ಬುಧವಾರ, ಡಿಸೆಂಬರ್ 2, 2020
25 °C
ಅಪ್ಪನ ಅಗಲಿಕೆ ನೋವಿನಲ್ಲಿಯೂ ದಿಟ್ಟ ನಿರ್ಧಾರ ಕೈಗೊಂಡ ಹೈದರಾಬಾದಿ ಹುಡುಗ: ಗಂಗೂಲಿ ಮೆಚ್ಚುಗೆ

ಅಪ್ಪನ ಅಗಲಿಕೆ ನೋವು: ಆಸ್ಟ್ರೇಲಿಯಾದಲ್ಲಿಯೇ ಉಳಿಯಲು ಸಿರಾಜ್ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ (ಪಿಟಿಐ): ಪಿತೃವಿಯೋಗದ ದುಃಖದಲ್ಲಿರುವ ಭಾರತ ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದಿಂದ ಹೈದರಾಬಾದ್‌ಗೆ ಮರಳದಿರಲು ನಿರ್ಧರಿಸಿದ್ದಾರೆ.

ಶುಕ್ರವಾರ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ಅವರು ನಿಧನರಾಗಿದ್ದರು. ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿರುವ  ಸಿರಾಜ್ ಸದ್ಯ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ಅವಧಿಯಲ್ಲಿದ್ದಾರೆ.  ತಮ್ಮ ತಂದೆಯ ಅಂತ್ಯಕ್ರಿಯೆಗೆ ಬರದಿರಲು ಅವರು ತೀರ್ಮಾನಿಸಿದ್ದಾರೆ.

’ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಸಿರಾಜ್ ಅವರೊಂದಿಗೆ ನಾವು ಮಾತನಾಡಿದ್ದೇವೆ. ಅವರಿಗೆ ತವರೂರಿಗೆ ತೆರಳಲು ಅನುಮತಿ ಕೂಡ ನೀಡಿದ್ದೆವು. ನಿರ್ಧಾರ ಅವರಿಗೆ ಬಿಡಲಾಗಿತ್ತು.  ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರಲು, ಭಾರತಕ್ಕೆ ಮರಳಲು ಎಲ್ಲ ವ್ಯವಸ್ಥೆ ಮಾಡಲು ಸಿದ್ಧರಿದ್ದೆವು. ಆದರೆ, ಅವರು ತಂಡದೊಂದಿಗೇ ಉಳಿಯಲು ತೀರ್ಮಾನಿಸಿದರು. ರಾಷ್ಟ್ರೀಯ ತಂಡದ ಕರ್ತವ್ಯವನ್ನು ನಿಭಾಯಿಸುವುದಾಗಿ ಹೇಳಿದ್ದಾರೆ‘ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

’ಇಂತಹ ಕಠಿಣ ಸಮಯದಲ್ಲಿ ಸಿರಾಜ್ ಜೊತೆಗೆ ನಾವಿದ್ದೇವೆ. ಅವರಿಗೆ ಎಲ್ಲ ರೀತಿಯ ಬೆಂಬಲ ನೀಡುತ್ತೇವೆ‘ ಎಂದೂ ಶಾ ಹೇಳಿದ್ದಾರೆ.

’ಸಿರಾಜ್ ಅವರದ್ದು ಅದ್ಭುತವಾದ ಗುಣ. ಅವರ ದಿಟ್ಟತನ ಮೆಚ್ಚುವಂತದ್ದು. ಅವರು ಮತ್ತು ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ವಿಷಾದಿಸುತ್ತೇನೆ. ಅವರಿಗೆ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಲಭಿಸಲಿ‘ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಬಲಗೈ ಮಧ್ಯಮವೇಗಿ ಸಿರಾಜ್ ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು.  ಯುಎಇಯಲ್ಲಿ  ಸುಮಾರು ಎರಡು ತಿಂಗಳು ಕಳೆದಿದ್ದ ಅವರು ಅಲ್ಲಿಂದಲೇ ನೇರವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. 

ಈಗ ಒಂದೊಮ್ಮೆ ಅವರು ಭಾರತಕ್ಕೆ ಮರಳುವ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ಆದರೆ, ಆಗ ಅವರು  ಇಲ್ಲಿಂದ ಮತ್ತೆ ಆಸ್ಟ್ರೇಲಿಯಾಕ್ಕೆ ತೆರಳಿ 14 ದಿನಗಳ ಕ್ವಾರಂಟೈನ್‌ ಪಾಲಿಸಬೇಕಾಗುತ್ತಿತ್ತು. ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

ಹೈದರಾಬಾದಿನಲ್ಲಿ ರಿಕ್ಷಾ ಚಾಲಕರಾಗಿದ್ದ ಮೊಹಮ್ಮದ್ ಗೌಸ್ ಅವರು ಮಗನ ಕ್ರಿಕೆಟ್‌ ಭವಿಷ್ಯ ರೂಪಿಸಲು ಬಹಳಷ್ಟು ಶ್ರಮಿಸಿದ್ದರು.  ನಾಲ್ಕು ವರ್ಷಗಳ ಹಿಂದೆ ಸಿರಾಜ್ ರಣಜಿ ಟ್ರೋಫಿ ಟೂರ್ನಿಯಲ್ಲಿ 41 ವಿಕೆಟ್‌ಗಳನ್ನು ಗಳಿಸಿದ್ದರು. ಅದೇ ವರ್ಷ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ₹ 2.6 ಕೋಟಿ ನೀಡಿ ಅವರನ್ನು ಖರೀದಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು