ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾ ಮೊನ್ನೆ ಮತ್ತೆ ನೆನಪಾದರು. ಅದಕ್ಕೆ ಕಾರಣಕರ್ತರಾದವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯವೊಂದರಲ್ಲಿ ಭುವನೇಶ್ವರ್ ಅವರು ರ್ಯಾನ್ ರಿಕಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ವಿಕೆಟ್ಗಳನ್ನು ಪಡೆದಾಗ ಥಟ್ಟನೆ ಮೆಕ್ಗ್ರಾ ನೆನಪು ಮೂಡಿತು.

ಇವತ್ತು ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೋಲ್ಟ್, ಜೋಫ್ರಾ ಆರ್ಚರ್, ಕಗಿಸೊ ರಬಾಡಾ ತರಹದ ವೇಗದ ಬೌಲರ್ಗಳು ಪ್ರತಿ ಗಂಟೆಗೆ ಇಷ್ಟು ಕಿಲೋಮೀಟರ್ ವೇಗದಲ್ಲಿ ಎಸೆತಗಳನ್ನು ಹಾಕುತ್ತಾರೆ ಎಂದು ಕಣ್ಣರಳಿಸಿಕೊಂಡು ನೋಡುತ್ತಾ ಇರುತ್ತೇವೆ. ವೇಗಕ್ಕಿಂತ ಹೆಚ್ಚಾಗಿ ಲೈನ್ ಅಂಡ್ ಲೆಂಗ್ತ್ ಸ್ಥಿರತೆಯನ್ನು ನೆಚ್ಚಿಕೊಂಡಿದ್ದ ಬೌಲರ್ ಮೆಕ್ಗ್ರಾ. ಅವರು ಓವರ್ನ ಅಷ್ಟೂ ಎಸೆತಗಳನ್ನು ಒಂದೇ ಜಾಗದಲ್ಲಿ ಹಾಕುತ್ತಾ, ಅದು ಬೇರೆ ಬೇರೆ ಎತ್ತರಕ್ಕೆ ಪುಟಿಯುವಂತೆ ಮಾಡಬಲ್ಲ ಜಾಣ್ಮೆ ತೋರುತ್ತಿದ್ದರು. ಭುವನೇಶ್ವರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ 13 ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಪಡೆದು, ‘ಆರೆಂಜ್ ಟೋಪಿ’ ಧರಿಸಿದರು. ಅತ್ಯಧಿಕ ವಿಕೆಟ್ಗಳನ್ನು ಈ ಸಲ ಪಡೆದರು ಎನ್ನುವುದು ಅವರ ಸಾಧನೆಯ ಒಂದಂಶವನ್ನಷ್ಟೇ ಹೇಳುತ್ತದೆ. ಬ್ಯಾಟ್ಸ್ಮನ್ಗಳ ಭುಜಬಲ ಪರಾಕ್ರಮದ ಅನಾವರಣದ ವೇದಿಕೆ ಎಂದೇ ಜನಜನಿತವಾದ ಐಪಿಎಲ್ ಕ್ರಿಕೆಟ್ನಲ್ಲಿ 200 ವಿಕೆಟ್ಗಳ ಗಡಿ ದಾಟಿದ ಮೊದಲ ವೇಗದ ಬೌಲರ್ ಎಂಬ ಗೌರವವನ್ನೂ ಅವರು ಈ ಬಾರಿ ತಮ್ಮದಾಗಿಸಿಕೊಂಡರು.

ಟ್ವೆಂಟಿ20 ಕ್ರಿಕೆಟ್ನಲ್ಲಿ ಭುವನೇಶ್ವರ್ ಕುಮಾರ್ ಇದುವರೆಗೆ 350 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಮಾದರಿಯ ಕ್ರಿಕೆಟ್ ಅವರಿಗೆ ಹೇಳಿ ಮಾಡಿಸಿದ್ದು ಎನ್ನುವುದಕ್ಕೆ ಈ ಅಂಕಿಅಂಶವೇ ಪುಷ್ಟಿ. ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಯಾದಿಯಲ್ಲಿ ‘ಭುವಿ’ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಯಜುವೇಂದ್ರ ಚಾಹಲ್ ಇದ್ದು, ಈಗಲೂ ಅವರು ಆಡುತ್ತಿದ್ದಾರೆ.

ಮೆಕ್ಗ್ರಾ ಎಷ್ಟು ವೇಗದಲ್ಲಿ ಎಸೆತ ಹಾಕುತ್ತಿದ್ದರು ಎಂದು ತಲೆಕೆಡಿಸಿಕೊಂಡವರು ಕಡಿಮೆ. ಅವರ ಕರಾರುವಾಕ್ ಲೈನ್ ಮತ್ತು ಲೆಂಗ್ತ್ ಬಗೆಗೆ ಎಲ್ಲರ ಗಮನ ಇರುತ್ತಿತ್ತು. ನಿರ್ದಿಷ್ಟ ಜಾಗಕ್ಕೆ ಓವರ್ನ ಅಷ್ಟೂ ಎಸೆತಗಳನ್ನು ಅವರು ಹಾಕಬಲ್ಲವರಾಗಿದ್ದರು. ಹಾಗಿದ್ದೂ ಚೆಂಡಿನ ವೇಗ ಹಾಗೂ ಸ್ವಿಂಗ್ ಆಗುತ್ತಿದ್ದ ದಿಕ್ಕಿನ ಬದಲಾವಣೆ ಬ್ಯಾಟ್ಸ್ಮನ್ಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿತ್ತು. ಭುವನೇಶ್ವರ್ ಈ ಐಪಿಎಲ್ನಲ್ಲಿ ಹಾಕುತ್ತಿರುವ ಎಸೆತಗಳ ವೇಗಕ್ಕೂ ಮೆಕ್ಗ್ರಾ ಬೌಲ್ ಮಾಡುತ್ತಿದ್ದ ವೇಗಕ್ಕೂ ಸಾಮ್ಯ ಇದೆ. ಪ್ರತಿ ಗಂಟೆಗೆ ಸುಮಾರು 130ರಿಂದ 138 ಕಿಲೋಮೀಟರ್ ವೇಗದ ಎಸೆತಗಳು ಇವು. ಜೋಫ್ರಾ ಅಥವಾ ಬೂಮ್ರಾ ಎಸೆತಗಳ ಪರಮ ವೇಗದ ಎದುರು ಇವು ಏನೂ ಅಲ್ಲ. ಆದರೆ, ಚುಟುಕು ಕ್ರಿಕೆಟ್ನಲ್ಲಿ ವೇಗಕ್ಕಿಂತ ‘ನಕಲ್ ಬಾಲ್’ ಹಾಕುವುದು ಮುಖ್ಯ ಎನ್ನುವುದು ಪದೇ ಪದೇ ರುಜುವಾತಾಗುತ್ತಿದೆ.

ಚೆಂಡಿನ ಸೀಮ್ ಬಳಸಿ ಔಟ್ ಸ್ವಿಂಗ್, ಇನ್ ಸ್ವಿಂಗ್ ಮಾಡುವುದರಲ್ಲಿ ‘ಭುವಿ’ ನಿಸ್ಸೀಮರು. ಆದರೆ, ಅವರ ‘ನಕಲ್ ಬಾಲ್’ ಚತುರಮತಿಗಳ ದೊಡ್ಡ ಅಸ್ತ್ರ. ಸಹಜ ವೇಗದ ಎಸೆತ ಹಾಕಲು ಅಗತ್ಯವಿರುವಂತೆ ಚೆಂಡಿನ ಸೀಮ್ನ ಭಾಗವನ್ನು ಬೌಲರ್ಗಳು ಹಿಡಿಯುತ್ತಾರೆ. ಅದಕ್ಕಿಂತ ತುಸು ಕೆಳಗೆ ಹಿಡಿದು ಹಾಕುವ ಎಸೆತ ‘ನಕಲ್ ಬಾಲ್’. ಸ್ವಲ್ಪ ಯಾಮಾರಿದರೂ ಕೈಯಿಂದ ಚೆಂಡು ಜಾರೀತು ಎನ್ನುವಂತಹ ಸೂಕ್ಷ್ಮವಾದ ವರಸೆ ಇದು. ಬೌಲಿಂಗ್ ಶೈಲಿಯಲ್ಲಿ ಹಾಗೂ ಸೀಮ್ ಕಾಣಿಸುವ ರೀತಿಯಲ್ಲಿ ಯಾವ ವ್ಯತ್ಯಾಸವೂ ಬ್ಯಾಟ್ಸ್ಮನ್ಗೆ ಕಾಣುವುದಿಲ್ಲ. ಆದರೆ, ಚೆಂಡು ನೆಲಕ್ಕೆ ಬಿದ್ದ ಮೇಲೆ ಪುಟಿದು ನುಗ್ಗುವ ವೇಗ ಅಚ್ಚರಿ ಹುಟ್ಟಿಸುವಷ್ಟು ಕಡಿಮೆಯಾಗುತ್ತದೆ. ಇದೇ ‘ನಕಲ್ ಬಾಲ್’ ಹಾಕುವ ಕ್ರಮ. ವೆಸ್ಟ್ಇಂಡೀಸ್ನ ಪ್ರತಿಭಾವಂತ ಆಲ್ರೌಂಡರ್ ಡ್ವೇನ್ ಬ್ರಾವೋ ಅವರೂ ಇಂತಹ ಎಸೆತಗಳನ್ನು ಹಾಕುವುದರಲ್ಲಿ ಪಳಗಿದ್ದರು. ಅದೇ ಕಾರಣಕ್ಕೆ ಅವರಿಗೆ ಹೆಚ್ಚು ವಿಕೆಟ್ಗಳು ಸಿಗುತ್ತಿದ್ದವು. ಟೆಸ್ಟ್ ಪಂದ್ಯಗಳಲ್ಲಿ ಕೋರ್ಟ್ನಿ ಆಂಬ್ರೂಸ್ ಕೂಡ ಆಗೀಗ ನಿಧಾನಗತಿಯ ಎಸೆತಗಳಿಂದ ಕೆಣಕಿದ್ದವರು. ಅದೇ ವಿಂಡೀಸ್ ದೇಶದ ಕೋರ್ಟ್ಲಿ ವಾಲ್ಶ್ ಕೂಡ ಪ್ರತಿ ಗಂಟೆಗೆ ಸರಾಸರಿ 132--–138 ಕೀ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಭುವನೇಶ್ವರ್ ವರಸೆಗಳನ್ನು ನೋಡಿದಾಗ ಆ ಎಲ್ಲ ದಿಗ್ಗಜರೂ ನೆನಪಾಗುತ್ತಾರೆ.

ಪವರ್ ಪ್ಲೇ ಅರ್ಥಾತ್ ಮೊದಲ 6 ಓವರ್ಗಳನ್ನು ಬೌಲಿಂಗ್ ಮಾಡುವ ಯಾರಿಗೇ ಆದರೂ ಈಗ ಸವಾಲುಗಳ ಸರತಿಯಲ್ಲಿ ನಿಂತಿರುತ್ತವೆ. ಹದಿಹರೆಯದ ಬ್ಯಾಟ್ಸ್ಮನ್ಗಳು ವೇಗವಾಗಿ ಬ್ಯಾಟ್ ಬೀಸುವಾಗ, ಚೆಂಡು ಅಂಚಿಗೆ ಬಡಿದರೂ ಬೌಂಡರಿ ಗೆರೆಯಿಂದ ದಾಟುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ ಭುವನೇಶ್ವರ್ ತೋರುತ್ತಿರುವ ಬೌಲಿಂಗ್ ಸ್ಥಿರತೆ ಚುಟುಕು ಕ್ರಿಕೆಟ್ನ ಚಾಣಾಕ್ಷತನದ ಪ್ರಾತ್ಯಕ್ಷಿಕೆಯಂತಿದೆ. ಅವರು ಎರಡೂ ದಿಕ್ಕಿಗೆ ಚೆಂಡನ್ನು ಸ್ವಿಂಗ್ ಮಾಡುವುದರ ಜೊತೆಗೆ ಪರಿಣಾಮಕಾರಿ ಯಾರ್ಕರ್ಗಳನ್ನೂ ಪ್ರಯೋಗಿಸಬಲ್ಲರು. ಇದುವರೆಗೆ ತಾವು ಆಡಿರುವ ಅಷ್ಟೂ ಟ್ವೆಂಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಅವರು 350ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ ಪವರ್ ಪ್ಲೇ ಅವಧಿಯ ಓವರ್ಗಳಿಂದಲೇ ಅವರು ಕಿತ್ತಿರುವ ವಿಕೆಟ್ಗಳ ಸಂಖ್ಯೆ 81. ಮೊದಲ ಓವರ್ನಲ್ಲಿ ಪಡೆದಿರುವ ಅಷ್ಟೂ ವಿಕೆಟ್ಗಳನ್ನು ಎಣಿಸಿದರೆ 27 ಆಗುತ್ತದೆ. ಶೇ 56ರಷ್ಟು ಡಾಟ್ಬಾಲ್ಗಳನ್ನು ಅವರು ಪ್ರಯೋಗಿಸಿದ್ದಾರೆ.

ಈ ಐಪಿಎಲ್ ಋತುವಿನಲ್ಲಿ ಅವರ ಮೊನಚು ಇನ್ನೂ ಜೋರಾಗಿದೆ. ಅವರು ಪಡೆದಿರುವ ಒಟ್ಟು 24 ವಿಕೆಟ್ಗಳಲ್ಲಿ 15 ಪವರ್ ಪ್ಲೇ ಅವಧಿಯಲ್ಲಿ ಪಡೆದಂಥವು. 300ಕ್ಕೂ ಹೆಚ್ಚು ಎಸೆತಗಳನ್ನು ಈ ಬಾರಿ ಅವರು ಬೌಲ್ ಮಾಡಿದ್ದು, ಅವುಗಳಲ್ಲಿ 103 ಡಾಟ್ಬಾಲ್ಗಳು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರಿನ ಪಂದ್ಯವೊಂದನ್ನು ‘ಭುವಿ’ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ನೋಡೋಣ. ಆ ಪಂದ್ಯದಲ್ಲಿ ಪವರ್ ಪ್ಲೇ ಅವಧಿಯ ಮೂರು ಓವರ್ಗಳಲ್ಲಿ ಅವರು ಕೇವಲ 5 ರನ್ ನೀಡಿ 3 ವಿಕೆಟ್ಗಳನ್ನು ಪಡೆದಿದ್ದರು. ಸಾಹಿಲ್ ಪರಾಖ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಎಸೆತ ‘ಮಾಸ್ಟರ್ ಕ್ಲಾಸ್’. ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಕೂಡ ಬೇಗ ಪೆವಿಲಿಯನ್ ಹಾದಿ ಹಿಡಿಯುವಂತೆ ಆ ಪಂದ್ಯದಲ್ಲಿ ಬೌಲ್ ಮಾಡಿದ್ದನ್ನು ಮರೆಯಲಾಗದು.

ಉತ್ತರ ಪ್ರದೇಶದ ಮೇರಠ್ನ ಪ್ರತಿಭೆ ಭುವನೇಶ್ವರ್ ಅಂತರರಾಷ್ಟ್ರೀಯ ಟ್ವೆಂಟಿ20 ಕ್ರಿಕೆಟ್ ಅನ್ನು ಕೊನೆಯ ಬಾರಿಗೆ ಆಡಿದ್ದು 2022ರಲ್ಲಿ. ಮತ್ತೆ ತಂಡ ಆಹ್ವಾನಿಸೀತೆ ಎಂದು ಕಾಯುತ್ತಾ, ಕೊರಗುತ್ತಾ ಕೂರುವವರ ಪೈಕಿ ಅವರಲ್ಲ. ‘ಗುರಿ ಸಣ್ಣದಾಗಿರಬೇಕು. ನಾನೆಂದೂ ಅಂತರರಾಷ್ಟ್ರೀಯ ಪಂದ್ಯಕ್ಕೆ ಕರೆಯುತ್ತಾರಾ ಎಂದು ಎದುರುನೋಡುತ್ತಾ ಕೂರುವುದಿಲ್ಲ. ಈ ಸಲ ಚೆನ್ನಾಗಿ ಬೌಲ್ ಮಾಡಬೇಕು ಎಂದು ಐಪಿಎಲ್ ಪಂದ್ಯಗಳ ಕಡೆಗಷ್ಟೇ ನೋಡುತ್ತೇನೆ. ಪಂದ್ಯದಿಂದ ಪಂದ್ಯಕ್ಕೆ ಕಲಿಯಲು ಸಾಕಷ್ಟು ಸಿಗುತ್ತವೆ’ ಎಂದು ನಮ್ರವಾಗಿ ಹೇಳುವ ಅವರು ಕಳೆದ ವರ್ಷದಿಂದ ಆರ್ಸಿಬಿ ತಂಡದ ಪರವಾಗಿ ಆಡುತ್ತಿದ್ದಾರೆ.

2009ರಲ್ಲಿ ಇದೇ ತಂಡಕ್ಕೆ ಅವರು ಮೊದಲು ಆಯ್ಕೆಯಾಗಿದ್ದರು. ಎರಡು ವರ್ಷ ಆಡುವ ಅವಕಾಶವೇ ಸಿಕ್ಕಿರಲಿಲ್ಲ. 2011ರಲ್ಲಿ ಪುಣೆ ವಾರಿಯರ್ಸ್ ತಂಡದವರು ಸೆಳೆದರು. 2014ರಿಂದ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡ ಇವರ ಬೌಲಿಂಗ್ ಬಲವನ್ನು ನೆಚ್ಚಿಕೊಂಡಿತು. 2017ರಲ್ಲಿ
‘ಆರೆಂಜ್ ಟೋಪಿ’ ತಲೆಯ ಮೇಲೆ ಇದ್ದಾಗ ಭುವನೇಶ್ವರ್ 26 ವಿಕೆಟ್ಗಳನ್ನು ಕಿತ್ತಿದ್ದರು. ಈ ಸಲ ಅದನ್ನೂ ಮೀರುವ ಸಾಧ್ಯತೆ ಇದೆ. ಕಳೆದ ಎರಡು ಋತುಗಳಲ್ಲಿ ಮಾತ್ರ ಅವರು ಪ್ರತಿ ಓವರ್ಗೆ 9 ರನ್ಗಳಿಗಿಂತ ಹೆಚ್ಚು ಸರಾಸರಿ ರನ್ಗಳನ್ನು ನೀಡಿದ್ದರು. ಈ ಸಲ ದಶಕದ ಹಿಂದಿನ ಲಯಕ್ಕೆ ಮರಳಿದಂತೆ ಆಡುತ್ತಿದ್ದಾರೆ. ಮುಂದೆ ತಮ್ಮ ಬೌಲಿಂಗ್ ಸೂಕ್ಷ್ಮಗಳನ್ನು ಇನ್ನಷ್ಟು ಯುವಕರಿಗೆ ಅವರು ಧಾರೆ ಎರೆಯುವುದರಲ್ಲಿ ಅನುಮಾನವೇ ಇಲ್ಲ. ವಯಸ್ಸು ಮೂವತ್ತಾರಾದರೂ ಕ್ರಿಕೆಟ್ ಪ್ರೀತಿ ಜೋರು ಎನ್ನಬಹುದಾದ ವ್ಯಕ್ತಿತ್ವವಂತೂ ಅನುಕರಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.