ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಒಡಕಿನ ಲಾಭ ಪಡೆಯಲು ಪೈಪೋಟಿ

Last Updated 31 ಜನವರಿ 2018, 9:13 IST
ಅಕ್ಷರ ಗಾತ್ರ

ಬೆಳಗಾವಿ: ಅರಬಾವಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಜತೆಗೆ ಸ್ವಪಕ್ಷೀಯರ ವಿರೋಧವನ್ನೂ ಎದುರಿಸಬೇಕಾಗಿದೆ! ಅವರದೇ ಪಕ್ಷದ ಮುಖಂಡ ಈರಣ್ಣ ಕಡಾಡಿ ಟಿಕೆಟ್‌ ಆಕಾಂಕ್ಷಿಯಾಗಿರುವುದು ಇದಕ್ಕೆ ಕಾರಣ. ಈ ಬೆಳವಣಿಗೆ ಚುನಾವಣಾ ಕಣದಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ.

ಕ್ಷೇತ್ರದಲ್ಲಿ ಉಪಚುನಾವಣೆ ಸೇರಿ ನಾಲ್ಕು ಬಾರಿ ಸತತ ಗೆಲುವು ಸಾಧಿಸಿರುವ ಬಾಲಚಂದ್ರ, ಎರಡು ಬಾರಿ ಸಚಿವರಾಗಿದ್ದಾರೆ. ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಪ್ರಯತ್ನಗಳು ಪಕ್ಷದ ಒಳಗೆ ಹಾಗೂ ಹೊರಗೆ ನಡೆಯುತ್ತಿವೆ. ‘ಒಳೇಟು’ ತಪ್ಪಿಸಿಕೊಳ್ಳಲು ಬೇಕಾದ ಸಿದ್ಧತೆಯನ್ನು ಜಾರಕಿಹೊಳಿ ಮಾಡಿಕೊಳ್ಳುತ್ತಿದ್ದಾರೆ.

ಲಾಭ ಪಡೆಯಲು ರಣತಂತ್ರ: ಕಾಂಗ್ರೆಸ್ ಹಾಗೂ ಜೆಡಿಎಸ್ ‘ಸೂಕ್ತ’ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಆಕಾಂಕ್ಷಿಗಳಾದ ಕೆಲವರು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಬಾಲಚಂದ್ರ ವಿರುದ್ಧ ಬಿಜೆಪಿಯಲ್ಲೇ ಕೆಲವರು ಅಡ್ಡಗಾಲು ಹಾಕುತ್ತಿರುವುದರಿಂದ ಉಂಟಾಗುವ ಒಡಕಿನ ಲಾಭ ಪಡೆಯುವ ರಣತಂತ್ರವನ್ನು ಇತರ ಪಕ್ಷದವರು ರೂಪಿಸುತ್ತಿದ್ದಾರೆ.

ಬಾಲಚಂದ್ರ ವಿರುದ್ಧ 2008ಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿವೇಕರಾವ್ ಪಾಟೀಲ ಈಗ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಕಡಿಮೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಮೇಶ ಉಟಗಿ ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ. ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕಲ್ಲಪ್ಪಗೌಡ ಲಕ್ಕಾರ ಹೆಸರು ಕೂಡ ಚರ್ಚೆಯಲ್ಲಿದೆ. ಜೆಡಿಎಸ್‌ನಿಂದ ಸತೀಶ ವಂಡಗೂಡಿ ಹೆಸರು ಚಾಲ್ತಿಯಲ್ಲಿದೆ.

ಕುತೂಹಲ, ಚರ್ಚೆ: ಆಪರೇಷನ್‌ ಕಮಲ ಮೂಲಕ ಜೆಡಿಎಸ್‌ನಿಂದ ಬಂದ ಬಾಲಚಂದ್ರ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಸಹೋದರರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಅವರ ಪರೋಕ್ಷ ಬೆಂಬಲವೂ ಇದೆ. ಸಹೋದರರ ಹೊಂದಾಣಿಕೆ ರಾಜಕೀಯಕ್ಕೆ ಕಡಿವಾಣ ಹಾಕಬೇಕು. ಹೊಸ ಮುಖಗಳಿಗ ಅವಕಾಶ ಮಾಡಿಕೊಡಬೇಕು ಎನ್ನುವುದು ಬಿಜೆಪಿಯ ಕೆಲವರ ಆಗ್ರಹವಾಗಿದೆ. ಟಿಕೆಟ್‌ ಬಯಸಿರುವ ಈರಣ್ಣ ಕಡಾಡಿ ವರಿಷ್ಠರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ. ಈ ಬೆಳವಣಿಗೆಗಳು ಬಿಜೆಪಿ ಅಧಿಕೃತ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿಸಿವೆ.

‘ಬಾಲಚಂದ್ರಗೆ ಮೀಸಲು ಕ್ಷೇತ್ರ ಯಮಕನಮರಡಿಯಿಂದ ಟಿಕೆಟ್‌ ಕೊಡಲಿ. ಇದರಿಂದ ಪಕ್ಷದ ಬಲ ಹೆಚ್ಚಿಸಲು ಸಹಕಾರಿಯಾಗುತ್ತದೆ ಎನ್ನುವುದು ಬಿಜೆಪಿಯ ಕೆಲವರ ವಾದ. ಮೂಲ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರ ಬೆಂಬಲವೂ ಕಡಾಡಿ ಅವರಿಗಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯೂ ಬೆನ್ನಿಗೆ ನಿಂತಿದ್ದಾರೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಟಿಕೆಟ್‌ಗೆ ಪ್ರಯತ್ನ: ‘ಬಹಳ ವರ್ಷದಿಂದಲೂ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದೇನೆ. ಪಕ್ಷದ ನೀಡಿದ ಜವಾಬ್ದಾರಿ ಹಾಗೂ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷನೂ ಆಗಿದ್ದೆ. ಹೀಗಾಗಿ, ಅವಕಾಶ ಕೊಡಬೇಕು ಎಂದು ವರಿಷ್ಠರ ಬಳಿ ಪ್ರಸ್ತಾಪಿಸಿದ್ದೇನೆ. ಟಿಕೆಟ್‌ಗಾಗಿ ಯತ್ನಿಸುತ್ತಿದ್ದೇನೆ’ ಎಂದು ಬಿಜೆಪಿ ಮುಖಂಡ ಈರಣ್ಣ ಕಡಾಡಿ ಪ್ರತಿಕ್ರಿಯಿಸಿದರು.

ಮೂಡಲಗಿ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಹೋದ ವರ್ಷ ನಡೆದ ಹೋರಾಟದ ಮುಂಚೂಣಿಯಲ್ಲಿದ್ದವರಲ್ಲಿ ಪ್ರಮುಖರಾದ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ, ಬಿ.ಬಿ. ಹಂದಿಗುಂದ, ಅರವಿಂದ ದಳವಾಯಿ ಕಣಕ್ಕಿಳಿಯುವ ಉತ್ಸಾಹ ತೋರಿದ್ದಾರೆ.

ಸಮಿತಿಯ ಪ್ರತಿನಿಧಿಯನ್ನು ಚುನಾವಣೆಗೆ ಇಳಿಸಬೇಕು ಎಂದು ತಾಲ್ಲೂಕು ರಚನೆ ಹೋರಾಟ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈವರೆಗೂ ಯಾರನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮತಗಳು ನಿರ್ಣಾಯಕವಾಗಿವೆ.

ಮತದಾರರ ವಿವರ

ಪುರುಷರು– 112805
ಮಹಿಳೆಯರು–112755
ಇತರೆ– 15
ಒಟ್ಟು – 225575

ಆಕಾಂಕ್ಷಿಗಳು

ಬಿಜೆಪಿ: ಬಾಲಚಂದ್ರ ಜಾರಕಿಹೊಳಿ, ಈರಣ್ಣ ಕಡಾಡಿ.

ಕಾಂಗ್ರೆಸ್‌: ರಾಮಪ್ಪ ಉಟಗಿ.

ಜೆಡಿಎಸ್‌: ಸತೀಶ ವಂಟಗೂಡಿ.

ಪಕ್ಷೇತರರು: ಭೀಮಪ್ಪ ಗಡಾದ, ಬಿ.ಬಿ. ಹಂದಿಗುಂದ, ಅರವಿಂದ ದಳವಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT