ಶನಿವಾರ, ಜೂಲೈ 4, 2020
27 °C
ಕೋವಿಡ್ ನಂತರದ ಕ್ರೀಡೆಯ ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಟ್ಟು ಬಿಚ್ಚಿಟ್ಟ ಸುಜಿತ್ ಸೋಮಸುಂದರ

ಪರರೊಂದಿಗೆ ಹೋಲಿಕೆ ಸ್ವಪ್ರಗತಿಗೆ ಮಾರಕ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಕೆ ಮಾಡಿ ಕೀಳರಿಮೆ ಮೂಡಿಸುವುದನ್ನು ಮನೆಯ ಹಿರಿಯರೇ ಅನೇಕ ಬಾರಿ ಮಾಡುತ್ತಾರೆ. ಬೆಳೆದಂತೆ ನಮ್ಮನ್ನು ಇನ್ನೊಬ್ಬರೊಂದಿಗೆ ತುಲನೆ ಮಾಡಿಕೊಳ್ಳುತ್ತ ಬೆಳೆಯುತ್ತೇವೆ. ಆದರೆ ಕೊರೊನಾ ನಂತರದ ಕ್ರೀಡೆಯಲ್ಲಿ ಇಂತಹ ರೂಢಿಯು ಪ್ರಗತಿಗೆ ಮಾರಕವಾಗುತ್ತದೆ. ಅದನ್ನು ಕೈಬಿಡಲೇಬೇಕು’–

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ, ಹಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಅವರ ಸಲಹೆಗಳಿವು. ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವು ಕ್ರೀಡಾಂಗಣಗಳು ಮತ್ತು ತರಬೇತಿ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಹಂತಹಂತವಾಗಿ ಕ್ರೀಡಾ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಇದೆ. ಆದರೆ ಎರಡು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ‘ಗೃಹಬಂಧನ’ದಲ್ಲಿದ್ದ ಕ್ರೀಡಾಪಟುಗಳು ಮತ್ತೆ ಹೊರಾಂಗಣಕ್ಕೆ ಮರಳಿದಾಗ ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಕುರಿತು ಸುಜಿತ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಕ್ರೀಡಾಪಟುಗಳು ಈಗ ಎದುರಿಸುವ ಪ್ರಮುಖ ಸವಾಲು ಏನು?

ಹೊರಾಂಗಣಕ್ಕೆ ಅಥವಾ ತರಬೇತಿ ಚಟುವಟಿಕೆಗಳಿಗೆ ಮರಳಿದಾಕ್ಷಣ ಹಿಂದಿನ ಸಾಮರ್ಥ್ಯದಂತೆಯೇ ದುಡಿಯುವ ಹುಮ್ಮಸ್ಸಿನಲ್ಲಿರುವುದು ಸಹಜ. ಅದು ಮಾನಸಿಕ ಸ್ಥಿತಿ. ಆದರೆ ಅದಕ್ಕೆ ತಕ್ಕಂತೆ ದೇಹ ಸ್ಪಂದಿಸುವುದು ಕಷ್ಟ. ಸ್ವಾಭಾವಿಕವಾದ ದೈಹಿಕ ಸಾಮರ್ಥ್ಯ ಉಳ್ಳವರು ಕೆಲವರು ಇರುತ್ತಾರೆ. ಅವರು ಬಹುಬೇಗ ಒಗ್ಗಿಕೊಳ್ಳಬಹುದು. ಆದರೆ ಕೆಲವರಿಗೆ ಪ್ರತಿಭೆ ಇರುತ್ತದೆ. ಕಠಿಣ ಪರಿಶ್ರಮದಿಂದ ಒಂದು ಹಂತಕ್ಕೆ ತಲುಪಿರುತ್ತಾರೆ. ಅವರಿಗೆ ಮತ್ತೆ ಲಯಕ್ಕೆ ಮರಳಲು ಹೆಚ್ಚು ಸಮಯ ಬೇಕು. ಅವರು ತಮಗಿಂತಲೂ ಮುಂದೆ ಇರುವವರೊಂದಿಗೆ ತುಲನೆ ಮಾಡಿಕೊಳ್ಳುತ್ತ ಆಡಿದರೆ, ಖಿನ್ನತೆಗೆ ಒಳಗಾಗುವ ಅಪಾಯ ಇರುತ್ತದೆ. ಆದ್ದರಿಂದ ಸಹನೆಯಿಂದ ಮುಂದುವರಿಯಬೇಕು.

* ಈ ಸಮಸ್ಯೆ ಗುರುತಿಸಲು ಪರಿಹಾರ ಇದೆಯೇ?

ಆರಂಭದಲ್ಲಿಯೇ ದೈಹಿಕ ಕ್ಷಮತೆಯ ಪರೀಕ್ಷೆ ಮಾಡುವುದು ಸೂಕ್ತ. ಅದರಲ್ಲಿ ದೇಹದ ಸಾಮರ್ಥ್ಯ,  ಏರೋಬಿಕ್ಸ್‌ ಮತ್ತು ಆ್ಯಕ್ರೊಬಾಟಿಕ್ಸ್‌ ಸಾಮರ್ಥ್ಯಗಳನ್ನು ಗುರುತಿಸಬೇಕು. ಅದಕ್ಕೆ ತಕ್ಕಂತೆ ತರಬೇತಿಯನ್ನು ರೂಪಿಸಬೇಕು. ಇದು ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೊಂದು ಸಮಸ್ಯೆ ಇದೆ. ಸ್ಪರ್ಧಾತ್ಮಕ ಟೂರ್ನಿಗಳು ಯಾವಾಗ ಆರಂಭವಾಗುತ್ತವೆ ಎಂಬುದು ತಿಳಿದಿಲ್ಲ. ಆದ್ದರಿಂದ ಯಾವ ಮಟ್ಟದ ತರಬೇತಿ ನೀಡಬೇಕು ಎಂಬ ಗೊಂದಲ ಇರುತ್ತದೆ. ಆದ್ದರಿಂದ ಒಂದು ಕಾಲಾವಧಿಯನ್ನು ನಾವೇ ರೂಪಿಸಿಕೊಂಡು ಮುಂದುವರಿಯಬೇಕು.

* ಕ್ರಿಕೆಟ್‌ ಮತ್ತು ಉಳಿದ ಕ್ರೀಡೆಗಳಲ್ಲಿ ಕೆಲವು ನಿಯಮಗಳ ಬದಲಾವಣೆಗಳಾಗುವ ಸಾಧ್ಯತೆ ಇದೆ. ಅವುಗಳನ್ನು ಹೇಗೆ ನಿಭಾಯಿಸಬೇಕು?

ಈಗ ಇಂಗ್ಲಿಷ್‌ನಲ್ಲಿ  ‘ನ್ಯೂ ನಾರ್ಮಲ್‌’ ಎಂಬ ಪದ ಬಳಕೆಯಾಗುತ್ತದೆ. ಆಂದರೆ ‘ಹೊಸ ರೂಢಿ’ ಎಂದರ್ಥವಾಗುತ್ತದೆ. ಬದಲಾವಣೆಗಳಿಗೆ ಒಗ್ಗಿಕೊಂಡವರಿಗೆ ಯಶಸ್ಸು ಖಚಿತ. ಏಕೆಂದರೆ ಅನೂಚಾನವಾಗಿ ರೂಢಿಸಿಕೊಂಡ ವಿಷಯಗಳನ್ನೂ ಬಿಡಬೇಕಾಗಬಹುದು. ಅದು ನಿಜಕ್ಕೂ ಕಠಿಣ ಸವಾಲು.

ಎಂಜಲು ಬಳಕೆ ನಿಷೇಧ ರೂಢಿಸಿಕೊಳ್ಳುವುದು ಕಷ್ಟಸಾಧ್ಯ

ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಬಳಕೆ ಮಾಡುವುದನ್ನು ನಿಷೇಧಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಒಂದೊಮ್ಮೆ ನಿಷೇಧವಾದರೆ ಬೌಲರ್‌ಗಳಿಗೆ ಕಷ್ಟವಾಗಲಿದೆ. ಬೆವರು ಹಚ್ಚಲಷ್ಟೇ ಅನುಮತಿ ನೀಡಬಹುದು. ಆದರೆ, ಬಹಳಷ್ಟು ಬೌಲರ್‌ಗಳಿಗೆ ಎಂಜಲು ಹಚ್ಚುವುದು ರೂಢಿಗತವಾಗಿದೆ. ಅವರ ಕೈಗಳು ಸಹಜವಾಗಿಯೇ ಬಾಯಿಯತ್ತಲೇ ಹೋಗುತ್ತದೆ. ಆ ರೂಢಿಯನ್ನು ನಿಯಂತ್ರಿಸಿಕೊಳ್ಳುವುದು ಕೂಡ ಕಠಿಣ ಸವಾಲಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು