ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶುತೋಷ್–ಖರೆ ‘ದ್ವಿಶತಕ’ದ ಜೊತೆಯಾಟ

ಕರ್ನಾಟಕಕ್ಕೆ ದುಬಾರಿಯಾದ ಕೈಬಿಟ್ಟ ಕ್ಯಾಚ್; ವಿದ್ವತ್‌ಗೆ 3 ವಿಕೆಟ್; ಛತ್ತೀಸಗಢ ಉತ್ತಮ ಮೊತ್ತ
Last Updated 3 ಜನವರಿ 2023, 22:29 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಛತ್ತೀಸಗಢದ ಆಶುತೋಷ್ ಸಿಂಗ್ ಅವರ ಕ್ಯಾಚ್ ಕೈಚೆಲ್ಲಿದ್ದು ಆತಿಥೇಯ ಕರ್ನಾಟಕಕ್ಕೆ ದುಬಾರಿಯಾಯಿತು.

ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದ ಆಶುತೋಷ್ ಅವರಿಗೆ ವಿಶಾಲ್ ಒಣತ್ ಕ್ಯಾಚ್ ಬಿಟ್ಟು ಜೀವದಾನ ನೀಡಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಆಶುತೋಷ್ (ಬ್ಯಾಟಿಂಗ್ 118; 273 ಎಸೆತ ) ಅವರು ಅಮನದೀಪ್ ಖರೆ (93; 191ಎ, 4X13) ಜೊತೆಗೆ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 210 ರನ್‌ ಸೇರಿಸಿದರು. ಇದರಿಂದಾಗಿ ತಂಡವು ದಿನದಾಟದ ಮುಕ್ತಾಯಕ್ಕೆ ತಂಡವು 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 267 ರನ್‌ ಗಳಿಸಿತು.

ಊಟಕ್ಕೂ ಮುನ್ನ ಮತ್ತು ಚಹಾದ ನಂತರ ಹೊಸ ಚೆಂಡಿನಲ್ಲಿ ಕರ್ನಾಟಕದ ಬೌಲರ್‌ಗಳಿಗೆ ವಿಕೆಟ್‌ ಒಲಿದವು. ಉಳಿದಂತೆ ಇಡೀ ದಿನ ಆಶುತೋಷ್ ಮತ್ತು ಅಮನದೀಪ್ ಆಟವೇ ಮೇಲುಗೈ ಸಾಧಿಸಿತು. ಆರು ಗಂಟೆ 53 ನಿಮಿಷ ನಡೆದ ದಿನದಾಟದಲ್ಲಿ 4 ಗಂಟೆ 40 ನಿಮಿಷ ಇವರ ಜೊತೆಯಾಟವಿತ್ತು.

ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ರೋನಿತ್ ಬದಲು ಜಾಗ ಪಡೆದ ಮಧ್ಯಮವೇಗಿ ವಾಸುಕಿ ಕೌಶಿಕ್ ತಮ್ಮ ಮೊದಲ ಓವರ್‌ನಲ್ಲಿಯೇ ಅನುಜ್ ತಿವಾರಿ ವಿಕೆಟ್ ಗಳಿಸಿದರು. ವಿಕೆಟ್‌ಕೀಪರ್ ಬಿ.ಆರ್. ಶರತ್ ಚೆಂದದ ಕ್ಯಾಚ್ ಪಡೆದರು. ತಂಡದ ಖಾತೆಯಲ್ಲಿ ಒಂದೂ ರನ್ ಇರಲಿಲ್ಲ. ಆಗ ಆಶುತೋಷ್ ಕ್ರೀಸ್‌ಗೆ ಬಂದರು.

ನಂತರದ ಓವರ್‌ನಲ್ಲಿ ವಿದ್ವತ್ ಕಾವೇರಪ್ಪ ಮಿಂಚಿದರು. ಅವರ ಎಸೆತದಲ್ಲಿ ಶರತ್ ಪಡೆದ ಕ್ಯಾಚ್‌ಗೆ ಅವಿನಾಶ್ ಸಿಂಗ್ ಕೂಡ ಖಾತೆ ತೆರೆಯದೇ ನಿರ್ಗಮಿಸಿದರು. ಈ ಋತುವಿನಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿರುವ ನಾಯಕ ಹರಪ್ರೀತ್ ಸಿಂಗ್ (34; 55ಎ) ಮತ್ತು ಆಶುತೋಷ್ ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು.

3ನೇ ವಿಕೆಟ್ ಜೊತೆಯಾಟದಲ್ಲಿ 42 ರನ್‌ ಗಳಿಸಿದ್ದ ಈ ಜೋಡಿಯನ್ನು ವೈಶಾಖ ವಿಜಯ ಕುಮಾರ್ ಬೇರ್ಪಡಿಸಿದರು. ಹರಪ್ರೀತ್ ಕೂಡ ಶರತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು, ಆಗ ತಂಡದ ಸ್ಕೋರ್ 3ಕ್ಕೆ43 ಆಗಿತ್ತು.

ಈ ಹಂತದಲ್ಲಿ ಆಶುತೋಷ್ ಜೊತೆಗೂಡಿದ ಅಮನದೀಪ್ ಇನಿಂಗ್ಸ್‌ಗೆ ಬಲ ತುಂಬಿದರು. ಇಬ್ಬರ ತಾಳ್ಮೆಯ ಆಟದ ಮುಂದೆ ಕರ್ನಾಟಕದ ಬೌಲರ್‌ಗಳ ಆಟ ನಡೆಯಲಿಲ್ಲ. ಭೋಜನ ವಿರಾಮಕ್ಕೆ 84 ರನ್‌ ಮಾತ್ರ ಛತ್ತೀಸಗಢದ ಖಾತೆಯಲ್ಲಿದ್ದವು. ನಂತರದ ಅವಧಿಯಲ್ಲಿ ಚೆಂಡಿನ ಹೊಳಪು ಕುಂದಿದ ಮೇಲೆ ವೇಗಿಗಳ ಎಸೆತಗಳಲ್ಲಿ ಹೆಚ್ಚು ಮೊನಚು ಇರಲಿಲ್ಲ. ಸ್ಪಿನ್ ಜೋಡಿ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಕೂಡ ದುಬಾರಿಯಾದರು. ಇಬ್ಬರೂ ಹಾಕಿದ ಒಟ್ಟು 32 ಓವರ್‌ಗಳಲ್ಲಿ 129 ರನ್‌ ಬಿಟ್ಟುಕೊಟ್ಟರು. ಬೌಲರ್‌ಗಳನ್ನು ಪದೇ ಪದೇ ಬದಲಾಯಿಸಿದ ಮಯಂಕ್ ಪ್ರಯೋಗಕ್ಕೂ ಫಲ ಸಿಗಲಿಲ್ಲ.

ಇವರ ಜೊತೆಯಾಟವು ಚಹಾ ವಿರಾಮದ ನಂತರವೂ ಮುಂದು ವರೆಯಿತು. ಶತಕದತ್ತ ಸಾಗಿದ್ದ ಅಮನದೀಪ್ ಅವರಿಗೆ ಹೊಸ ಚೆಂಡಿನ ಹೊಳಪು ಕಣ್ಣು ಕುಕ್ಕಿತು!

86ನೇ ಓವರ್‌ನಲ್ಲಿ ವಿದ್ವತ್ ಹಾಕಿದ ಎಸೆತದಲ್ಲಿ ಅಮನದೀಪ್ ವಿಕೆಟ್‌ಕೀಪರ್ ಶರತ್‌ಗೆ ಕ್ಯಾಚಿತ್ತರು. ಜೊತೆಯಾಟ ಮುರಿಯಿತು. ಅದೇ ಓವರ್‌ನಲ್ಲಿ ಸುಮಿತ್ ರುಯ್ಕರ್‌ ಅವರನ್ನೂ ಕ್ಲೀನ್‌ಬೌಲ್ಡ್ ಮಾಡಿದ ವಿದ್ವತ್ ಕೇಕೆ ಹಾಕಿದರು. ಇದರಿಂದಾಗಿ ಬುಧವಾರ ಬೆಳಿಗ್ಗೆ ಮತ್ತೆ ವಿಕೆಟ್ ಬೇಟೆಯಾಡುವ ಆಸೆ ಆತಿಥೇಯ ಬಳಗದಲ್ಲಿ ಮೂಡಿದೆ.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಛತ್ತೀಸಗಢ: 5ಕ್ಕೆ267 (90 ಓವರ್‌ಗಳಲ್ಲಿ)

ಅವಿನಾಶ್‌ಸಿಂಗ್ ಸಿ ಶರತ್ ಬಿ ವಿದ್ವತ್ 0 (9ಎ), ತಿವಾರಿ ಸಿ ಶರತ್ ಬಿ ಕೌಶಿಕ್ 0 (4ಎ), ಆಶುತೋಷ್‌ಸಿಂಗ್ ಬ್ಯಾಟಿಂಗ್ 118 (273ಎ, 4X18, 6X1), ಹರಪ್ರೀತ್ ಸಿಂಗ್ ಸಿ ಶರತ್ ಬಿ ವೈಶಾಖ 34 (55ಎ, 4X6), ಅಮನದೀಪ್ ಸಿ ಶರತ್ ಬಿ ವಿದ್ವತ್ 93 (191ಎ, 4X13), ಸುಮಿತ್ ಬಿ ವಿದ್ವತ್ 0 (2ಎ), ಶಶಾಂಕ್‌ ಬ್ಯಾಟಿಂಗ್ 2 (8ಎ)

ಇತರೆ 20 (ಬೈ 9, ಲೆಗ್‌ಬೈ 6, ವೈಡ್ 3, ನೋಬಾಲ್ 2)

ವಿಕೆಟ್ ಪತನ: 1–0 (ತಿವಾರಿ; 1.4), 2–1 (ಅವಿನಾಶ್‌ಸಿಂಗ್; 2.3), 3–43 (ಹರಪ್ರೀತ್‌ಸಿಂಗ್ ಭಾಟಿಯಾ; 20.3), 4–253 (ಅಮನದೀಪ್ ಖರೆ; 85.4), 5–253 (ಸುಮಿತ್ ರುಯ್ಕರ್; 85.6)

ಬೌಲಿಂಗ್‌: ವಿದ್ವತ್ ಕಾವೇರಪ್ಪ 21–4–54–3, ವಾಸುಕಿ ಕೌಶಿಕ್ 19–6–31–1, ವಿಜಯಕುಮಾರ್ ವೈಶಾಖ 18–6–38–1, ಶ್ರೇಯಸ್ ಗೋಪಾಲ್ 16–0–70–0, ಕೆ.ಗೌತಮ್ 16–3–59–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT