ಪಾಂಡ್ಯ, ರಾಹುಲ್‌ ಮೇಲಿನ ಅಮಾನತು ರದ್ದುಗೊಳಿಸಲು ಖನ್ನಾ ಮನವಿ

7
ಸಿಒಎಗೆ ಪತ್ರ ಬರೆದ ಬಿಸಿಸಿಐ ಹಂಗಾಮಿ ಅಧ್ಯಕ್ಷ ಖನ್ನಾ

ಪಾಂಡ್ಯ, ರಾಹುಲ್‌ ಮೇಲಿನ ಅಮಾನತು ರದ್ದುಗೊಳಿಸಲು ಖನ್ನಾ ಮನವಿ

Published:
Updated:
Prajavani

ನವದೆಹಲಿ: ಕೆ.ಎಲ್‌.ರಾಹುಲ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಮೇಲಿನ ಅಮಾನತು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ಶನಿವಾರ ಪತ್ರ ಬರೆದಿದ್ದಾರೆ.

‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್‌ ಮತ್ತು ಹಾರ್ದಿಕ್‌, ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅದು ವಿವಾದದ ರೂಪ ಪಡೆದಿದ್ದರಿಂದ ಅವರನ್ನು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಿಂದ ಅಮಾನತುಗೊಳಿಸಲಾಗಿತ್ತು.

‘ರಾಹುಲ್‌ ಮತ್ತು ಹಾರ್ದಿಕ್‌ ತಪ್ಪು ಮಾಡಿದ್ದಾರೆ. ಅದಕ್ಕಾಗಿ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾರೆ. ಅವರಿಗೆ ಈಗ ತಪ್ಪಿನ ಅರಿವಾಗಿದೆ. ಈ ಸಂಬಂಧ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಅವರ ಮೇಲಿನ ಅಮಾನತು ರದ್ದು ಮಾಡಿ’ ಎಂದು ಖನ್ನಾ, ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಕರಣದ ತನಿಖೆ ಬಾಕಿ ಇದೆ. ಅದು ಇನ್ನು ತಡವಾಗಬಹುದು. ವಿಶ್ವಕಪ್‌ ಆರಂಭಕ್ಕೆ ಇನ್ನು ನಾಲ್ಕು ತಿಂಗಳಷ್ಟೇ ಬಾಕಿ ಇದೆ.  ಹೀಗಾಗಿ ಮುಂಬರುವ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಭಾರತ ತಂಡದ ಪರ ಆಡಲು ಇಬ್ಬರಿಗೂ ಅನುವು ಮಾಡಿಕೊಡಿ’ ಎಂದು ವಿನಂತಿಸಿದ್ದಾರೆ.

ರಾಹುಲ್‌ ಮತ್ತು ಪಾಂಡ್ಯ ಅವರ ವಿವಾದಾತ್ಮಕ ಹೇಳಿಕೆ ಪ್ರಕರಣದ ಕುರಿತು ತನಿಖೆ ನಡೆಸಲು ತುರ್ತಾಗಿ ಒಂಬುಡ್ಸ್‌ಮನ್‌ ನೇಮಕ ಮಾಡಬೇಕು ಎಂದು ಸಿಒಎ, ಗುರುವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.
 
ಬಿಸಿಸಿಐ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಸ್.ಎ. ಬಾಬ್ನೆ ಹಾಗೂ ಎ.ಎಂ. ಸಪ್ರೆ ಅವರಿದ್ದ ದ್ವಿಸದಸ್ಯ ಪೀಠ, ಮುಂದಿನ ವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿತ್ತು.

ಒಂಬುಡ್ಸ್‌ಮನ್‌ ನೇಮಕದ ಕುರಿತು ಚರ್ಚಿಸಲು ಶೀಘ್ರವೇ ವಿಶೇಷ ಸಾಮಾನ್ಯ ಸಭೆ ನಡೆಸುವಂತೆ ಬಿಸಿಸಿಐ ಖಜಾಂಚಿ ಅನಿರುದ್ಧ್‌ ಚೌಧರಿ ಹಾಗೂ 14 ರಾಜ್ಯಸಂಸ್ಥೆಗಳು ಖನ್ನಾ ಅವರನ್ನು ಒತ್ತಾಯಿಸಿವೆ.

ಈ ಕುರಿತು ಮಾತನಾಡಿರುವ ಅವರು ‘ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚಿಸಿಯೇ ಒಂಬುಡ್ಸ್‌ಮನ್‌ ನೇಮಿಸಬೇಕು. ಈ ಕುರಿತ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ. ಈಗ ವಿಶೇಷ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತಿಲ್ಲ. ಹಾಗೇನಾದರು ಮಾಡಿದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !