ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಘಟ್ಟದಲ್ಲಿ ಮೊದಲ ಟೆಸ್ಟ್: ಜಯದ ವಿಶ್ವಾಸದಲ್ಲಿ ಭಾರತ

Last Updated 9 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಅಡಿಲೇಡ್: ಒಂದು ದಿನದ ಆಟ ಮತ್ತು ಆರು ವಿಕೆಟ್‌ಗಳು..!

ಈ ಎರಡು ಅಂಶಗಳ ಸುತ್ತಲೇ ಈಗ ಅಡಿಲೇಡ್ ಟೆಸ್ಟ್‌ ಪಂದ್ಯದ ಕುರಿತ ಮಾತುಕತೆಗಳು ಗಿರಕಿ ಹೊಡೆಯುತ್ತಿವೆ. ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್‌ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯ ಈಗ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಅರ್ಧಶತಕಗಳ ಬಲದಿಂದ ಭಾರತ ತಂಡವು ನೀಡಿರುವ 323 ರನ್‌ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡವು ಆರಂಭದಲ್ಲಿಯೇ ಎಡವಿದೆ. ಮಧ್ಯಮವೇಗಿ ಮೊಹಮ್ಮದ್ ಶಮಿ (15ಕ್ಕೆ2) ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ನೀಡಿರುವ ಪೆಟ್ಟಿಗೆ ಸಂಕಷ್ಟದಲ್ಲಿದೆ.

ನಾಲ್ಕನೇ ದಿನವಾದ ಭಾನುವಾರ 49 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 104 ರನ್‌ ಗಳಿಸಿದೆ. ಗೆಲ್ಲಲು 219 ರನ್‌ಗಳನ್ನು ಗಳಿಸಬೇಕಿದೆ. ಆನುಭವಿ ಬ್ಯಾಟ್ಸ್‌ಮನ್ ಶಾನ್ ಮಾರ್ಷ್ (ಬ್ಯಾಟಿಂಗ್ 31) ಮತ್ತು ಟ್ರಾವಿಸ್ ಹೆಡ್ (ಬ್ಯಾಟಿಂಗ್ 11) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಹೆಡ್ ಅರ್ಧಶತಕ ಗಳಿಸಿದ್ದರು.

ಬೆಳಿಗ್ಗೆಯ ಅವಧಿಯಲ್ಲಿ ಬ್ಯಾಟಿಂಗ್ ಸ್ಪಲ್ಟ ಕಠಿಣವಾಗಲಿರುವುದರಿಂದ ಆತಿಥೇಯ ತಂಡವು ಎಚ್ಚರಿಕೆಯಿಂದ ಆಡಬಹುದು. ಆದರೆ, ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿ ಬಳಗವು ಎದುರಾಳಿಯನ್ನು ಖೆಡ್ಡಾಕ್ಕೆ ಬೀಳಿಸುವ ಕನಸು ಕಾಣುತ್ತಿದೆ.

ಪೂಜಾರ–ರಹಾನೆ ಜೊತೆಯಾಟ: ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಭಾರತ ತಂಡವು 250 ರನ್‌ಗಳ ಮೊತ್ತ ಗಳಿಸಲು ಕಾರಣರಾಗಿದ್ದ ಚೇತೇಶ್ವರ್ ಪೂಜಾರ ಎರಡನೇ ಇನಿಂಗ್ಸ್‌ನಲ್ಲಿಯೂ ಮಿಂಚಿದರು. ಶನಿವಾರ ದಿನದಾಟದ ಅಂತ್ಯಕ್ಕೆ ಭಾರತವು 3 ವಿಕೆಟ್‌ಗಳಿಗೆ 151 ರನ್‌ ಗಳಿಸಿತ್ತು. ಕ್ರೀಸ್‌ನಲ್ಲಿ ಉಳಿದಿದ್ದ ಪೂಜಾರ ಮತ್ತು ಅಜಿಂಕ್ಯ ಭಾನುವಾರ ಬೆಳಿಗ್ಗೆ ಎಚ್ಚರಿಕೆಯಿಂದ ಆಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 97 ರನ್‌ ಸೇರಿಸಿದರು. 88ನೇ ಓವರ್‌ನಲ್ಲಿ ಪೂಜಾರ ಔಟಾದ ಮೇಲೆ ಬಂದ ರೋಹಿತ್ ಶರ್ಮಾ ಕೇವಲ ಒಂದು ರನ್ ಗಳಿಸಿ ಮರಳಿದರು. ಅಜಿಂಕ್ಯ ಕೊನೆಗೂ ಲಯ ಕಂಡುಕೊಂಡಿದ್ದು ತಂಡಕ್ಕೆ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಆದರೆ ಕ್ರೀಸ್‌ಗೆ ಬಂದ ರಿಷಭ್ ಪಂತ್ ಬಿರುಸಿನ ಆಟಕ್ಕಿಳಿದರು. 16 ಎಸೆತಗಳಲ್ಲಿ 28 ರನ್‌ ಗಳಿಸಿದರು. ನಾಲ್ಕು ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು.

98ನೇ ಓವರ್‌ನಲ್ಲಿ ರಿಷಭ್ ಔಟಾದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಗುರಿ ಬೆನ್ನತ್ತಿದ ಆತಿಥೇಯರ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಳ್ಳಲು ಶಮಿ ಮತ್ತು ಅಶ್ವಿನ್ ಬಿಡಲಿಲ್ಲ. ಇದರಿಂದಾಗಿ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಕನಸಿನಲ್ಲಿ ವಿರಾಟ್ ಬಳಗ ತೇಲುತ್ತಿದೆ.

ಪಂದ್ಯ ಆರಂಭ: 5.30

ನೇರಪ್ರಸಾರ: ಸೋನಿ ನೆಟ್‌ವರ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT