ಬುಧವಾರ, ಮೇ 27, 2020
27 °C
ಬ್ಲಿಜ್ ಟೂರ್ನಿಯಲ್ಲಿ ಪಾಲ್ಗೊಂಡ ಭಾರತ ತಂಡದ ಲೆಗ್ ಸ್ಪಿನ್ನರ್

ಆನ್‌ಲೈನ್ ಚೆಸ್ ಸ್ಪರ್ಧೆಯಲ್ಲಿ ಚಾಹಲ್; ಆಟಗಾರರ ಜೊತೆ ಸಂವಾದದಲ್ಲಿ ಭಾಗಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಕೊರೊನಾ ಸೃಷ್ಟಿಸಿರುವ ಅನಾಹುತಗಳಿಂದಾಗಿ ಕ್ರೀಡಾಪಟುಗಳ ಪೈಕಿ ಅನೇಕರು ಹವ್ಯಾಸಗಳನ್ನೇ ಬದಲಿಸಿಕೊಂಡಿದ್ದಾರೆ. ಚೆಸ್‌ ಆಟಗಾರನಾಗಿದ್ದ ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಇದೀಗ ತಮ್ಮ ಹಳೆಯ ಕ್ರೀಡೆಯ ಕಡೆಗೆ ಮುಖ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ನಡೆದ ಬ್ಲಿಜ್ ಟೂರ್ನಿಯೊಂದರಲ್ಲಿ ಪಾಲ್ಗೊಂಡು ಗಮನ ಸೆಳೆದಿರುವ ಚಾಹಲ್ ‘ಚೆಸ್ ಪ್ರಭಾವದಿಂದಾಗಿ ಕ್ರಿಕೆಟ್ ಅಂಗಣದಲ್ಲಿ ಶಾಂತಚಿತ್ತನಾಗಿ ಇರಲು ನನಗೆ ಸಾಧ್ಯವಾಗುತ್ತಿದೆ’ ಎಂದು ಹೇಳಿದ್ದಾರೆ. 

ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮುನ್ನ ಚೆಸ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಚಾಹಲ್ 12 ವರ್ಷದೊಳಗಿನವರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದರು. ವಿಶ್ವ ಯೂಥ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಅನುಭವವೂ ಇರುವ ಅವರ ಹೆಸರು ವಿಶ್ವ ಚೆಸ್ ಫೆಡರೇಷನ್‌ನ ವೆಬ್‌ಸೈಟ್‌ನಲ್ಲಿ ದಾಖಲಾಗಿದೆ. ಇವರ ಫಿಡೆ ರೇಟಿಂಗ್ 1956 ಆಗಿದೆ.

ಬ್ಲಿಜ್ ಟೂರ್ನಿ ಆರಂಭಕ್ಕೂ ಮೊದಲು ಅಂತರರಾಷ್ಟ್ರೀಯ ಮಾಸ್ಟರ್ ರಾಕೇಶ್ ಕುಲಕರ್ಣಿ ಮತ್ತು ಗ್ರ್ಯಾಂಡ್‌ಮಾಸ್ಟರ್ ಅಭಿಜಿತ್ ಗುಪ್ತಾ ಜೊತೆ ಸಂವಾದದಲ್ಲಿ ಪಾಲ್ಗೊಂಡ ಚಾಹಲ್ ’ಕ್ರಿಕೆಟ್‌ ಅಂಗಣದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರೂ ವಿಕೆಟ್ ಗಳಿಸದೇ ಇರಬಹುದು. ಅಂಥ ಸಂದರ್ಭದಲ್ಲೂ ಕೋಪಿಸಿಕೊಳ್ಳದೆ ಶಾಂತವಾಗಿರಲು ಚೆಸ್‌ ಕಲಿಸಿದೆ. ಟೆಸ್ಟ್ ಪಂದ್ಯದ ಒಂದು ದಿನ ಯಶಸ್ಸು ಕಾಣದಿದ್ದರೂ ಮರುದಿನ ಉತ್ಸಾಹದಿಂದ ಬೌಲಿಂಗ್ ಮಾಡಬೇಕಾದರೆ ಮನಸ್ಸು ಶಾಂತವಾಗಿರಬೇಕು’ ಎಂದರು.

ಚೆಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದ್ದಾಗಲೇ ಕ್ರಿಕೆಟ್ ಅಂಗಣಕ್ಕೆ ಕಾಲಿಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಚಾಹಲ್ ‘ಎರಡೂ ಕ್ರೀಡೆಯಲ್ಲಿ ಅವಕಾಶಗಳ ಬಾಗಿಲು ಮುಕ್ತವಾಗಿತ್ತು. ತಂದೆಯ ಜೊತೆ ಚರ್ಚಿಸಿದಾಗ ಆಯ್ಕೆ ನಿನಗೇ ಬಿಟ್ಟದ್ದು ಎಂದರು. ನನಗೆ ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಇತ್ತು, ಅದಕ್ಕೆ ಆ ಕಡೆಗೆ ವಾಲಿದೆ’ ಎಂದರು. ಚಾಹಲ್ ಈ ವರೆಗೆ ಒಟ್ಟು 52 ಏಕದಿನ ಮತ್ತು 42 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

‘ಎಷ್ಟೋ ವರ್ಷಗಳ ನಂತರ ಕುಟುಂಬದವರ ಜೊತೆ ಕಳೆಯಲು ಸಮಯ ಸಿಕ್ಕಿದೆ. ಕೊರೊನಾ ಆತಂಕದಿಂದಾಗಿ ಉಂಟಾಗಿರುವ ಪರಿಸ್ಥಿತಿಯಲ್ಲಿ ಕುಟುಂಬದವರನ್ನು ಬಿಟ್ಟು ಎಲ್ಲೂ ಹೋಗಲಿಲ್ಲ. ತಡವಾಗಿ ಮಲಗಿ ತಡವಾಗಿಯೇ ಏಳುತ್ತೇನೆ’ ಎಂದು ಅವರು ಹೇಳಿದರು.

ಚೆಸ್‌ನ ಮೂರು ಮಾದರಿಗಳಲ್ಲಿ ಒಂದಾಗಿರುವ ಬ್ಲಿಜ್‌ನಲ್ಲಿ ಪ್ರತಿ ಆಟಗಾರನಿಗೆ ಆಡಲು 10 ಅಥವಾ ಅದಕ್ಕಿಂತ ಕಡಿಮೆ ಅವಧಿ ಸಿಗುತ್ತದೆ. ಚಾಹಲ್ ಉದಯೋನ್ಮುಖ ಆಟಗಾರ ಆರ್‌.ಪ್ರಜ್ಞಾನಂದ, ಭಾರತದ ಎರಡನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಬಿ.ಅಧಿಪನ್, ನಿಹಾರ್ ಸರಿನ್ ಮತ್ತು ಕಾರ್ತಿಕೇಯನ್ ಮುರಳಿ ಮುಂತಾದವರ ವಿರುದ್ಧ ಆಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು