ಸೋಮವಾರ, ಅಕ್ಟೋಬರ್ 18, 2021
22 °C

ಬಯೊಬಬಲ್ ಒತ್ತಡ; ಆಟಗಾರರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ಕ್ರಿಕೆಟ್ ಆಸ್ಟ್ರೇಲಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಬಯೊಬಬಲ್‌ನ ಒತ್ತಡದ ವಾತಾವರಣದಲ್ಲಿ ದಿನಗಟ್ಟಲೆ ಕಳೆಯುವುದರಿಂದ ಆಟಗಾರರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಈ ಸವಾಲನ್ನು ಮೀರಲು ಸಮತೋಲಿತ ವ್ಯವಸ್ಥೆಯೊಂದನ್ನು ಹುಡುಕುವ ಅಗತ್ಯವಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಸಿಎ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಮ್ಯಟ್ ಬರ್ಗಿನ್ ಮತ್ತು ಮುಖ್ಯ ಆರೋಗ್ಯ ಅಧಿಕಾರಿ ಜಾನ್ ಒರ್ಕಾಡ್ ಅವರು ಬ್ರಿಟಿಷ್ ಅಸೋಸಿಯೇಷನ್ ಆಫ್ ಸ್ಪೋರ್ಟ್ಸ್ ಆ್ಯಂಡ್ ಎಕ್ಸೈಸ್ ಮೆಡಿಸಿನ್‌ಗೆ ಬರೆದಿರುವ ಲೇಖನವೊಂದರಲ್ಲಿ ಈ ಕುರಿತು ಉಲ್ಲೇಸಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿ ಭಾನುವಾರ ಪ್ರಕಟಗೊಂಡ ವರದಿಯೊಂದರಲ್ಲಿ ಹೇಳಲಾಗಿದೆ.

‘ಸ್ಪರ್ಧಾಕಣದಲ್ಲಿ ಉಂಟಾಗುವ ಖಿನ್ನತೆಯ ಸಮಸ್ಯೆಗಳ ಪರಿಣಾಮಗಳು ಸ್ಪರ್ಧೆಗಳು ಮುಗಿದ ವಾರಗಳು ಮತ್ತು ತಿಂಗಳುಗಳ ನಂತರ ಗೋಚರವಾಗುತ್ತವೆ. ಯಾವುದೇ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಇರುವವರು ಎಂದು ಹೇಳಲಾಗುವ ಕ್ರೀಡಾಪಟುಗಳು ಈಗಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯಾಸಪಡುತ್ತಿದ್ದಾರೆ’ ಎಂದು ಮ್ಯಟ್ ಮತ್ತು ಜಾನ್ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.  

ಕಠಿಣ ಕ್ವಾರಂಟೈನ್ ಒಳಗೊಂಡ ಬಯೊಬಬಲ್ ವ್ಯವಸ್ಥೆಯ ಒಳಗಿನ ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಆಟಗಾರರಿಗೆ ನೆರವಾಗುವ ವ್ಯವಸ್ಥೆಯನ್ನು ರೂಪಿಸಲು ಇಬ್ಬರೂ ತಜ್ಞರು ಸಲಹೆ ನೀಡಿದ್ದಾರೆ. ಕೆಲಕಾಲವಾದರೂ ಮನೆಯಲ್ಲಿ ಇರಲು ಇಷ್ಟಪಡುವವರಿಗೆ ಆ ಅವಕಾಶ ಒದಗಿಸುವುದು ಅತ್ಯುತ್ತಮ ಮಾರ್ಗ. ಇದು, ಆಟಗಾರರು ಮಾನಸಿಕವಾಗಿ ಉಲ್ಲಸಿತಗೊಂಡು ಸ್ಪರ್ಧಾಕಣಕ್ಕೆ ಹೊಂದಿಕೊಳ್ಳಲು ನೆರವಾಗಬಹುದು ಎಂಬುದು ಅವರ ಅಭಿಮತ.  

ಕೋವಿಡ್–19ರ ಸಂದರ್ಭದಲ್ಲಿ ಬಹುತೇಕ ಕ್ರಿಕೆಟಿಗರು ಮಾನಸಿಕ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾಲ್ಕು ತಿಂಗಳು ಹೋಟೆಲ್ ಕೊಠಡಿಗಳಲ್ಲಿ ಕಳೆಯುವುದು ಬಲು ಕಷ್ಟ ಎಂದು ಹೇಳಿರುವ ಇಂಗ್ಲೆಂಡ್ ಆಟಗಾರರು ಮುಂಬರುವ ಆ್ಯಶಸ್ ಸರಣಿ ಬಹಿಷ್ಕರಿಸುವ ಆತಂಕವೂ ಉಂಟಾಗಿದೆ. ಇದೇ ಸಂದರ್ಭದಲ್ಲಿ ಈ ವರದಿ ಬಿಡುಗಡೆಯಾಗಿರುವುದು ಮತ್ತಷ್ಟು ಸಂಚಲನ ಉಂಟುಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು