ಟೆಸ್ಟ್ ಕ್ರಿಕೆಟ್: ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ನಿರೀಕ್ಷೆಯ ಭಾರ

7
ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ಇಂದಿನಿಂದ: ಪೂಜಾರ, ಜಡೇಜಗೆ ಸ್ಥಾನ?

ಟೆಸ್ಟ್ ಕ್ರಿಕೆಟ್: ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ನಿರೀಕ್ಷೆಯ ಭಾರ

Published:
Updated:

ಲಂಡನ್‌: ಮೊದಲ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ಕಾದಾಡಿ ಸೋತ ಭಾರತ ತಂಡ ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ಮೇಲೆ ಭರವಸೆ ಹೊತ್ತು ಅಂಗಣಕ್ಕೆ ಇಳಿಯಲಿದೆ. ಪಂದ್ಯ ಲಾರ್ಡ್ಸ್‌ ಅಂಗಣದಲ್ಲಿ ಗುರುವಾರ ಆರಂಭವಾಗಲಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಉತ್ತಮ ಸಾಮರ್ಥ್ಯ ತೋರಿದ್ದರು. ಆದರೆ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ನಾಯಕ ವಿರಾಟ್‌ ಕೊಹ್ಲಿ ಅವರ ಏಕಾಂಗಿ ಹೋರಾಟದಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆಯನ್ನು ತಗ್ಗಿಸಲು ತಂಡಕ್ಕೆ ಸಾಧ್ಯವಾಗಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಕೊಹ್ಲಿ ಮಿಂಚಿದ್ದರು. ಇತರ ಬ್ಯಾಟ್ಸ್‌ಮನ್‌ಗಳಿಂದ ಸೂಕ್ತ ಬೆಂಬಲ ಸಿಕ್ಕಿದ್ದರೆ ಭಾರತಕ್ಕೆ ಗೆದ್ದು ಸಂಭ್ರಮಿಸುವ ಅವಕಾಶ ಇತ್ತು. ಆದರೆ ಪಂದ್ಯದಲ್ಲಿ ತಂಡ 31 ರನ್‌ಗಳ ಸೋಲೊಪ್ಪಿಕೊಳ್ಳಬೇಕಾಗಿತ್ತು.

ಲಾರ್ಡ್ಸ್‌ ಅಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತ ಪಾಳಯದ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಉಮೇಶ್ ಯಾದವ್‌ ಅವರನ್ನು ಹೊರಗಿಟ್ಟು ಹೆಚ್ಚುವರಿ ಸ್ಪಿನ್ನರ್‌ ಒಬ್ಬರನ್ನು ತಂಡಕ್ಕೆ ಸೇರಿಸಬಹುದು ಎನ್ನಲಾಗಿದೆ. ಈ ಪ್ರಯೋಗಕ್ಕೆ ತಂಡದ ಆಡಳಿತ ಮುಂದಾದರೆ ರವೀಂದ್ರ ಜಡೇಜ ಅವರಿಗೆ ಅವಕಾಶ ಸಿಗಬಹುದು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ಪೂಜಾರಗೆ ಸ್ಥಾನ?

ಕಳೆದ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ಎರಡನೇ ಪಂದ್ಯದಲ್ಲಿ ಕೈಬಿಡುವ ಸಾಧ್ಯತೆ ಇದ್ದು ಅವರ ಬದಲಿಗೆ ಚೇತೇಶ್ವರ ಪೂಜಾರ ಅವರಿಗೆ ಅವಕಾಶ ಸಿಗಬಹುದು. ಇಂಗ್ಲೆಂಡ್ ನೆಲದಲ್ಲಿ ಇತ್ತೀಚೆಗೆ ಕೌಂಟಿ ಕ್ರಿಕೆಟ್ ಪಂದ್ಯಗಳನ್ನು ಆಡಿರುವುದರಿಂದ ಪೂಜಾರ ಈಗ ಇಲ್ಲಿನ ಪಿಚ್‌ನಲ್ಲಿ ಆಡಲು ಪಕ್ವವಾಗಿದ್ದಾರೆ. ತಂಡದ ಅಗ್ರ ಕ್ರಮಾಂಕದಲ್ಲಿ ನಿರಂತರ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು ಪೂಜಾರ ಸ್ಥಾನ ಪಡೆದರೆ ಯಾವ ಕ್ರಮಾಂಕದಲ್ಲಿ ಆಡುವರು ಎಂಬ ಕುತೂಹಲವೂ ಕ್ರಿಕೆಟ್ ಪ್ರಿಯರಲ್ಲಿದೆ.

ಮಲಾನ್‌, ಸ್ಟೋಕ್ಸ್ ಇಲ್ಲ

ಎರಡನೇ ಪಂದ್ಯದಲ್ಲಿ ಆಡುವ ಇಂಗ್ಲೆಂಡ್‌ ತಂಡದಿಂದ ಡೇವಿಡ್ ಮಲಾನ್ ಅವರನ್ನು ಕೈಬಿಟ್ಟಿದ್ದು ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಕಾರಣ ಬೆನ್ ಸ್ಟೋಕ್ಸ್‌ ಈ ಪಂದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ ಒಲಿವರ್ ಪಾಪ್ ಅವರಿಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ಲಭಿಸುವ ಸಾಧ್ಯತೆ ಇದೆ. ಮೊಯಿನ್ ಅಲಿ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ.

ಸ್ಟುವರ್ಟ್ ಬ್ರಾಡ್‌, ಜೇಮ್ಸ್ ಆ್ಯಂಡರ್ಸನ್‌ ಮತ್ತು ಸ್ಯಾಮ್ ಕರನ್ ಅವರು ವೇಗದ ಬೌಲಿಂಗ್‌ ವಿಭಾಗವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ ನಾಯಕ ಜೋ ರೂಟ್‌ ನಿರಾಳವಾಗಿದ್ದಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಮುರಳಿ ವಿಜಯ್‌, ಕೆ.ಎಲ್‌.ರಾಹುಲ್‌, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್‌ (ವಿಕೆಟ್ ಕೀಪರ್‌), ರಿಷಭ್ ಪಂತ್‌, ಕರುಣ್ ನಾಯರ್‌, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಇಶಾಂತ್‌ ಶರ್ಮಾ, ಉಮೇಶ್ ಯಾದವ್‌, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಇಂಗ್ಲೆಂಡ್‌: ಜೋ ರೂಟ್‌ (ನಾಯಕ), ಅಲೆಸ್ಟರ್ ಕುಕ್‌, ಕೀಟನ್‌ ಜೆನಿಂಗ್ಸ್‌, ಜಾನಿ ಬೇಸ್ಟೊ, ಜೋಸ್ ಬಟ್ಲರ್‌, ಒಲಿವರ್ ಪಾಪ್‌, ಮೊಯಿನ್ ಅಲಿ, ಆದಿಲ್ ರಶೀದ್‌, ಜೆಮಿ ಪೋರ್ಟರ್‌, ಸ್ಯಾಮ್‌ ಕರನ್‌, ಜೇಮ್ಸ್ ಆ್ಯಂಡರ್ಸನ್‌, ಸ್ಟುವರ್ಟ್‌ ಬ್ರಾಡ್‌, ಕ್ರಿಸ್ ವೋಕ್ಸ್‌.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !