ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

Last Updated 9 ಜನವರಿ 2023, 19:30 IST
ಅಕ್ಷರ ಗಾತ್ರ

ಗುವಾಹಟಿ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಈಗಿನಿಂದಲೇ ಸಜ್ಜಾಗುತ್ತಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ.

ಸರಣಿಯ ಮೊದಲ ಪಂದ್ಯ ಗುವಾಹಟಿಯಲ್ಲಿ ಮಂಗಳವಾರ ನಡೆಯಲಿದ್ದು, ರೋಹಿತ್‌ ಶರ್ಮ ಬಳಗ ಗೆಲುವಿನ ವಿಶ್ವಾಸದಲ್ಲಿದೆ.

ಟಿ20 ಸರಣಿಯಲ್ಲಿ ಆಡದೇ ಇದ್ದ ರೋಹಿತ್‌, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ ಅವರು ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಆದರೆ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರ ಗೈರು ಅಲ್ಪ ಹಿನ್ನಡೆ ಉಂಟುಮಾಡಿದೆ.

ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಭಾರತ ತಂಡ ಲಂಕಾ ವಿರುದ್ಧದ ಟಿ20 ಸರಣಿಯನ್ನು 2–1 ರಲ್ಲಿ ಜಯಿಸಿತ್ತು.

ಏಕದಿನ ವಿಶ್ವಕಪ್‌ ಟೂರ್ನಿ ಭಾರತದ ಆತಿಥ್ಯದಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯಲಿದೆ. ವಿಶ್ವಕಪ್‌ಗೆ ಮುನ್ನ ಭಾರತ ತಂಡ 15 ಏಕದಿನ ಪಂದ್ಯಗಳನ್ನು (ಏಷ್ಯಾಕಪ್‌ ಹೊರತುಪಡಿಸಿ) ಆಡಲಿದೆ. ವಿಶ್ವಕಪ್‌ಗೆ ಸಮತೋಲಿತ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ.

ಲಂಕಾ ವಿರುದ್ಧದ ಪಂದ್ಯಕ್ಕೆ ಅಗ್ರ ಕ್ರಮಾಂಕದ ಐವರು ಬ್ಯಾಟರ್‌ಗಳ ಆಯ್ಕೆ ತಂಡದ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ರೋಹಿತ್‌ ಜತೆ ಯಾರು ಇನಿಂಗ್ಸ್‌ ಆರಂಭಿಸುವರು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಶುಭಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್‌ ಅವರ ನಡುವೆ ಪೈಪೋಟಿ ಇದೆ. ಇಶಾನ್‌ ಅವರು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರು.

ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಮತ್ತು ಕೆ.ಎಲ್‌.ರಾಹುಲ್ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡಬೇಕಾದರೆ ಯುವ ಆಟಗಾರರನ್ನು ಕೈಬಿಡಬೇಕಾಗುತ್ತದೆ. ಟಿ20ಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿರುವ ಸೂರ್ಯಕುಮಾರ್‌ ಯಾದವ್‌ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡುವ ಚಿಂತನೆಯೂ ನಡೆದಿದೆ.

ಬೌಲಿಂಗ್‌ನಲ್ಲಿ ಬೂಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್‌ ಸಿರಾಜ್‌ ಮತ್ತು ಆರ್ಷದೀಪ್‌ ಸಿಂಗ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ದಸುನ್‌ ಶನಕ ನೇತೃತ್ವದ ಶ್ರೀಲಂಕಾ ತಂಡ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತಕ್ಕೆ ತಕ್ಕ ಪೈಪೋಟಿ ನೀಡಿತ್ತು. ಮೊದಲ ಪಂದ್ಯವನ್ನು ಕೇವಲ ಎರಡು ರನ್‌ಗಳಿಂದ ಸೋತಿದ್ದ ತಂಡ, ಎರಡನೇ ಪಂದ್ಯ ಜಯಿಸಿತ್ತು.

ಶನಕ ಅವರು ಟಿ20 ಸರಣಿಯಲ್ಲಿ 187.24ರ ಸರಾಸರಿಯಲ್ಲಿ 124 ರನ್‌ ಕಲೆಹಾಕಿದ್ದರು. ಪಥುಮ್‌ ನಿಸಾಂಕ ಮತ್ತು ಚರಿತ ಅಸಲಂಕಾ ಅವರಿಂದಲೂ ತಂಡ ಉತ್ತಮ ಆಟ ನಿರೀಕ್ಷಿಸುತ್ತಿದೆ.

ತಂಡಗಳು

ಭಾರತ: ರೋಹಿತ್‌ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್, ಇಶಾನ್‌ ಕಿಶನ್ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್‌ ಯಾದವ್, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಉಮ್ರಾನ್‌ ಮಲಿಕ್, ಆರ್ಷದೀಪ್‌ ಸಿಂಗ್

ಶ್ರೀಲಂಕಾ: ದಸುನ್‌ ಶನಕ (ನಾಯಕ), ಕುಶಾಲ್‌ ಮೆಂಡಿಸ್‌ (ಉಪನಾಯಕ), ಪಥುಮ್‌ ನಿಸಾಂಕ, ಅವಿಷ್ಕಾ ಫೆರ್ನಾಂಡೊ, ಸದೀರ ಸಮರವಿಕ್ರಮ, ಚರಿತ ಅಸಲಂಕಾ, ಧನಂಜಯ ಡಿಸಿಲ್ವಾ, ವಣಿಂದು ಹಸರಂಗ, ಅಶೆನ್ ಬಂಡಾರ, ಮಹೀಶ್ ತೀಕ್ಷಣ, ಚಾಮಿಕ ಕರುಣರತ್ನೆ, ದಿಲ್ಶಾನ್‌ ಮಧುಶಂಕ, ಕಸುನ್‌ ರಜಿತ, ನುವನಿದು ಫೆರ್ನಾಂಡೊ, ದುನಿತ್ ವೆಲ್ಲಲಗೆ, ಪ್ರಮೋದ್ ಮದುಶನ್, ಲಾಹಿರು ಕುಮಾರ

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT