ಆರ್‌ಟಿಐ ವಿರುದ್ಧ ಬಿಸಿಸಿಐ ಸೆಡ್ಡು?

7

ಆರ್‌ಟಿಐ ವಿರುದ್ಧ ಬಿಸಿಸಿಐ ಸೆಡ್ಡು?

Published:
Updated:

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು(ಬಿಸಿಸಿಐ) ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ತರುವ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಏರಲು ಬಿಸಿಸಿಐನ ಪದಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

‘ಬಿಸಿಸಿಐ ಯನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು. ಹದಿನೈದು ದಿನಗಳೊಳಗೆ ಮಂಡಳಿಯು ಈ ನಿಯಮವನ್ನು ಜಾರಿಗೆ ತರಬೇಕು’ ಎಂದು ಕೇಂದ್ರ ಮಾಹಿತಿ ಹಕ್ಕು ಆಯೋಗವು (ಸಿಐಸಿ)ತೀರ್ಪು ನೀಡಿದೆ.

‘ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ)ಯು ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಧೋರಣೆ ತಾಳಿದೆ. ಇದರಿಂದಾಗಿ ಸಿಐಸಿಗೆ ಖಚಿತ ಮಾಹಿತಿಗಳು ಲಭಿಸಿಲ್ಲ. ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಅಲ್ಲ. ಇದೊಂದು ಸ್ವಾಯತ್ತ ಕ್ರೀಡಾ ಸಂಸ್ಥೆಯಾಗಿದೆ. ಆದರೆ ಆರ್‌ಟಿಐ ವ್ಯಾಪ್ತಿಗೆ ತರುವ ಮೂಲಕ ಇದನ್ನು ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನಾಗಿ ಮಾಡಲಾಗುತ್ತಿದೆ’ ಎಂದು ಬಿಸಿಸಿಐ ಪದಾಧಿಕಾರಿಗಳು ದೂರಿದ್ದಾರೆ.

‘ಹೋದ ಜುಲೈ 10ರಂದು ಸಿಐಸಿಯು ಈ ಕುರಿತು ವಿಚಾರಣೆ ನಡೆಸಿತ್ತು. ಬಿಸಿಸಿಐ ಏಕೆ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಳಿತ್ತು. ಆಗ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಶೋಕಾಸ್ ನೋಟಿಸ್ ನೀಡಿದಾಗಲೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಹೈಕೋರ್ಟ್‌ನಲ್ಲಿ ಸಿಐಸಿಯ ತೀರ್ಪು ಪ್ರಶ್ನಿಸುವುದೊಂದೇ ದಾರಿ’ ಎಂದು ಮಂಡಳಿಯ ಹಿರಿಯ ಪದಾಧಿಕಾರಿಯು ತಿಳಿಸಿದ್ದಾರೆ.

‘ಮಂಡಳಿಯ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಆರ್‌ಟಿಐ ಕುಣಿಕೆಯನ್ನು ಬಿಸಿಸಿಐ ಕುತ್ತಿಗೆಗೆ ಬಿಗಿಯಲಾಗುತ್ತಿದೆ’ ಎಂದು  ಅವರು ಟೀಕಿಸಿದ್ದಾರೆ.

‘ಬಿಸಿಸಿಐ ಭಾಗಶಃ ಈ ನಿಯಮದ ವ್ಯಾಪ್ತಿಗೆ ಒಳಪಡಲಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಆದರೆ ಅದು ಹಾಗಿಲ್ಲ. ಸಂಪೂರ್ಣವಾಗಿ ಒಳಪಡಬೇಕು ಅಥವಾ ಪೂರ್ತಿಯಾಗಿ ಇಲ್ಲ. ಒಂದೊಮ್ಮೆ ಒಳಪಡುವುದಾದರೆ ಹಲವು ಪ್ರಶ್ನೆಗಳಿಗೆ ಸಿಒಎ ಮತ್ತು ಬಿಸಿಸಿಐ ಉತ್ತರಿಸಬೇಕಾಗುತ್ತದೆ’ ಎಂದಿದ್ದಾರೆ.

‘ಮಂಡಳಿಯ ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಿರುವುದು ಸುಪ್ರೀಂ ಕೋರ್ಟ್‌. ಅದರ ಸಂಪೂರ್ಣ ಶ್ರೇಯ ನ್ಯಾಯಾಲಯಕ್ಕೆ ಸಲ್ಲಬೇಕು. ವಿನೋದ್ ರಾಯ್ ಮತ್ತು ಡಯಾನ ಎಡುಲ್ಜಿ ಅವರಿಗೆ ಅಲ್ಲ. ಅವರು ನಿಮಿತ್ತ ಮಾತ್ರ ಅಷ್ಟೇ’ ಎಂದು ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

‘ಸಿಐಸಿಯ ತೀರ್ಪನ್ನು ನಮ್ಮ ಕಾನೂನು ತಜ್ಞರು ಅಥ್ಯಯನ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡಲಿದ್ದೇವೆ’ ಎಂದಿದ್ದಾರೆ.

 ಪಾರದರ್ಶಕ ಆಡಳಿತವೇ ಗುರಿ: ಈ ಕುರಿತು ಪ್ರತಿಕ್ರಿಯಿಸಿರುವ ಸಿಒಎ ಮುಖ್ಯಸ್ಥ ವಿನೋದ್ ರಾಯ್, ‘ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ನೈತಿಕತೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ.

‘ನಮ್ಮ ವೆಬ್‌ಸೈಟ್ ಮೂಲಕ ಮಂಡಳಿಯ ಆಗುಹೋಗುಗಳನ್ನು ಜನರ ಎದುರಿಗೆ ಇಡುತ್ತಿದ್ದೇವೆ. ಅವರಿಂದ ಸಲಹೆಗಳನ್ನೂ ಪಡೆಯುತ್ತೇವೆ. ಮುಕ್ತ ಹಾಗೂ ಉತ್ತರದಾಯಿತ್ವದ ಮಾಹಿತಿ ವಿನಿಮಯ ನಮ್ಮ ಉದ್ದೇಶ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !