ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಷ್ ಪಾಂಡೆ ಬಳಗಕ್ಕೆ ‘ಸೂಪರ್’ ಜಯ

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌: ಸೆಮಿಫೈನಲ್‌ಗೆ ಕರ್ನಾಟಕ
Last Updated 19 ನವೆಂಬರ್ 2021, 1:42 IST
ಅಕ್ಷರ ಗಾತ್ರ

ನವದೆಹಲಿ: ಮನೀಷ್ ಪಾಂಡೆಯ ಒಂದು ನಿಖರ ಥ್ರೋ ಮತ್ತು ಒಂದು ಸಿಕ್ಸರ್‌ನಿಂದಾಗಿ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಗುರುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಂಗಾಳ ಎದುರು ಸೂಪರ್‌ ಓವರ್‌ನಲ್ಲಿ ಮನೀಷ್ ಪಾಂಡೆ ಬಳಗವು ಗೆದ್ದಿತು. ದೇಶಿ ಟ್ವೆಂಟಿ–20 ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿ ದಾಖಲಾಯಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 160 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬಂಗಾಳ ತಂಡವೂ 19.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 160 ರನ್ ಗಳಿಸಿತ್ತು. ಕೊನೆಯ ಎಸೆತದಲ್ಲಿ ಇನ್ನೊಂದು ರನ್ ಗಳಿಸಿ ಜಯಿಸುವ ಒತ್ತಡದಲ್ಲಿತ್ತು. ವಿದ್ಯಾಧರ್ ಪಾಟೀಲ ಹಾಕಿದ ಎಸೆತವನ್ನು ಕವರ್ಸ್‌ನತ್ತ ಹೊಡೆದು ಒಂದು ರನ್ ಹೊಡೆಯಲು ಯತ್ನಿಸಿದ ಆಕಾಶ್ ದೀಪ್‌ ರನ್‌ಔಟ್ ಆಗಲು ಪಾಂಡೆಯ ನಿಖರ ಥ್ರೋ ಕಾರಣವಾಯಿತು.

ಸೂಪರ್ ಓವರ್‌ನಲ್ಲಿ ಬಂಗಾಳ ತಂಡವು ಮೊದಲು ಬ್ಯಾಟಿಂಗ್ ಮಾಡಿತು. 2 ವಿಕೆಟ್ ಕಳೆದುಕೊಂಡು 5 ರನ್‌ ಗಳಿಸುವಲ್ಲಿ ಮಾತ್ರ ಸಫಲವಾಯಿತು. ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ ಹಾಕಿದ ಈ ಓವರ್‌ನ ಎರಡನೇ ಎಸೆತದಲ್ಲಿಯೇ ಕೈಫ್ ಅಹಮದ್ ವಿಕೆಟ್ ಗಳಿಸಿದರು. ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದ ಶ್ರೀವತ್ಸ್ ಗೋಸ್ವಾಮಿ ನಾಲ್ಕನೇ ಎಸೆತದಲ್ಲಿ ರನ್‌ಔಟ್ ಆದರು. ಪ್ರವೀಣ್ ದುಬೆ ಚುರುಕಾದ ಫೀಲ್ಡಿಂಗ್‌ನಿಂದಾಗಿ ಇದು ಸಾಧ್ಯವಾಯಿತು.

ಗೆಲುವಿಗಾಗಿ ಆರು ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕದ ನಾಯಕ ಮನೀಷ್ ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಸಿಕ್ಸರ್‌ ಎತ್ತಿ ಜಯದ ಮುದ್ರೆಯೊತ್ತಿದರು.

ಇದರೊಂದಿಗೆ ಬಂಗಾಳದ ಅಜೇಯ ಓಟಕ್ಕೆ ತಡೆ ಬಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬಂಗಾಳ ಎದುರು ಅನುಭವಿಸಿದ್ದ ಸೋಲಿಗೆ ಪಾಂಡೆ ಬಳಗ ಮುಯ್ಯಿ ತೀರಿಸಿಕೊಂಡಿತು.

ಕರುಣ್ ನಾಯರ್ ಮಿಂಚು
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಹೋರಾಟದ ಮೊತ್ತ ಗಳಿಸಲು ಕರುಣ್ ನಾಯರ್ (ಅಜೇಯ 55; 29ಎಸೆತ, 4ಬೌಂಡರಿ, 3ಸಿಕ್ಸರ್) ಮಿಂಚಿನ ಅರ್ಧಶತಕ ಕಾರಣವಾಯಿತು. ರೋಹನ್ ಕದಂ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಬಿ.ಆರ್. ಶರತ್ (4 ರನ್) ಈ ಪಂದ್ಯದಲ್ಲಿಯೂ ವಿಫಲರಾದರು. ಈ ಹಂತದಲ್ಲಿ ರೋಹನ್ ಮತ್ತು ಪಾಂಡೆ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಆದರೆ, ರನ್‌ ಗಳಿಕೆಯ ವೇಗ ಹೆಚ್ಚಲಿಲ್ಲ. ಒಂಬತ್ತನೇ ಓವರ್‌ನಲ್ಲಿ ರೋಹನ್ ಔಟಾದರು. ಕ್ರೀಸ್‌ಗೆ ಬಂದ ಅನುಭವಿ ಬ್ಯಾಟ್ಸ್‌ಮನ್ ಕರುಣ್ ಆಟಕ್ಕೆ ಬೌಲರ್‌ಗಳು ಸುಸ್ತಾದರು. ಅಭಿನವ್ ಮನೋಹರ್ (19; 9ಎಸೆತ, 3ಬೌಂಡರಿ, 1ಸಿಕ್ಸರ್) ಮತ್ತು ಅನಿರುದ್ಧ ಜೋಶಿ (16; 10ಎ) ಮಹತ್ವದ ಕಾಣಿಕೆ ನೀಡಿದರು.

ಬಂಗಾಳ ತಂಡಕ್ಕೆ ಆರಂಭದಲ್ಲಿಯೇ ಕರ್ನಾಟಕದ ಮಧ್ಯಮವೇಗಿ ವಿದ್ಯಾಧರ ಪಾಟೀಲ್ ಪೆಟ್ಟುಕೊಟ್ಟರು. ಅಭಿಷೇಕ್ ದಾಸ್ ಖಾತೆ ತೆರೆಯುವ ಮುನ್ನವೇ ಔಟಾದರು. ಋತಿಕ್ ಚಟರ್ಜಿ (51; 40ಎ), ಗೋಸ್ವಾಮಿ (22; 10ಎ) ತಂಡದ ಇನಿಂಗ್ಸ್‌ಗೆ ಬಲ ತುಂಬಿದರು. ಆದರೆ, ದರ್ಶನ್ ಎಂಬಿ. (26ಕ್ಕೆ3) ಮತ್ತು ಸ್ಪಿನ್ನರ್ ಜೆ. ಸುಚಿತ್ (24ಕ್ಕೆ2) ಅವರು ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲರಾದರು. ಆದರೆ, ಕೊನೆಯ ಹಂತದಲ್ಲಿ ಋತ್ವಿಕ್ ಚೌಧರಿ (ಔಟಾಗದೆ 36) ಅವರನ್ನು ನಿಯಂತ್ರಿಸುವಲ್ಲಿ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಬಂಗಾಳ ತಂಡವು ಸಮಬಲ ಸಾಧಿಸಿತು. ಪಂದ್ಯ ಟೈ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT