ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಕೇಂದ್ರ ಗುತ್ತಿಗೆ: ರಿಚಾ, ಜೆಮಿಮಾಗೆ ಬಡ್ತಿ

Published 27 ಏಪ್ರಿಲ್ 2023, 13:17 IST
Last Updated 27 ಏಪ್ರಿಲ್ 2023, 13:17 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರ ಗುತ್ತಿಗೆಯಲ್ಲಿ ಬಡ್ತಿ ಗಳಿಸಿದ್ದಾರೆ.

ಆದರೆ ಶಿಖಾ ಪಾಂಡೆ ಹಾಗೂ ತಾನಿಯಾ ಭಾಟಿಯಾ ಈ ಪಟ್ಟಿಯಿಂದ ಸ್ಥಾನ ಕಳೆದುಕೊಂಡಿದ್ದಾರೆ. ರಿಚಾ ಮತ್ತು ಜೆಮಿಮಾ ಅವರು ಸಿ ಯಿಂದ  ಬಿ ವಿಭಾಗಕ್ಕೆ ಬಡ್ತಿಯಾಗಿದ್ದಾರೆ.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ಎ ಕೆಟಗರಿಯಲ್ಲಿ ಮುಂದುವರಿದಿದ್ದಾರೆ. ಈ ವಿಭಾಗದಲ್ಲಿ ಮೂವರಿಗೆ ಮಾತ್ರ ಸ್ಥಾನ ನೀಡಲಾಗಿದೆ. ಆದರೆ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ ಅವರಿಗೆ ಬಿ ಕೆಟಗರಿಗೆ ಹಿಂಬಡ್ತಿ ನೀಡಲಾಗಿದೆ. ಲೆಗ್‌ಸ್ಪಿನ್ನರ್ ಪೂನಂ ಯಾದವ್ ಹೋದ ವರ್ಷ ಎ ವಿಭಾಗದಲ್ಲಿದ್ದರು. ಆದರೆ ಈಗ ಗುತ್ತಿಗೆಯ ಪಟ್ಟಿಯಿಂದ ಹೊರಬಿದ್ದಿದ್ದಾರೆ. 2022ರ ಮಾರ್ಚ್‌ನಲ್ಲಿ ಅವರು ಕೊನೆಯ ಪಂದ್ಯ ಆಡಿದ್ದರು. 

ಹೋದ ವರ್ಷ ಗುತ್ತಿಗೆಯಲ್ಲಿರದ ರೇಣುಕಾ ಠಾಕೂರ್ ಅವರು ಈ ಬಾರಿ ನೇರವಾಗಿ ಬಿ ವಿಭಾಗದಲ್ಲಿ ಸ್ಥಾನ ಗಳಿಸಿದ್ದಾರೆ. 

ಗುರುವಾರ ಬಿಸಿಸಿಐ ಪಟ್ಟಿ ಪ್ರಕಟಿಸಿದೆ. ಇದು ಈ ಅಕ್ಟೋಬರ್‌ನಿಂದ ಮುಂದಿನ ಸೆಪ್ಟೆಂಬರ್‌ವರೆಗೆ ಜಾರಿಯಾಗಲಿದೆ. 

ಎ ಕೆಟಗರಿಯ ಆಟಗಾರ್ತಿಯರಿಗೆ ₹ 50 ಲಕ್ಷ, ಬಿ ಮತ್ತು ಸಿ ಕೆಟಗರಿಯವರಿಗೆ ಕ್ರಮವಾಗಿ ₹ 30 ಹಾಗೂ 10 ಲಕ್ಷ ವಾರ್ಷಿಕವಾಗಿ ನೀಡಲಾಗುತ್ತದೆ. 

ಒಟ್ಟು 17 ಆಟಗಾರ್ತಿಯರು ಗುತ್ತಿಗೆ ಪಡೆದುಕೊಂಡಿದ್ದಾರೆ. ಹೋದ ವರ್ಷ ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನವನ್ನು ಬಿಸಿಸಿಐ ಘೋಷಿಸಿತ್ತು. 

ಕೇಂದ್ರ ಗುತ್ತಿಗೆಯಲ್ಲಿರುವವರು: 

ವಿಭಾಗ ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ದೀಪ್ತಿ ಶರ್ಮಾ.

ವಿಭಾಗ ಬಿ: ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ರಿಚಾ ಘೋಷ್, ರಾಜೇಶ್ವರಿ ಗಾಯಕವಾಡ.

ವಿಭಾಗ ಸಿ: ಮೇಘನಾ ಸಿಂಗ್, ದೇವಿಕಾ ವೈದ್ಯ, ಎಸ್. ಮೇಘನಾ, ಅಂಜಲಿ ಶರವಣಿ, ಪೂಜಾ ವಸ್ತ್ರಕರ್, ಸ್ನೇಹಾ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೊಲ್, ಯಷ್ಟಿಕಾ ಭಾಟಿಯಾ. 

ಜೆಮಿಮಾ ರಾಡ್ರಿಗಸ್
ಜೆಮಿಮಾ ರಾಡ್ರಿಗಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT