ವೇಗದ ಬೌಲಿಂಗ್‌ನ ರಾಜ್ಯದ ಹೊಸ ಚಿಗುರು ಪ್ರಸಿದ್ಧ ಕೃಷ್ಣ

7

ವೇಗದ ಬೌಲಿಂಗ್‌ನ ರಾಜ್ಯದ ಹೊಸ ಚಿಗುರು ಪ್ರಸಿದ್ಧ ಕೃಷ್ಣ

Published:
Updated:
Deccan Herald

ಬೆಂಗಳೂರು: ಮಧ್ಯಮ ವೇಗದ ವಿಭಾಗದ ಉದಯೋನ್ಮುಖ ಪ್ರತಿಭೆಗಳಲ್ಲಿ ಈಗ ಒಂದು ಹೆಸರು ಪ್ರಸಿದ್ಧವಾಗಿದೆ. ಅವರೇ ಬೆಂಗಳೂರಿನ ಪ್ರಸಿದ್ಧ ಕೃಷ್ಣ.

ಭಾರತದ ಕ್ರಿಕೆಟ್ ರಂಗಕ್ಕೆ ಕರ್ನಾಟಕವು ಶ್ರೇಷ್ಠ ಮಧ್ಯಮವೇಗಿಗಳನ್ನು ನೀಡಿದೆ. ರೋಜರ್ ಬಿನ್ನಿ, ಜಾವಗಲ್ ಶ್ರೀನಾಥ್, ಡೇವಿಡ್ ಜಾನ್ಸನ್, ದೊಡ್ಡಗಣೇಶ್, ವಿನಯಕುಮಾರ್, ಅಭಿಮನ್ಯು ಮಿಥುನ್, ಎಸ್. ಅರವಿಂದ್ ಮುಂತಾದವರ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಈಗ ಆ ಸಾಲಿನಲ್ಲಿ ನಿಲ್ಲುವ ನಿರೀಕ್ಷೆ ಮೂಡಿಸಿರುವ ಮತ್ತೊಬ್ಬ ಯುವ ಬೌಲರ್ ಪ್ರಸಿದ್ಧ.  ಹೋದ ವಾರ ಕ್ಯಾಪ್ಟನ್ ತಿಮ್ಮಪ್ಪಯ್ಯ ಕ್ರಿಕಟ್ ಟೂರ್ನಿಯಲ್ಲಿ ಅವರು ಹಿಮಾಚಲ ಪ್ರದೇಶ ಸಂಸ್ಥೆ ಎದುರಿನ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವನ್‌ ತಂಡದ ಪರ 21ಕ್ಕೆ5 ವಿಕೆಟ್ ಗಳಿಸಿದ್ದರು.

ಭುವನೇಶ್ವರ್ ಕುಮಾರ್ ಮಾದರಿಯ ಸ್ವಿಂಗ್, ಉಮೇಶ್ ಯಾದವ್ ರೀತಿಯ ವೇಗವನ್ನು ಮೇಳೈಸಿಕೊಂಡು ಬೌಲಿಂಗ್ ಮಾಡುವ ಚಾಕಚಕ್ಯತೆಯನ್ನು 22 ವರ್ಷದ ಪ್ರಸಿದ್ಧ ರೂಢಿಸಿಕೊಂಡಿದ್ದಾರೆ. ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು. ಕಾಮೇಶ್ ನಾಗರಕೋಟಿ ಅವರು ಗಾಯಗೊಂಡಿದ್ದರಿಂದ ಸಿಕ್ಕ ಅವಕಾಶವನ್ನು ಪ್ರಸಿದ್ಧ ಸಮರ್ಥವಾಗಿ ಬಳಸಿಕೊಂಡಿದ್ದರು.  ‘ಮ್ಯಾಚ್‌ ವಿನ್ನಿಂಗ್’ ಬೌಲರ್‌ ಆಗಿ ಮಿಂಚಿದ್ದರು. ಇದೀಗ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಪ್ರತಿ ಗಂಟೆಗೆ 135 ಕಿ.ಮೀ ಗಿಂತಲೂ ಹೆಚ್ಚು ವೇಗದಲ್ಲಿ ಎಸೆತಗಳನ್ನು ಪ್ರಯೋಗಿಸಬಲ್ಲರು. ‘ಎ’ ಮಾದರಿ ಪಂದ್ಯದಲ್ಲಿ ಆಡಿರುವ ಪ್ರಸಿದ್ಧ್ ಇನ್ನೂ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿಲ್ಲ. ಈ ಬಾರಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. 

ಈ ಸಲದ ಕೆಪಿಎಲ್‌ನಲ್ಲಿ ಅವರು ಬೆಂಗಳೂರು ಬ್ಲಾಸ್ಟರ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಆಗಸ್ಟ್ 15ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಅವರ ಬೌಲಿಂಗ್ ನೋಡುವ ಅವಕಾಶ ಕರ್ನಾಟಕದ ಕ್ರಿಕೆಟ್‌ಪ್ರಿಯರಿಗೆ ಲಭಿಸಲಿದೆ.  ಈ ಕುರಿತು ಪ್ರಸಿದ್ಧ ಕೃಷ್ಣ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

‘ಬೆಂಗಳೂರಿನ ತಂಡದಲ್ಲಿರುವುದು ಖುಷಿ ತಂದಿದೆ. ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರರು ಇದ್ದಾರೆ. ಅವರಿಬ್ಬರಿಂದಲೂ ನನಗೆ ಕಲಿಯಲು ಬಹಳಷ್ಟು ಅವಕಾಶ ಸಿಗುತ್ತಿದೆ. ಇದು ನಮ್ಮ ಟೂರ್ನಿ. ಇದರಲ್ಲಿ ಆಡುವುದೇ ಒಂದು ವಿಶಿಷ್ಟ ಅನುಭವ. 19 ವರ್ಷದೊಳಗಿನವರ ತಂಡದ ಆಟಗಾರರೂ ಇದ್ದಾರೆ. ಅವರ ಪಾತ್ರ ಮಹತ್ವದ್ದು’ ಎಂದು ಪ್ರಸಿದ್ಧ ಹೆಳುತ್ತಾರೆ.

‘ಹೋದ ವರ್ಷದ ಕೆಪಿಎಲ್‌ಗೂ ಈ ಬಾರಿಗೂ ವ್ಯತ್ಯಾಸವಿದೆ. ಬೇರೆ ಬೇರೆ ಟೂರ್ನಿಗಳಲ್ಲಿ ಆಡಿ ಬಂದಿರುವ ಅನುಭವ ನನ್ನ ಬೆನ್ನಿಗಿದೆ. ಐಪಿಎಲ್, ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ಆಡಿದ್ದು ಒಳ್ಳೆಯ ಅನುಭವ. ಅಲ್ಲಿ ಕಲಿತದ್ದನ್ನು ಪ್ರಯೋಗಿಸಲು ಕೆಪಿಎಲ್ ಉತ್ತಮ ವೇದಿಕೆ.  ಕಳೆದ ಒಂದು ವರ್ಷದಲ್ಲಿ ನಾನು ಉತ್ತಮವಾಗಿ ಆಡಿದ್ದೇನೆ. ಬಹಳಷ್ಟು ಹೊಸ ವಿಷಯಗಳನ್ನು ಕಲಿತಿದ್ದೇನೆ. ಮುಂದೆಯೂ ಕಲಿಯುವ ಅವಕಾಶ ಇದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಕೆಪಿಎಲ್ ಪಂದ್ಯಗಳು ನಡೆಯುತ್ತವೆ. ಆ  ಊರುಗಳ ಅಭಿಮಾನಿಗಳ ಮುಂದೆ ಆಡುವುದು ವಿಶೇಷ ಅನುಭವ’ ಎಂದು ಹೇಳುತ್ತಾರೆ.

ಕರ್ನಾಟಕದ ತಂಡದಲ್ಲಿ ಆರ್. ವಿನಯಕುಮಾರ್, ಅಭಿಮನ್ಯು ಮಿಥುನ್ ಅವರು ಪ್ರಮುಖ ಬೌಲರ್‌ಗಳಾಗಿದ್ದಾರೆ. ಅವರ ಸಮಕಾಲೀನ ಮಧ್ಯಮವೇಗಿ   ಎಸ್‌. ಅರವಿಂದ ಈಚೆಗೆ ನಿವೃತ್ತರಾದರು. ಅವರ ಜಾಗ ತುಂಬುವ ಸಾಮರ್ಥ್ಯ ಇರುವ ಉದಯೋನ್ಮುಖ ಯುವ ಪ್ರತಿಭೆಗಳಲ್ಲಿ ಪ್ರಸಿದ್ಧ ಅವರು ಮುಂಚೂಣಿಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !