊಂದಿಗೆ ತಂಡದ ಜಯದ ಅವಕಾಶವೂ ಕೈತಪ್ಪಿತು.

ಭಾನುವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಮಗೆ ಲಭಿಸಿದ ‘ಜೀವದಾನ’ವನ್ನು ಸಮರ್ಥವಾಗಿ ಬಳಸಿಕೊಂಡ ಮಿರಾಜ್, ಬಾಂಗ್ಲಾ ತಂಡಕ್ಕೆ 1 ವಿಕೆಟ್ ಅಂತರದ ರೋಚಕ ಜಯದ ಕಾಣಿಕೆ ನೀಡಿದರು.ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡವು ಭಾರತವನ್ನು 186 ರನ್‌ಗಳಿಗೆ ಕಟ್ಟಿಹಾಕಿತು. ಶಕೀಬ್ ಅಲ್ ಹಸನ್ 5 ವಿಕೆಟ್ ಗಳಿಸಿದರು.

ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಆದರೆ, ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ (73; 70ಎ, 4X5, 6X4) ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದರು. ಆದರೆ ವಿಕೆಟ್‌ಕೀಪಿಂಗ್‌ನಲ್ಲಿ ಎಡವಿದರು.

ಸಾಧಾರಣ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಭಾರತದ ಮೊಹ ಮ್ಮದ್ ಸಿರಾಜ್ (32ಕ್ಕೆ3), ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (17ಕ್ಕೆ2) ಹಾಗೂ ಪದಾರ್ಪಣೆ ಮಾಡಿದ ಕುಲದೀಪ್ ಸೇನ್ (37ಕ್ಕೆ2) ಬೌಲಿಂಗ್ ಬಲದಿಂದ ಬಾಂಗ್ಲಾ ತಂಡವು 39.3 ಓವರ್‌ಗಳಲ್ಲಿ 136 ರನ್‌ ಗಳಿಸಿ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಇನ್ನೊಂದು ವಿಕೆಟ್ ಗಳಿಸಿದರೆ ಜಯದ ಸಂಭ್ರಮ ಆಚರಿಸುವ ಅವಕಾಶ ಭಾರತ ತಂಡಕ್ಕಿತ್ತು. ಆದರೆ, ಶಾರ್ದೂಲ್ ಠಾಕೂರ್ ಹಾಕಿದ 43ನೇ ಓವರ್‌ನಲ್ಲಿ ಮಿರಾಜ್ ಬ್ಯಾಟಿನ ಮೇಲಿನ ಅಂಚಿಗೆ ಬಡಿದ ಚೆಂಡು ಎತ್ತರಕ್ಕೆ ಚಿಮ್ಮಿತು. ಚೆಂಡಿನ ಬೆನ್ನತ್ತಿದ ಕೀಪರ್ ರಾಹುಲ್ ಕ್ಯಾಚ್ ಪಡೆಯುವ ಪ್ರಯತ್ನ ಮಾಡಿದರು. ಕೈಗವಸುಗಳಲ್ಲಿ ಸೇರಿದ ಚೆಂಡನ್ನು ಗಟ್ಟಿಯಾಗಿ ಹಿಡಿಯುವಲ್ಲಿ ರಾಹುಲ್ ವಿಫಲರಾದರು.

ಇದರ ಲಾಭ ಪಡೆದ ಮಿರಾಜ್ (ಆಜೇಯ 38) ಹಾಗೂ ಅವರಿಗೆ ಉತ್ತಮ ಜೊತೆ ನೀಡಿದ ಮುಸ್ತಫಿಜುರ್ ರೆಹಮಾನ್ (ಅಜೇಯ 10) ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕ ಸ್ಪೆಲ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ದೀಪಕ್ ಚಾಹರ್ ಕೊನೆಯ ಹಂತದ ಓವರ್‌ಗಳಲ್ಲಿ ತುಟ್ಟಿಯಾದರು. ಬಾಂಗ್ಲಾ 46 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 187 ರನ್‌ ಗಳಿಸಿ ಗೆದ್ದಿತು.

ಶಿಖರ್ ಧವನ್ ಮತ್ತು ರೋಹಿತ್ ಇನಿಂಗ್ಸ್ ಆರಂಭಿಸಿದ್ದರಿಂದ ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ಅವರಿಗೆ ಅಂತಿಮ 11ರಲ್ಲಿ ಅವಕಾಶ ಸಿಗಲಿಲ್ಲ. ಆದ್ದರಿಂದ ರಾಹುಲ್ ಅವರಿಗೆ ಕೀಪಿಂಗ್ ಹೊಣೆ ನೀಡಲಾಗಿತ್ತು.

ಭಾರತ ತಂಡದ ಫೀಲ್ಡಿಂಗ್ ಕೂಡ ಹಲವು ಲೋಪಗಳಿಂದ ಕೂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ 41.2 ಓವರ್‌ಗಳಲ್ಲಿ 186 (ರೋಹಿತ್‌ ಶರ್ಮ 27, ಶ್ರೇಯಸ್‌ ಅಯ್ಯರ್‌ 24, ಕೆ.ಎಲ್‌.ರಾಹುಲ್‌ 73, ವಾಷಿಂಗ್ಟನ್‌ ಸುಂದರ್‌ 19, ಶಕೀಬ್ ಅಲ್ ಹಸನ್ 36ಕ್ಕೆ 5, ಇಬಾದತ್‌ ಹೊಸೇನ್‌ 47ಕ್ಕೆ 4). ಬಾಂಗ್ಲಾದೇಶ 46 ಓವರ್‌ಗಳಲ್ಲಿ 9 ವಿಕೆಟ್‌ಗೆ 187 (ಲಿಟನ್‌ ದಾಸ್‌ 41, ಶಕೀಬ್‌ ಅಲ್‌ ಹಸನ್‌ 29, ಮುಷ್ಫಿಕುರ್ ರಹೀಂ 18, ಮೆಹದಿ ಹಸನ್ ಮಿರಾಜ್ ಔಟಾಗದೆ 38, ಮುಸ್ತಫಿಜುರ್‌ ರಹ್ಮಾನ್‌ ಔಟಾಗದೆ 10, ಮೊಹಮ್ಮದ್ ಸಿರಾಜ್ 32ಕ್ಕೆ3, ವಾಷಿಂಗ್ಟನ್ ಸುಂದರ್ 17ಕ್ಕೆ2, ಕುಲದೀಪ್ ಸೇನ್ 37ಕ್ಕೆ2) ಫಲಿತಾಂಶ: ಬಾಂಗ್ಲಾದೇಶಕ್ಕೆ 1 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT