ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರಿಗೆ ‘ಹಲಾಲ್’ ಮಾಂಸ: ಬಿಸಿಸಿಐ ಶಿಫಾರಸಿಗೆ ಆಕ್ರೋಶ

Last Updated 23 ನವೆಂಬರ್ 2021, 15:55 IST
ಅಕ್ಷರ ಗಾತ್ರ

ಕಾನ್ಪುರ: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ‘ಹಲಾಲ್’ ಮಾಂಸಹಾರವನ್ನು ನೀಡಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಡಿರುವ ಶಿಫಾರಸು ಮಾಡಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಊಟದ ಪಟ್ಟಿ ಮತ್ತು ಕೇಟರಿಂಗ್ ಮಾಹಿತಿ ಪುಸ್ತಿಕೆಯಲ್ಲಿ ಹಂದಿ ಮತ್ತು ದನದ ಮಾಂಸದ ಖಾದ್ಯಗಳನ್ನು ಯಾವುದೇ ರೂಪದಲ್ಲಿಯೂ ನೀಡುವಂತಿಲ್ಲವೆಂದೂ ನಮೂದಿಸಲಾಗಿದೆ.

ಈ ಕುರಿತು ಆಕ್ಷೇಪ ಎತ್ತಿರುವ ಬಿಜೆಪಿ ವಕ್ತಾರ ಮತ್ತು ವಕೀಲ ಗೌರವ್ ಗೋಯಲ್, ‘ಈ ನಿಯಮವನ್ನು ತಕ್ಷಣ ಹಿಂಪಡೆಯಬೇಕು. ಆಟಗಾರರು ತಮಗೆ ಬೇಕಾಗಿರುವುದನ್ನು ತಿನ್ನುವ ಹಕ್ಕು ಹೊಂದಿದ್ದಾರೆ. ಕೇವಲ ಹಲಾಲ್ ಮಾಂಸ ನೀಡಬೇಕು ಎಂದು ಕಡ್ಡಾಯ ಮಾಡಲು ಬಿಸಿಸಿಐ ಯಾರು? ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಇದು ನಿಯಮಬಾಹೀರ‘ ಎಂದಿದ್ದಾರೆ.

ಈ ಕುರಿತು ಬಿಸಿಸಿಐನ ಯಾವುದೇ ಅಧಿಕಾರಿಯೂ ಮಾತನಾಡಲು ಒಪ್ಪಲಿಲ್ಲ. ಆಟಗಾರ ಪೋಷಕಾಂಶ ಅಗತ್ಯಗಳ ಆಧಾರದಲ್ಲಿ ತಂಡದ ನೆರವು ಸಿಬ್ಬಂದಿ, ವೈದ್ಯಕೀಯ ಪರಿಣತರು ಮತ್ತು ಆಹಾರತಜ್ಞರು ಸೇರಿ ಈ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆಂದು ತಿಳಿದುಬಂದಿದೆ.

‘ನಾವು ಆಡುವಾಗಲೂ ಕೊಡಲಾಗುತ್ತಿದ್ದ ಊಟ, ತಿಂಡಿಯ ಯಾದಿಯಲ್ಲಿ ದನ ಮತ್ತು ಹಂದಿ ಮಾಂಸಗಳ ಖಾದ್ಯಗಳಿರುವುದನ್ನು ನೋಡಿಲ್ಲ. ಪಂದ್ಯದ ದಿನ ಅಥವಾ ಡ್ರೆಸ್ಸಿಂಗ್ ಕೋಣೆಯಲ್ಲಿಯೂ ಈ ಖಾದ್ಯಗಳನ್ನು ಉಣಬಡಿಸಿರಲಿಲ್ಲ. ಭಾರತದಲ್ಲಿ ಆಡುವಾಗಲಂತೂ ಇಲ್ಲವೇ ಇಲ್ಲ. ಆದ್ದರಿಂದ ಇದರಲ್ಲಿ ಏನೂ ಹೊಸದಲ್ಲ. ದನ, ಮೇಕೆ ಮಾಂಸದಲ್ಲಿ ಕೊಬ್ಬಿನಂಶ ಜಾಸ್ತಿ ಇರುವುದರಿಂದ ಕ್ರಿಕೆಟಿಗರಿಗೆ ಅದನ್ನು ತಿನ್ನುವ ಸಲಹೆಯನ್ನು ನೀಡುವುದಿಲ್ಲ ಎಂಬುದು ಸಾಮಾನ್ಯ ಜ್ಞಾನವಷ್ಟೇ. ಪ್ರೋಟಿನ್‌ಯುಕ್ತ ಆಹಾರಕ್ಕೆ ಒತ್ತು ನೀಡಲಾಗುವುದರಿಂದ ಕೋಳಿಮಾಂಸ ಮತ್ತು ಮೀನಿನ ಖಾದ್ಯಗಳನ್ನು ನೀಡುತ್ತಾರೆ’ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ.

ಸಾಮಾನ್ಯವಾಗಿ ಕ್ರಿಕೆಟಿಗರ ಆಹಾರದ ಪಟ್ಟಿಯಲ್ಲಿ ಕೋಳಿ ಮತ್ತು ಆಡಿನ ಮಾಂಸದ ಖಾದ್ಯಗಳಿರುವುದು ವಾಡಿಕೆ. ಹುರಿದ ಚಿಕನ್, ಲ್ಯಾಂಬ್ ಚಾಪ್ಸ್, ಗ್ರಿಲ್ ಚಿಕನ್, ಗೋವನ್ ಫಿಶ್ ಕರಿ, ತಂಗಡಿ ಕಬಾಬ್, ಚಿಕನ್ ಗಾರ್ಲಿಕ್ ಸಾಸ್ ಮತ್ತು ವೆಜಿಟೇಬಲ್‌ ಪದಾರ್ಥಗಳನ್ನು ನೀಡಲಾಗುತ್ತಿದೆ.

ಗುರುವಾರ ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT