ಬಿಸಿಸಿಐಗೆ ಇನ್ನು ಮಾಹಿತಿ ಹಕ್ಕಿನ ‘ಬಿಸಿ’

7
ಅರ್ಜಿ ಪಡೆದು ಮಾಹಿತಿ ನೀಡಲು ಹದಿನೈದು ದಿನಗಳ ಒಳಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ

ಬಿಸಿಸಿಐಗೆ ಇನ್ನು ಮಾಹಿತಿ ಹಕ್ಕಿನ ‘ಬಿಸಿ’

Published:
Updated:

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನು ಮುಂದೆ ತನ್ನ ಎಲ್ಲ ವ್ಯವಹಾರಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಬದ್ಧ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂಬ ಜನರ ಬಹುದಿನಗಳ ಬೇಡಿಕೆಗೆ ಸೋಮವಾರ ಮಾನ್ಯತೆ ಸಿಕ್ಕಿದೆ.

ಕಾನೂನು ತಜ್ಞರ ಜೊತೆ ಚರ್ಚೆ, ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪುಗಳ ಪರಿಶೀಲನೆ ಹಾಗೂ ಕೇಂದ್ರ ಮಾಹಿತಿ ಆಯೋಗದ ಅಧಿಕಾರಿಗಳ ಜೊತೆ ನಡೆಸಿದ ಸಂವಾದದ ನಂತರ ಕೇಂದ್ರ ಮಾಹಿತಿ ಆಯೋಗ ಈ ಕುರಿತ ನಿರ್ಧಾರವನ್ನು ಪ್ರಕಟಿಸಿದೆ. ಬಿಸಿಸಿಐ ವ್ಯಾಪ್ತಿಯ ಎಲ್ಲ ರಾಜ್ಯ ಸಂಸ್ಥೆಗಳಿಗೂ ಇದು ಅನ್ವಯವಾಗಲಿದೆ.

ಆಯೋಗದ ಸೂಚನೆಯಂತೆ, ಬಿಸಿಸಿಐ ಮುಂದಿನ 15 ದಿನಗಳ ಒಳಗೆ ಸಾರ್ವಜನಿಕರ ಅರ್ಜಿಗಳ ಪರಿಶೀಲನೆ ನಡೆಸಿ ವಿಲೇವಾರಿ ಮಾಡಲು ಸೂಕ್ತ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆರ್‌ಟಿಐ ಕಾಯ್ದೆಯ 2(ಎಚ್‌) ನಿಯಮದಡಿ ಇದು ರೂಪುಗೊಳ್ಳಬೇಕು ಎಂದು ಸೂಚಿಸಿದೆ.

37 ಪುಟಗಳ ಸುದೀರ್ಘ ಆದೇಶದಲ್ಲಿ ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯಲು ಅವರು ‘ಬಿಸಿಸಿಐ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿದ್ದು ಮಾಹಿತಿ ನೀಡಲು ಬದ್ಧ ಎಂಬುದನ್ನು ಸುಪ್ರೀಂ ಕೋರ್ಟ್ ಕೂಡ ಹೇಳಿದೆ’ ಎಂದು ತಿಳಿಸಿದ್ದಾರೆ.

‘ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಕೇಂದ್ರ ಸಹಾಯಕ ಸಾರ್ವಜನಿಕ ಅಧಿಕಾರಿ ಹುದ್ದೆಗೆ ತತ್ಸಮಾನವಾದ ಅಧಿಕಾರಿಯನ್ನು ನೇಮಕ ಮಾಡುವಂತೆ ಆಚಾರ್ಯಲು ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿಗಳ ಸಮಿತಿಗೆ ಸೂಚಿಸಿದ್ದಾರೆ.

ಗೀತಾ ರಾಣಿ ಅರ್ಜಿಯ ಪರಿಣಾಮ: ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂದು ಗೀತಾ ರಾಣಿ ಎಂಬುವವರು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯವನ್ನು ಕೋರಿದ್ದರು. ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಅನುಸರಿಸುವ ವಿಧಾನವನ್ನು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು. ಆದರೆ ಅವರ ಅರ್ಜಿಗೆ ಸೂಕ್ತ ಸ್ಪಂದನೆ ಸಿಗದ ಕಾರಣ ಮಾಹಿತಿ ಆಯೋಗವನ್ನು ಸಂಪರ್ಕಿಸಿದ್ದರು. ಇದರ ಪರಿಣಾಮ ಈಗ ಆದೇಶ ಹೊರಬಿದ್ದಿದೆ.

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !