ಢಾಕಾ: ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆಗೆ ಭದ್ರತೆಯ ಭರವಸೆ ನೀಡುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ಸೇನಾ ಮುಖ್ಯಸ್ಥರಲ್ಲಿ ಕೇಳಿದೆ. ಮೂಲ ವೇಳಾಪಟ್ಟಿಯಂತೆ ಟೂರ್ನಿಯು ಅಕ್ಟೋಬರ್ 3ರಿಂದ 20ರವರೆಗೆ ನಡೆಯಬೇಕಿದೆ.
ಹೊಸ ಮೀಸಲಾತಿ ನೀತಿಯ ವಿರುದ್ಧ ವಿದ್ಯಾರ್ಥಿ ಚಳವಳಿ ವ್ಯಾಪಕ ಹಿಂಸೆಗೆ ತಿರುಗಿದ ಬೆನ್ನಲ್ಲೇ, ಪ್ರಧಾನಿಯಾಗಿದ್ದ ಶೇಖ್ ಹಸೀನಾ ದೇಶತೊರೆದಿದ್ದು, ರಾಜಕೀಯ ಅಸ್ಥಿರತೆ ಉಂಟಾಗಿತ್ತು.
ಏಷ್ಯಾ ಕಪ್ ಪಂದ್ಯಗಳನ್ನು ಸಿಲ್ಹೆಟ್ ಮತ್ತು ಮೀರ್‌ಪುರ್‌ನಲ್ಲಿ ನಿಗದಿಪಡಿಸಲಾಗಿದೆ.
ಟೂರ್ನಿಗೆ ಭದ್ರತಾ ಭರವಸೆ ಒದಗಿಸುವಂತೆ ಕೋರಿ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಾಕರ್ ಉಜ್ ಜಮಾನ್ ಅವರಿಗೆ ಬಿಸಿಬಿ ಪತ್ರ ಬರೆದಿದೆ ಎಂದು ಕ್ರಿಕ್‌ಬಜ್ ವೆಬ್‌ಸೈಟ್ ವರದಿಮಾಡಿದೆ.
ಸೆಪ್ಟೆಂಬರ್ 27ರಿಂದ ಟೂರ್ನಿಯ ಅಭ್ಯಾಸ ಪಂದ್ಯಗಳು ಆರಂಭವಾಗಲಿವೆ.
ಅವಾಮಿ ಲೀಗ್ ಬೆಂಬಲಿಗರೆನ್ನಲಾದ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಹಾಗೂ ಮಂಡಳಿಯ ಕೆಲ ನಿರ್ದೇಶರು ಕೂಡ ದೇಶ ತೊರೆದಿದ್ದಾರೆ. ಕೆಲ ನಿರ್ದೇಶಕರು ಡಾಕಾದಲ್ಲೇ ಉಳಿದಿದ್ದು, ಟೂರ್ನಿಯು ಸ್ಥಳಾಂತರವಾಗುವುದಿಲ್ಲ ಎಂದು ವಿಶ್ವಾಸ ಹೊಂದಿದ್ದಾರೆ.
‘ಟೂರ್ನಿ ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಬಿಸಿಬಿ ಅಂಪೈರಿಂಗ್ ಸಮಿತಿ ಮುಖ್ಯಸ್ಥ ಇಫ್ತಿಕಾರ್ ಅಹ್ಮದ್ ಮಿಥು ಹೇಳಿದ್ದಾರೆ.
‘ಎರಡು ದಿನಗಳ ಹಿಂದೆ ಐಸಿಸಿಯು ನಮ್ಮನ್ನು ಸಂಪರ್ಕಿಸಿತ್ತು. ಶೀಘ್ರದಲ್ಲೇ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದ್ದೇವೆ’ ಎಂದು ಹೇಳಿದ್ದಾರೆ.
‘ಮಧ್ಯಂತರ ಸರ್ಕಾರ ರಚನೆಯಾದ ನಂತರ ಟೂರ್ನಿಗೆ ಭದ್ರತೆಯ ಕುರಿತು ಐಸಿಸಿಗೆ ನಾವು ಭರವಸೆ ನೀಡಬೇಕಿದೆ. ಹೀಗಾಗಿ ಪತ್ರ ಬರೆದಿದ್ದೇವೆ. ಸೇನೆಯಿಂದ ಭರವಸೆ ಸಿಕ್ಕ ನಂತರ ನಾವು ಐಸಿಸಿಗೆ ತಿಳಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.