ಅಂಗವಿಕಲರ ಕ್ರಿಕೆಟ್‌: ನನಸಾಗುವುದೇ ಕನಸು

7

ಅಂಗವಿಕಲರ ಕ್ರಿಕೆಟ್‌: ನನಸಾಗುವುದೇ ಕನಸು

Published:
Updated:
Deccan Herald

‘1971ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದ ಖುಷಿಯಲ್ಲಿ ಮುಂಬೈಗೆ ಬಂದಿಳಿದಿದ್ದೆವು. ಜನರಿಂದ ಅಭೂತಪೂರ್ವ ಸ್ವಾಗತ ದೊರೆತಿತ್ತು. ಮೆರವಣಿಗೆ ಸಾಗುತ್ತಿತ್ತು. ಹಾಜಿ ಅಲಿ ದರ್ಗಾ ಬಳಿ ಅಂಗವಿಕಲ ಯುವಕರ ಗುಂಪೊಂದು ನಮ್ಮ ಬಳಿ ಬಂದು ಶುಭ ಹಾರೈಸಿತು. ನಿಮ್ಮ ಹಾಗೆ ನಾವೂ ಕ್ರಿಕೆಟ್‌ ಆಡಬೇಕು. ಏನಾದರೂ ಸಹಾಯ ಮಾಡಿ ಎಂದರು. ವಿಜಯೋತ್ಸವದಲ್ಲಿದ್ದ ಮನಸ್ಸಿನ ಲಯ ಬದಲಾಯಿತು. ಇಂತಹ ಹುಡುಗರಿಗಾಗಿ  ಏನಾದರೂ ಮಾಡಬೇಕು ಎನ್ನುವ ವಿಚಾರ ತಲೆ ಹೊಕ್ಕಿತು. ಅದು ಐಕ್ಯಾಡ್ ಆರಂಭಕ್ಕೆ ಕಾರಣವಾಯಿತು’–

ಮೈಸೂರಿನಲ್ಲಿ 2013ರಲ್ಲಿ ದಕ್ಷಿಣ ಭಾರತಮಟ್ಟದ ಅಂಗವಿಕಲರ ಕ್ರಿಕೆಟ್ ಟೂರ್ನಿಯ ಉದ್ಘಾಟನೆಗೆ ಬಂದಿದ್ದ ಭಾರತದ ಹಿರಿಯ ಕ್ರಿಕೆಟಿಗ ಅಜಿತ್ ವಾಡೇಕರ್ ಅವರು ಹೇಳಿದ್ದ ಮಾತುಗಳಿವು.  ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ಪ್ರವಾಸಗಳಲ್ಲಿ ಟೆಸ್ಟ್‌ ಸರಣಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ತಂಡಕ್ಕೆ ನಾಯಕರಾಗಿದ್ದವರು ವಾಡೇಕರ್. ಆಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆ (ಐಕ್ಯಾಡ್‌)ಯ ಸಂಸ್ಥಾಪಕ ಅಧ್ಯಕ್ಷರಾಗಿ ಮಾಡಿದ ಕಾರ್ಯವೂ ಸಣ್ಣದಲ್ಲ. ಆದರೆ ಈ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆಯನ್ನು ದೊರಕಿಸಿಕೊಡುವ ಅವರ ಕನಸು ಇದುವರೆಗೂ ನನಸಾಗಿಲ್ಲ.

ಮೊದಲಿಗೆ ಅವರು ಸಂಸ್ಥೆಯನ್ನು ಆರಂಭಿಸಿದಾಗ ನಾಲ್ಕು ರಾಜ್ಯಗಳ ತಂಡಗಳು ಮಾತ್ರ ಇದ್ದವು. ಆದರೆ ಈಗ 25 ರಾಜ್ಯಗಳ ತಂಡಗಳು ಇವೆ. ಪ್ರತಿವರ್ಷ ವಿವಿಧ ಹಂತದ ಟೂರ್ನಿಗಳು ಆಯೋಜನೆಯಾಗುತ್ತಿವೆ.

‘ಈ ದೇಶದಲ್ಲಿ ಕ್ರಿಕೆಟ್‌ ಪ್ರೀತಿ ಎನ್ನುವುದು ಜನಮಾನಸದಲ್ಲಿ ಹರಿಯುತ್ತಿದೆ. ಪೋಲಿಯೊ, ಅಪಘಾತ ಮತ್ತಿತರ ಕಾರಣಗಳಿಗೆ ಅಂಗವಿಕಲರಾದವರ ಮನದಲ್ಲೂ ಕ್ರಿಕೆಟ್‌ ಪ್ರೀತಿ ಇದೆ. ಅವರಿಗೂ ಆಡಬೇಕೆಂಬ ಹಂಬಲ ಇರುತ್ತದೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶ ಕಲ್ಪಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ವಾಡೇಕರ್ ಹೇಳಿದ್ದರು. ಅವರು ಬಿಸಿಸಿಐನ ಹಲವು ಪ್ರಭಾವಿ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು. ಆದರೂ ಅಂಗವಿಕಲರ ಕ್ರಿಕೆಟ್‌ಗೆ ಮಾನ್ಯತೆ ಒದಗಿಸಲು ಹಲವು ತಾಂತ್ರಿಕ ಕಾರಣಗಳು ಅಡ್ಡಬಂದಿವೆ.

‘ದೇಶದಾದ್ಯಂತ ಅಂಗವಿಕಲರ ಕ್ರಿಕೆಟ್‌ಗೆ ಮಾನ್ಯತೆ ಕೊಡಲು ಅವರು ಬಹಳ ಶ್ರಮಪಟ್ಟರು. ಅವರಿಂದಾಗಿ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಆಡಲು ಸಾಧ್ಯವಾಯಿತು. ನಾಲ್ಕಾರು ದೇಶಗಳನ್ನು ನೋಡಿಬರಲು ಅವಕಾಶ ಸಿಕ್ಕಿತು. ಕ್ರಿಕೆಟ್‌ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡು ಜೀವನದಲ್ಲಿ ಹೊಸ ದಾರಿ ಕಂಡುಕೊಂಡ ಅಂಗವಿಕಲರು ಹಲವರಿದ್ದಾರೆ. ಇದೀಗ ನಮ್ಮ ಗಾಡ್‌ಫಾದರ್‌ ಅವರನ್ನು ಕಳೆದುಕೊಂಡಿದ್ದೇವೆ’ ಎಂದು ಐಕ್ಯಾಡ್‌ನ ಪದಾಧಿಕಾರಿಯಾಗಿರುವ ಶಿವಾನಂದ್ ಗುಂಜಾಳ್ ಗದ್ಗದಿತರಾದರು.

‘ಆಂಗವಿಕಲರ ಕ್ರಿಕೆಟ್‌ಗಾಗಿ  ದೇಶದಲ್ಲಿ ಮೂರ್ನಾಲ್ಕು ಸಂಸ್ಥೆಗಳಾಗಿವೆ. ಎಲ್ಲರೂ ಒಗ್ಗೂಡಿದರೆ ಮಾನ್ಯತೆ ಪಡೆಯಬಹುದು. ಇದರಿಂದ ಬಿಸಿಸಿಐ ಮತ್ತು ಸರ್ಕಾರಗಳಿಂದ ಸೌಲಭ್ಯ, ಸನ್ಮಾನಗಳನ್ನೂ ಪಡೆಯುವ ಅವಕಾಶ ಸಿಗುತ್ತದೆ’ ಎಂದು ಶಿವಾನಂದ್ ಹೇಳುತ್ತಾರೆ.

ಭಾರತದ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಕಾಣಿಕೆ ನೀಡಿದ ಅಜಿತ್ ವಾಡೇಕರ್, ಅಂಗವಿಕಲರ ಕ್ರಿಕೆಟ್‌ಗೂ ಚೈತನ್ಯ ತುಂಬಿದ್ದಾರೆ.  ಆದರೆ ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ ಬೆಳವಣಿಗೆ ಮಾಡುವ ಕನಸು ಹಾಗೆಯೇ ಉಳಿಯಬಾರದಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !