‘ಸಾವಿರ’ದ ಟೆಸ್ಟ್‌ಗೆ; ಗೆಲುವಿನ ಹಾರ

7
ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್: ಗೆಲುವಿನಂಚಿನಲ್ಲಿ ಎಡವಿದ ವಿರಾಟ್ ಬಳಗ

‘ಸಾವಿರ’ದ ಟೆಸ್ಟ್‌ಗೆ; ಗೆಲುವಿನ ಹಾರ

Published:
Updated:
Deccan Herald

ಬರ್ಮಿಂಗ್‌ಹ್ಯಾಂ: ಇಂಗ್ಲೆಂಡ್ ತಂಡವು ಒಂದು ಸಾವಿರ ಟೆಸ್ಟ್ ಪಂದ್ಯಗಳನ್ನು ಆಡಿದ ಏಕೈಕ ತಂಡ ಎಂಬ ಹೆಗ್ಗಳಿಕೆಯ ಕಿರೀಟಕ್ಕೆ ಜಯದ ಮೆರುಗನ್ನು ತುಂಬಿತು.

ಶನಿವಾರ ಎಜ್‌ಬಾಸ್ಟನ್‌ನಲ್ಲಿ ವಿರಾಟ್ ಕೊಹ್ಲಿಯ ಛಲದ ಆಟಕ್ಕೆ ತಡೆಯೊಡ್ಡಿದ ಇಂಗ್ಲೆಂಡ್ ವೇಗಿ ಬೆನ್‌ ಸ್ಟೋಕ್ಸ್‌ ತಮ್ಮ ತಂಡಕ್ಕೆ 31 ರನ್‌ಗಳ ಜಯದ ಕಾಣಿಕೆ ನೀಡಿದರು. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಹೊಡೆದಿದ್ದ ವಿರಾಟ್‌  ಆಟ ವ್ಯರ್ಥವಾಯಿತು.

ಮೊದಲ ಇನಿಂಗ್ಸ್‌ನಲ್ಲಿ 13 ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತ ತಂಡವು ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 180 ರನ್‌ಗಳಿಗೆ ಕಟ್ಟಿಹಾಕಿತ್ತು. ಅದರೊಂದಿಗೆ 194 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು.  ದಿನದಾಟದ ಕೊನೆಗೆ 110 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.  ಆದ್ದರಿಂದ ಶನಿವಾರದ ಆಟವು ತೀವ್ರ ಕುತೂಹಲ ಕೆರಳಿಸಿತ್ತು. ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರು ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುವ ನಿರೀಕ್ಷೆ ಮೂಡಿತ್ತು. ಆದರೆ ನಾಲ್ಕನೇ ದಿನದಾಟದ ಆರಂಭದಲ್ಲಿಯೇ ಜೇಮ್ಸ್‌ ಆ್ಯಂಡರ್ಸನ್ ಅವರು ದಿನೇಶ್ ಕಾರ್ತಿಕ್ ವಿಕೆಟ್ ಕಬಳಿಸಿದರು. ಬಿರುಗಾಳಿ ವೇಗದಲ್ಲಿ ನುಗ್ಗಿ ಬಂದ ಚೆಂಡನ್ನು ಆಡುವ ಯತ್ನದಲ್ಲಿ ದಿನೇಶ್ ಅವರು ಡೇವಿಡ್ ಮಲಾನ್ ಗೆ ಕ್ಯಾಚಿತ್ತರು. ಕಾರ್ತಿಕ್ ಮತ್ತು ವಿರಾಟ್ ಆರನೇ ವಿಕೆಟ್‌ ಜೊತೆಯಾಟದಲ್ಲಿ  42 ರನ್‌ ಸೇರಿಸಿದರು.

ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ತಾಳ್ಮೆಯಿಂದ ಆಡಿದರು. ವಿರಾಟ್ ಕೂಡ ಎಚ್ಚರಿಕೆಯಿಂದ ಆಡುತ್ತ ರನ್‌ಗಳನ್ನು ಸೇರಿಸುತ್ತಿದ್ದರು. 88 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಈ ಹಂತದಲ್ಲಿ ಭಾರತವು ಜಯಿಸುವ ಭರವಸೆ ಒಡಮೂಡಿತ್ತು. ಆದರೆ, ಆದರೆ ಹಾಗಾಗಲು ಬೆನ್ಸ್‌ ಸ್ಟೋಕ್ಸ್‌ (40ಕ್ಕೆ4) ಅವಕಾಶ ನೀಡಲಿಲ್ಲ. ಚೆಂಡು ಅನಿರೀಕ್ಷಿತ ಬೌನ್ಸ್‌ ಮತ್ತು ತಿರುವು ಪಡೆದು ನುಗ್ಗುತ್ತಿದ್ದ ಪಿಚ್‌ನ ಗುಣವನ್ನು ಸಮರ್ಥವಾಗಿ ಬಳಸಿಕೊಂಡರು.

47ನೇ ಓವರ್‌ನಲ್ಲಿ ಬೆನ್ ಹಾಕಿದ ನೇರ ಎಸೆತ ಕೊಹ್ಲಿ ಪ್ಯಾಡ್‌ಗೆ ಅಪ್ಪಳಿಸಿತು. ಇಂಗ್ಲೆಂಡ್‌ ತಂಡದಲ್ಲಿ ವಿಜಯೋತ್ಸವ ಮುಗಿಲುಮುಟ್ಟಿತು. ಅದೇ ಓವರ್‌ನಲ್ಲಿ ಮೊಹಮ್ಮದ್ ಶಮಿ ವಿಕೆಟ್‌ ಅನ್ನೂ ಬೆನ್ ಕಬಳಿಸಿದರು. ನಂತರ ಕ್ರೀಸ್‌ಗೆ ಬಂದ ಇಶಾಂತ್ ಶರ್ಮಾ (11 ರನ್) ಅವರು  ಹಾರ್ದಿಕ್ ಪಾಂಡ್ಯ ಜೊತೆಗೂಡಿ ಉತ್ತಮವಾಗಿ ಆಡಿದರು. ಆದರೆ, ಸ್ಪಿನ್ನರ್ ರಶೀದ್ ಬೌಲಿಂಗ್‌ನಲ್ಲಿ ಪಾದಚಲನೆಯಲ್ಲಿ ಎಡವಟ್ಟು ಮಾಡಿಕೊಂಡ ಇಶಾಂತ್ ಎಲ್‌ಬಿ ಆದರು. 55ನೇ ಓವರ್‌ನಲ್ಲಿ ಸ್ಟೋಕ್ಸ್‌ ಅವರು ಪಾಂಡ್ಯ ವಿಕೆಟ್‌ ಕಬಳಿಸಿ ಸಂಭ್ರಮಿಸಿದರು.


ಪಂದ್ಯದಲ್ಲಿ ಸೋತ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ ರೀತಿ –ರಾಯಿಟರ್ಸ್ ಚಿತ್ರ

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 287 ಮತ್ತು 180, ಭಾರತ 274 ಮತ್ತು 54.2 ಓವರ್‌ಗಳಲ್ಲಿ 162 (ವಿರಾಟ್ ಕೊಹ್ಲಿ 51, ದಿನೇಶ್ ಕಾರ್ತಿಕ್ 20, ಹಾರ್ದಿಕ್ ಪಾಂಡ್ಯ 31, ಇಶಾಂತ್ ಶರ್ಮಾ 11, ಜೇಮ್ಸ್‌ ಆ್ಯಂಡರ್ಸನ್ 50ಕ್ಕೆ2, ಸ್ಟುವರ್ಟ್‌ ಬ್ರಾಡ್ 43ಕ್ಕೆ2, ಬೆನ್ ಸ್ಟೋಕ್ಸ್‌ 40ಕ್ಕೆ4, ಸ್ಯಾಮ್ ಕರನ್ 18ಕ್ಕೆ1, ಆದಿಲ್ ರಶೀದ್ 9ಕ್ಕೆ1 ) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 31 ರನ್‌ಗಳ ಜಯ. ಪಂದ್ಯಶ್ರೇಷ್ಠ: ಸ್ಯಾಮ್ ಕರನ್. ಮುಂದಿನ ಪಂದ್ಯ: ಆಗಸ್ಟ್‌ 9ರಿಂದ13 (ಲಂಡನ್).

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !