‘ಬಳ್ಳಾರಿ ಟಸ್ಕರ್ಸ್’ ತಂಡದ ಮಾಲೀಕ ಸೆರೆ

7
ಪಾರ್ಟಿ ಗುಂಗಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪ

‘ಬಳ್ಳಾರಿ ಟಸ್ಕರ್ಸ್’ ತಂಡದ ಮಾಲೀಕ ಸೆರೆ

Published:
Updated:
Deccan Herald

ಬೆಂಗಳೂರು: ತಡರಾತ್ರಿವರೆಗೂ ಅಬ್ಬರದ ಸಂಗೀತ ಹಾಕಿಕೊಂಡು ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕರ್ನಾಟಕ ಪ್ರೀಮಿಯರ್ ಲೀಗ್‌ನ (ಕೆಪಿಎಲ್‌) ‘ಬಳ್ಳಾರಿ ಟಸ್ಕರ್ಸ್‌’ ತಂಡದ ಮಾಲೀಕ ಅರವಿಂದ್‌ ವೆಂಕಟೇಶ್ ರೆಡ್ಡಿ ಅವರನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿ ಮುಖ್ಯರಸ್ತೆಯ ಕಾರ್ತಿಕ್‌ನಗರದಲ್ಲಿರುವ ಅರವಿಂದ್ ಒಡೆತನದ ‘ಇ–ಝೋನ್’ ಕ್ಲಬ್‌ನಲ್ಲಿ ಈ ಪ್ರಸಂಗ ನಡೆದಿದೆ.

‘ತಂಡದ ಆಟಗಾರರು ಹಾಗೂ ಬೆಂಬಲಿಗರಿಗಾಗಿ ಅರವಿಂದ್ ಕ್ಲಬ್‌ನಲ್ಲಿ ಶನಿವಾರ ರಾತ್ರಿ ಪಾರ್ಟಿ ಆಯೋಜಿಸಿದ್ದರು. 1 ಗಂಟೆಯಾದರೂ ಅಬ್ಬರದ ಸಂಗೀತ ಬಂದ್ ಮಾಡಿರಲಿಲ್ಲ. ಪಾರ್ಟಿಯಿಂದ ತಮಗೆ ತೊಂದರೆ ಆಗುತ್ತಿರುವುದಾಗಿ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಕೂಡಲೇ ಎಚ್‌ಎಎಲ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಆನಂದ್ ಹಾಗೂ ಕಾನ್‌ಸ್ಟೆಬಲ್ ರಾಜುಗೌಡ ಅವರ ಸ್ಥಳಕ್ಕೆ ತೆರಳಿದ್ದರು’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಗೀತ ಬಂದ್ ಮಾಡುವಂತೆ ಹೇಳಿದಾಗ ಅರವಿಂದ್ ವಾಗ್ವಾದ ಶುರು ಮಾಡಿದ್ದಾರೆ. ‘ನಾನು ಯಾರು ಗೊತ್ತಾ. ಪ್ರಭಾವಿ ರಾಜಕಾರಣಿಗಳೆಲ್ಲ ನನ್ನ ಸ್ನೇಹಿತರು. ಸುಮ್ಮನೆ ಇಲ್ಲಿಂದ ಹೊರಟು ಹೋಗಿ’ ಎಂದಿದ್ದಾರೆ. ಆ ಮಾತಿಗೆ ಸಿಬ್ಬಂದಿ ಸೊಪ್ಪು ಹಾಕದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಸಿಬ್ಬಂದಿಯನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ.'

‘ಆ ನಂತರ ಠಾಣೆಗೆ ಮರಳಿದ ಆನಂದ್, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅರವಿಂದ್ ವಿರುದ್ಧ ದೂರು ಕೊಟ್ಟರು. ಆರೋಪಿಯನ್ನು ಬೆಳಿಗ್ಗೆ 5 ಗಂಟೆ ಸುಮಾರಿಗೆ ಫ್ರೇಜರ್‌ಟೌನ್‌ನ ಅವರ ಮನೆಯಿಂದಲೇ ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 11

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !