ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ಆಟಗಾರರಿಗೆ ಯೋ ಯೋ ಟೆಸ್ಟ್ ಕಡ್ಡಾಯ

ಭಾರತ ಕ್ರಿಕೆಟ್ ತಂಡದ ಆಯ್ಕೆ ಮಾನದಂಡಗಳ ಪರಿಷ್ಕರಣೆ; ಫಿಟ್‌ನೆಸ್‌ಗೆ ಬಿಸಿಸಿಐ ಆದ್ಯತೆ
Last Updated 1 ಜನವರಿ 2023, 21:36 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯ ಮಾನದಂಡಗಳಲ್ಲಿ ಯೋ ಯೋ ಫಿಟ್‌ನೆಸ್ ಪರೀಕ್ಷೆಯನ್ನು ಮರಳಿ ಸೇರ್ಪಡೆ ಮಾಡಲಾಗಿದೆ.

ಭಾನುವಾರ ಇಲ್ಲಿ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ತೀರ್ಮಾನಿಸಲಾಯಿತು. ಹೋದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ತಂಡವು ಸೋತಿತ್ತು. ಆಗಲೇ ಈ ಸಭೆ ನಡೆಸಲು ಯೋಜಿಸಲಾಗಿತ್ತು.

ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಆಯ್ಕೆ ಸಮಿತಿಯ ಚೇತನ್ ಶರ್ಮಾ ಹಾಜರಿದ್ದರು.

ಆಯ್ಕೆ ಪ್ರಕ್ರಿಯೆಯಲ್ಲಿ ಯೋ ಯೋ ಟೆಸ್ಟ್ ಜೊತೆಗೆ ಡೆಕ್ಸಾ (ಬೋನ್ ಸ್ಕ್ಯಾನ್‌ ಟೆಸ್ಟ್) ಅಥವಾ ಎಲುವು ಸಾಂದ್ರತೆ ಪರೀಕ್ಷೆ ಕೂಡ ಸೇರ್ಪಡೆಗೊಳಿಸಲಾಗಿದೆ.

‘ಮುಂದಿನ ವೇಳಾಪಟ್ಟಿ ಮತ್ತು ಐಸಿಸಿ ವಿಶ್ವಕಪ್ 2023 ಟೂರ್ನಿಗಳಿಗಾಗಿ ತಂಡವನ್ನು ಸಿದ್ಧಗೊಳಿಸುವ ದೃಷ್ಟಿಯಿಂದ ಎನ್‌ಸಿಎ ಮತ್ತು ಐಪಿಎಲ್ ಫ್ರ್ಯಾಂಚೈಸಿಗಳು ಜೊತೆಗೂಡಿ ಕಾರ್ಯನಿರ್ವಹಿಸಲಿವೆ. ಐಪಿಎಲ್ 2023ರ ಟೂರ್ನಿಯಲ್ಲಿ ಆಡುವ ಆಟಗಾರರಿಗೂ ಇಲ್ಲಿ ಸಿದ್ಧತೆಯ ಅವಕಾಶ ಸಿಗಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಭಾರತ ತಂಡದ ಪ್ರಮುಖ ಆಟಗಾರರು ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷದಲ್ಲಿ ಮಧ್ಯಮವೇಗಿ ದೀಪಕ್ ಚಾಹರ್, ಜಸ್‌ಪ್ರೀತ್ ಬೂಮ್ರಾ ಸೇರಿದಂತೆ ಕೆಲವು ಆಟಗಾರರು ಗಾಯ ಹಾಗೂ ಶಸ್ತ್ರಚಿಕಿತ್ಸೆಗಳಿಂದಾಗಿ ದೀರ್ಘ ಸಮಯದಿಂದ ತಂಡದಿಂದ ಹೊರಗುಳಿದಿದ್ದಾರೆ.

ಯೋ ಯೋ ಟೆಸ್ಟ್ ಅಂದರೇನು?

ಏರೋಬಿಕ್ ಫಿಟ್‌ನೆಸ್‌ ಪರೀಕ್ಷೆ ಮಾದರಿ ಇದಾಗಿದೆ. ಇದರಲ್ಲಿ ವೇಗದ ಓಟಕ್ಕೆ ಒತ್ತು ನೀಡಲಾಗಿದೆ. 20 ಮೀಟರ್‌ ಅಂತರದ ಓಟಗಳನ್ನು ಏರ್ಪಡಿಸಿ, ಪ್ರತಿ ಹಂತದಲ್ಲಿಯೂ ವೇಗವನ್ನು ಹೆಚ್ಚಿಸಲು ಸೂಚಿಸಲಾಗುತ್ತದೆ. ವೇಗ ಸಾಮರ್ಥ್ಯವನ್ನು ದಾಖಲಿಸಿ ಪಾಯಿಂಟ್ ನೀಡಲಾಗುತ್ತದೆ.

ವಿರಾಟ್ ಕೊಹ್ಲಿ ನಾಯಕರಾಗಿದ್ದ ಸಂದರ್ಭದಲ್ಲಿ ಈ ಪದ್ಧತಿ ಅಳವಡಿಸಲಾಗಿತ್ತು. ಆಗ 16.1 ಅಂಕಗಳನ್ನು ಅರ್ಹತಾ ಮಟ್ಟವನ್ನಾಗಿ ಇಡಲಾಗಿತ್ತು. ಈಗ 16.5ಕ್ಕೆ ಹೆಚ್ಚಿಸಲಾಗಿದೆ.

ಸಭೆಯಲ್ಲಿ ಶರ್ಮಾ

ಟಿ20 ವಿಶ್ವಕಪ್‌ ನಲ್ಲಿ ತಂಡ ಸೋತ ನಂತರ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಲಾಗಿತ್ತು. ಅದರ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಅವರು ಈ ಬಿಸಿಸಿಐ ಸಭೆಯಲ್ಲಿ ಭಾಗವಹಿಸಿದ್ದು ಅಚ್ಚರಿ ಮೂಡಿಸಿತು.

ಹೊಸ ಆಯ್ಕೆ ಸಮಿತಿಯನ್ನು ನೇಮಕ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಚೇತನ್ ತಮ್ಮ ಪುನರಾಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಆಟಗಾರ ಹರವಿಂದರ್ ಸಿಂಗ್ ಅರ್ಜಿ ಹಾಕಿದ್ದಾರೆ.

ದೇಶಿ ಟೂರ್ನಿಯಲ್ಲಿ ಆಡುವುದು ಕಡ್ಡಾಯ

ಐಪಿಎಲ್‌ (ಇಂಡಿಯನ್ ಪ್ರೀಮಿಯರ್ ಲೀಗ್) ಟೂರ್ನಿಯಲ್ಲಿ ಆಡುವ ಉದ್ದೇಶದಿಂದ ಕೆಂಪು ಚೆಂಡಿನ ಮಾದರಿಯನ್ನು ಆಟಗಾರರು ಕಡೆಗಣಿಸುವಂತಿಲ್ಲ. ಐಪಿಎಲ್‌ ನಲ್ಲಿ ಸಿಗುವ ದೊಡ್ಡ ಮೊತ್ತ ಹಣದ ಆಕರ್ಷಣೆಯಿಂದಾಗಿ ಇತ್ತೀಚಿನ ಬಹಳಷ್ಟು ಆಟಗಾರರು ಸೀಮಿತ ಓವರ್‌ಗಳ ಆಟಕ್ಕಷ್ಟೇ ಗಮನ ನೀಡುತ್ತಿದ್ದಾರೆ.

ಆದ್ದರಿಂದ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ, ಆಟಗಾರರು ಆಯ್ಕೆ ಪ್ರಕ್ರಿಯೆ ನಡೆಯುವ ವರ್ಷದಲ್ಲಿ ದೇಶಿ ಟೂರ್ನಿಗಳಲ್ಲಿ ಆಡಿರುವುದು ಕಡ್ಡಾಯ.

‘ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಬೇಕಾದರೇ ದೇಶಿ ಟೂರ್ನಿಗಳಲ್ಲಿ ಆಡಲೇಬೇಕು. ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ’ ಎಂದು ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT