ಶನಿವಾರ, ಡಿಸೆಂಬರ್ 5, 2020
21 °C

‘ಯಾದವ್ ಅವರನ್ನು ಕೈಬಿಟ್ಟಿದ್ದೇಕೆ? ಆಯ್ಕೆ ಸಮಿತಿಯನ್ನು ಗಂಗೂಲಿ ಪ್ರಶ್ನಿಸಬೇಕು’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡವು ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ತಲಾ ಮೂರು ಏಕದಿನ, ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದಕ್ಕಾಗಿ ಸೋಮವಾರ ತಂಡಗಳನ್ನು ಪ್ರಕಟಿಸಲಾಗಿದೆ. ಆದರೆ, ಸದ್ಯ ಗಾಯಾಳಾಗಿರುವ ರೋಹಿತ್‌ ಶರ್ಮಾ ಮತ್ತು ಪ್ರತಿಭಾವಂತ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್‌ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಮಾತ್ರವಲ್ಲದೆ ರೋಹಿತ್‌ ಬದಲು ಕನ್ನಡಿಗ ಕೆಎಲ್‌ ರಾಹುಲ್‌ ಅವರಿಗೆ ಉಪನಾಯಕ ಸ್ಥಾನ ನೀಡಲಾಗಿದೆ. ಈ ಸಂಬಂಧ ಟೀಕೆಗಳು ವ್ಯಕ್ತವಾಗಿವೆ.

ಯಾದವ್‌ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. 12 ಪಂದ್ಯಗಳ 11 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಅವರು, ಮೂರು ಅರ್ಧಶತಕ ಸಹಿತ 362 ರನ್‌ ಗಳಿಸಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆ ಇತ್ತು.

ಯಾದವ್‌ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಹಿರಿಯ ಕ್ರಿಕೆಟಿಗರಾದ ಮನೋಜ್‌ ತಿವಾರಿ, ಹರ್ಭಜನ್‌ ಸಿಂಗ್‌ ಅವರು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ. ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್‌ ವೆಂಗ್‌ಸರ್ಕರ್ ಅವರೂ ಇದೀಗ ಭಜ್ಜಿ ಮತ್ತು ತಿವಾರಿ ಜೊತೆ ಸೇರಿದ್ದಾರೆ. ವೆಂಗ್‌ಸರ್ಕರ್, ಯಾದವ್‌ರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದನ್ನು ಗಂಗೂಲಿ ಪ್ರಶ್ನಿಸಲಿ ಎಂದಿದ್ದಾರೆ.

ಇದನ್ನೂ ಓದಿ: 

‘ಪ್ರಸ್ತುತ ದೇಶದ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಸೂರ್ಯ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ತಂಡಗಳಿಂದ ಕೈಬಿಟ್ಟದ್ದರಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ. ಸಂಪೂರ್ಣ ಸಾಮರ್ಥ್ಯದ ವಿಚಾರದಲ್ಲಿ ಸೂರ್ಯ ಅವರನ್ನು ನಾನು ಭಾರತ ತಂಡದ ಅತ್ಯುತ್ತಮ ಆಟಗಾರರೊಂದಿಗೆ ಹೋಲಿಕೆ ಮಾಡಬಲ್ಲೆ. ಅವರು ನಿರಂತರವಾಗಿ ರನ್‌ ಗಳಿಸುತ್ತಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇನ್ನೂ ಏನು ಮಾಡಬೇಕು ಎಂಬುದು ನನಗೆ ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಒಬ್ಬ ಬ್ಯಾಟ್ಸ್‌ಮನ್‌ ತನ್ನ 26 ರಿಂದ 34 ವರ್ಷಗಳವರೆಗೆ ಉತ್ತುಂಗದಲ್ಲಿರುತ್ತಾರೆ. ಸೂರ್ಯ (30) ಈಗ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಫಾರ್ಮ್‌ ಮತ್ತು ಫಿಟ್‌ನೆಸ್‌ ಮಾನದಂಡವಲ್ಲದಿದ್ದರೆ, ಮತ್ತೇನು? ಯಾರಾದರೂ ವಿವರಿಸುವಿರಾ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 

ಮುಂದುವರಿದು, ‘ರೋಹಿತ್‌ (ಶರ್ಮಾ) ಗಾಯದಿಂದಾಗಿ ತಂಡದಿಂದ ಹೊರಗಿರುವುದರಿಂದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಸೂರ್ಯ ಇರಬೇಕಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಸೂರ್ಯರನ್ನು ಕೈಬಿಟ್ಟಿದ್ದರ ಹಿಂದಿನ ಕಾರಣದ ಬಗ್ಗೆ ಆಯ್ಕೆ ಸಮಿತಿಯನ್ನು ಪ್ರಶ್ನಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ನವೆಂಬರ್‌ 27ರಿಂದ ಆರಂಭವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು