ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ನಿಯಮಾವಳಿ: ಸಿಒಎ ಸಮ್ಮತಿ

ಇದೇ 28ರೊಳಗೆ ಚುನಾವಣೆ ನಡೆಸಲು ಸಿದ್ಧತೆ: ಕೆಲವು ಆಕ್ಷೇಪಗಳಿಗೆ ಪರಿಹಾರ ನೀಡಿದ ಸಿಒಎ
Last Updated 13 ಸೆಪ್ಟೆಂಬರ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು/ನವದೆಹಲಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಸಲ್ಲಿಸಿದ್ದ ಪರಿಷ್ಕೃತ ನಿಯಮಾವಳಿಯನ್ನು ಬಿಸಿಸಿಐ ಕ್ರಿಕೆಟ್‌ ಆಡಳಿತ ಸಮಿತಿಯು ಅಂಗೀಕರಿಸಿದೆ. ಇದರೊಂದಿಗೆ ಕೆಎಸ್‌ಸಿಎ ಕೂಡ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿ ಶಿಫಾರಸುಗಳಿಗೆ ಸಮ್ಮತಿಸಿದ ಸಂಸ್ಥೆಗಳ ಸಾಲಿಗೆ ಸೇರಿಕೊಂಡಿದೆ.

ಇದರಿಂದಾಗಿ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಗೆ ಹಾದಿ ಬಹುತೇಕ ಸುಗಮವಾದಂತಾಗಿದೆ.

ಈ ಮೊದಲು ಸೆ.12ರೊಳಗೆ ಚುನಾವಣೆ ಮುಗಿಸಲು ನಿರ್ದೇಶಿಸಲಾಗಿತ್ತು. ಕೊನೆಯ ದಿನಾಂಕವನ್ನು 28ರವರೆಗೆ ಮುಂದೂಡಿದ್ದ ಸಿಒಎ ಹೋದ ವಾರ ಪ್ರಕಟಣೆ ನೀಡಿತ್ತು. ಆದ್ದರಿಂದ ಕರ್ನಾಟಕದ ಜೊತೆಗೆ, ಛತ್ತೀಸಗಡ ಮತ್ತು ಮಧ್ಯಪ್ರದೇಶ ಸಂಸ್ಥೆಗಳ ತಿದ್ದುಪಡಿಗೊಂಡ ನಿಯಮಾವಳಿಗೂ ಸಿಒಎ ಮಾನ್ಯತೆ ನೀಡಿದೆ.

ಅದರಿಂದಾಗಿ ಈಗ ಕೇವಲ ನಾಲ್ಕು ಸಂಸ್ಥೆಗಳು ಮಾತ್ರ ಇನ್ನೂ ಲೋಧಾ ಸಮಿತಿಯ ಶಿಫಾರಸುಗಳ ಜಾರಿಗೆ ಅಸಮ್ಮತಿ ಹೊಂದಿರುವವರ ಪಟ್ಟಿಯಲ್ಲಿ ಉಳಿದಿವೆ. ಬಿಸಿಸಿಐ ಆಡಳಿತ ಮಂಡಳಿಗೆ ಅಕ್ಟೋಬರ್ 22ರಂದು ಚುನಾವಣೆ ನಿಗದಿಪಡಿಸಲಾಗಿದೆ. ಅದಕ್ಕಾಗಿ ಇದೇ 28ರಂದು ರಾಜ್ಯ ಸಂಸ್ಥೆಗಳು ತಮ್ಮ ಪ್ರತಿನಿಧಿಗಳ ಪಟ್ಟಿಯನ್ನು ಕಳುಹಿಸಬೇಕು. ನಂತರ ಸರ್ವಸದಸ್ಯರ ಸಭೆ ನಡೆಯಲಿದೆ.

‘ನಿಯಮಾವಳಿಯ ತಿದ್ದುಪಡಿ ಮತ್ತು ಕೆಲವು ಸ್ಪಷ್ಟನೆಗಳನ್ನು ಬಹಳಷ್ಟು ರಾಜ್ಯ ಸಂಸ್ಥೆಗಳು ಕೇಳಿದ್ದವು. ಅವರಿಗೆ ಸೂಕ್ತ ಸ್ಪಷ್ಟನೆ ನೀಡಲಾಗಿದೆ. ಆ ಸಂಸ್ಥೆಗಳ ಅನುಮಾನಗಳನ್ನು ಪರಿಹರಿಸಲಾಗಿದೆ’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

ಒಟ್ಟು 38 ರಾಜ್ಯ ಸಂಸ್ಥೆಗಳಿವೆ. ಅದರಲ್ಲಿ ಹೋದ ವಾರದವರೆಗೂ ಏಳು ಸಂಸ್ಥೆಗಳು ತಕರಾರು ಅರ್ಜಿ ಸಲ್ಲಿಸಿದ್ದವು. ಇದೀಗ ಕರ್ನಾಟಕ, ಛತ್ತೀಸಗಡ ಮತ್ತು ಮಧ್ಯಪ್ರದೇಶ ಸಮ್ಮತಿಸಿರುವುದರಿಂದ ಆ ಸಂಖ್ಯೆಯು ನಾಲ್ಕಕ್ಕೆ ಇಳಿದಂತಾಗಿದೆ. ಅವುಗಳೆಂದರೆ; ಹರಿಯಾಣ, ತಮಿಳುನಾಡು, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶ ಸಂಸ್ಥೆಗಳು.

‘ತಮಿಳುನಾಡು ಮತ್ತು ಹರಿಯಾಣ ಸಂಸ್ಥೆಗಳಿಂದ ಯಾವೊಬ್ಬ ಪ್ರತಿನಿಧಿಯೂ ನಮ್ಮನ್ನು ಇದುವರೆಗೆ ಸಂಪರ್ಕಿಸಿಲ್ಲ’ ಎಂದು ರಾಯ್ ತಿಳಿಸಿದ್ದಾರೆ.

ಚೌಧರಿ ನಕಾರ (ಪಿಟಿಐ): ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಮಹಾರಾಷ್ಟ್ರ ರಾಜ್ಯ ಕಾನೂನು ಆಯೋಗದ ಮಾಜಿ ಅಧ್ಯಕ್ಷ ಡಿ.ಎನ್. ಚೌಧರಿ ನಿರಾಕರಿಸಿದ್ದಾರೆ. ಈ ತರಹ ಚುನಾವಣೆ ನಡೆಸುವುದರಿಂದ 2018ರ ಜುಲೈ 5ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅಗೌರವಿಸಿದಂತಾಗುತ್ತದೆ ಎಂದು ಚೌಧರಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಯ್, ‘ಅವರ ಮಾತು ಸರಿಯಲ್ಲ. ಹಾಗಿದ್ದರೆ ಮೂವತ್ತು ರಾಜ್ಯಗಳು ಚುನಾವಣೆಗಳನ್ನು ಹೇಗೆ ನಡೆಸುತ್ತಿವೆ? ಹೋದ ವರ್ಷ ಜುಲೈನಲ್ಲಿ ನೀಡಿದ್ದ ತಡೆಯಾಜ್ಞೆ ಅದು’ ಎಂದಿದ್ದಾರೆ.

ಕೆಲವು ರಾಜ್ಯ ಸಂಸ್ಥೆಗಳು ಹೂಡಿರುವ ಮಧ್ಯಂತರ ತಕರಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿವೆ.

‘ಇದರಿಂದ ಸದ್ಯ ನಡೆಯಲಿರುವ ಚುನಾವಣೆ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಲ್ಲವೂ ನಿಗದಿಯಂತೆಯೇ ನಡೆಯಲಿದೆ. ಸಂಶಯ ಬೇಡ’ ಎಂದು ರಾಯ್ ಹೇಳಿದ್ದಾರೆ.

‘ನೋಂದಣಿ ಮಾಡಿಸಿ ಚುನಾವಣೆಗೆ ಸಿದ್ಧ’
ನಾವು ಕೆಲವು ತಿದ್ದಪಡಿಗಳೊಂದಿಗೆ ಸಲ್ಲಿಸಿದ್ದ ನಿಯಮಾವಳಿಯನ್ನು ಬಿಸಿಸಿಐ–ಸಿಒಎ ಮಾನ್ಯ ಮಾಡಿವೆ. ಇದು ಸಂತಸದ ವಿಷಯ. ಆ ನಿಯಮಾವಳಿಯನ್ನು ಕರ್ನಾಟಕ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗುವುದು ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಸಮಯಾವಕಾಶಕ್ಕೆ ಮನವಿ ಮಾಡಿದ್ದೇವೆ: ಸುಧಾಕರ್
ಚುನಾವಣೆ ದಿನದಿಂದ 21 ದಿನಗಳ ಮುನ್ನ ಸರ್ವಸದಸ್ಯರ ಸಭೆ ನಡೆಸಬೇಕು. ಅದಕ್ಕಿಂತ ಮುನ್ನ ಎಲ್ಲ ಸದಸ್ಯರಿಗೂ ಸಭೆಗೆ ಆಹ್ವಾನ ನೀಡಬೇಕು. ಅದಕ್ಕಾಗಿ ಹೆಚ್ಚುವರಿ ಸಮಯ ಬೇಕು. ಅದನ್ನು ನಾವು ಸಿಒಎಗೆ ಮನವಿ ಮಾಡಿದ್ದೇವೆ. ಅವರಿಂದ ಸೂಚನೆಗಾಗಿ ಕಾಯುತ್ತಿದ್ದೇವೆ. ಅವರು ಹೇಗೆ ಹೇಳುತ್ತಾರೆಯೋ ಹಾಗೆ ಮಾಡುತ್ತೇವೆ ಎಂದು ಕೆಎಸ್‌ಸಿಎ ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT