ಭಾರತ ತಂಡದ ಕ್ರಿಕೆಟಿಗರಿಗೆ ಧನಬಲ

7
ಪರಿಷ್ಕೃತ ವೇತನ ಬಾಕಿ ನೀಡಲು ಬಿಸಿಸಿಐ ಸಮ್ಮತಿ

ಭಾರತ ತಂಡದ ಕ್ರಿಕೆಟಿಗರಿಗೆ ಧನಬಲ

Published:
Updated:

ನವದೆಹಲಿ: ಕೇಂದ್ರ ಗುತ್ತಿಗೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರ ಪರಿಷ್ಕೃತ ವೇತನ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಮ್ಮತಿಸಿದೆ.

ಶುಕ್ರವಾರ ಇಲ್ಲಿ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆ (ಎಸ್‌ಜಿಎಂ)ಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕಳೆದ ಮಾರ್ಚ್‌ 7ರಂದು ಆಟಗಾರರ ವೇತನವನ್ನು ಪರಿಷ್ಕರಿಸಲಾಗಿತ್ತು. ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತ ಸಮಿತಿಯು (ಸಿಒಎ) ಅನುಮೋದನೆ ನೀಡಿತ್ತು.

ಆದರೆ,  ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನುಮೊದನೆ ಸಿಗುವವರೆಗೂ ಪರಿಷ್ಕೃತ ವೇತನ ಮಂಜೂರಿಗೆ ಸಹಿ ಹಾಕುವುದಿಲ್ಲ ಎಂದು ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಪಟ್ಟು ಹಿಡಿದಿದ್ದರು. ಇದೀಗ ಅವರು ಕೂಡ ಸಮ್ಮತಿ ಸೂಚಿಸಿರುವುದರಿಂದ ಸಮಸ್ಯೆ ಬಗೆಹರಿದಿದೆ.

‘ಅನಿಶ್ಚಿತತೆಯ ನಡುವೆಯೂ ಸಭೆ ನಡೆದಿದೆ. ಮಂಡಿಸಲಾದ ಎಲ್ಲ ಪ್ರಸ್ತಾವಗಳಿಗೂ ಅವಿರೋಧವಾಗಿ ಅನುಮೋದನೆ ಸಿಕ್ಕಿದೆ’ ಎಂದರು.

ಗುತ್ತಿಗೆಯ ಪ್ರಕಾರ ಎ+ ಗುಂಪಿನ ಆಟಗಾರರಿಗೆ ₹ 7ಕೋಟಿ, ಎ, ಬಿ ಮತ್ತು ಸಿ ಗುಂಪುಗಳ ಆಟಗಾರರಿಗೆ ಕ್ರಮವಾಗಿ ₹ 5 ಕೋಟಿ, ₹ 3 ಕೋಟಿ ಮತ್ತು ₹ 1 ಕೋಟಿ ನೀಡಲಾಗುವುದು.

ದೇಶಿ ಕ್ರಿಕೆಟ್‌ ತಂಡಗಳಲ್ಲಿ ಆಡುವ ಆಟಗಾರರು ಮತ್ತು ಮಹಿಳಾ ಆಟಗಾರ್ತಿಯರ ವೇತನ ಹೆಚ್ಚಳಕ್ಕೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಿಒಎ ಮತ್ತು ಬಿಸಿಸಿಐ ನಡುವಿನ ಶೀತಲ ಸಮರದ ಕುರಿತು ಪ್ರತಿಕ್ರಯಿಸಿದ ಚೌಧರಿ, ‘ನಿಯಮಾವಳಿಯ ಪ್ರಕಾರವೇ ಸಿಒಎ ಮತ್ತು ಮಂಡಳಿಯ ಆಡಳಿತವು ಕಾರ್ಯನಿರ್ವಹಿಸುತ್ತವೆ. ಇಲ್ಲಿ ಯಾವುದೇ ವೈಯಕ್ತಿಕ ಅಥವಾ ಭಾವನಾತ್ಮಕ ವಿಷಯಗಳಿಗೆ ಅವಕಾಶವಿಲ್ಲ. ನಮ್ಮ ಆಡಳಿತವು ಸಿಒಎ ಮೇಲ್ಚಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಸ್ಪಷ್ಟಪಡಿಸಿದರು.

ತಾವು ಭೂತಾನ್ ಪ್ರವಾಸಕ್ಕೆ ಹೋಗಿದ್ದನ್ನು ಸಮರ್ಥಿಸಿಕೊಂಡ ಅವರು, ‘ಆ ದೇಶದಲ್ಲಿ ಕ್ರಿಕೆಟ್‌ ಚಟುವಟಿಕೆಗಳ ಅಭಿವೃದ್ಧಿಯ ಕುರಿತು ಮಾತನಾಡಲು ತೆರಳಿದ್ದೆ.  ಮೂರು ತಿಂಗಳುಗಳ ಹಿಂದೆ ಭೂತಾನ್ ನಿಯೋಗವು ನಮ್ಮ ಮುಖ್ಯ ಕಚೇರಿಗೆ ಭೇಟಿ ನೀಡಿತ್ತು. ಅವರ ಆಹ್ವಾನದ ಮೇರೆಗೆ ನಾನು ಹೋಗಿದ್ದೆ’ ಎಂದರು.

‘ಮುಂಬರುವ ರಣಜಿ ಟೂರ್ನಿಯಲ್ಲಿ ಉತ್ತರಾಖಂಡ ತಂಡವು ಪದಾರ್ಪಣೆ ಮಾಡಲಿದೆ. ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.

 28 ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !