ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India vs England 3rd T20I ಭರವಸೆಯ ಭಾರತಕ್ಕೆ ಗೆಲುವಿನ ನಿರೀಕ್ಷೆ

ಇಂಗ್ಲೆಂಡ್ ಎದುರಿನ ಟಿ20 ಸರಣಿಯ ಮೂರನೇ ಪಂದ್ಯ: ಪಂತ್‌, ಪಾಂಡ್ಯ ಮೇಲೆ ನಿರೀಕ್ಷೆ
Last Updated 15 ಮಾರ್ಚ್ 2021, 11:49 IST
ಅಕ್ಷರ ಗಾತ್ರ

ಅಹಮದಾಬಾದ್:ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿದರೂ ನಂತರ ಪುಟಿದೆದ್ದು ಗೆಲುವಿನ ಸೌಧ ಕಟ್ಟಿದ ಭಾರತ ತಂಡ ಇಂಗ್ಲೆಂಡ್ ಎದುರಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವೈಭವ ಮರುಕಳಿಸುವ ನಿರೀಕ್ಷೆ ಇದೆ.

ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿದ್ದ ಭಾರತ ಎಂಟು ವಿಕೆಟ್‌ಗಳಿಂದ ಸೋತಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿ ಏಳು ವಿಕೆಟ್‌ಗಳ ಜಯ ಸಾಧಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ್ದ ತಂಡಕ್ಕೆ ಪದಾರ್ಪಣೆಯಲ್ಲೇ ಮಿಂಚಿದ್ದ ಇಶಾನ್ ಕಿಶನ್ ಸುಲಭ ಗೆಲುವ ಗಳಿಸಿಕೊಟ್ಟಿದ್ದರು. ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿರುವುದರಿಂದ ತಂಡ ನಿಟ್ಟುಸಿರು ಬಿಡುವಂತಾಗಿದೆ.

ಖಾತೆ ತೆರೆಯುವ ಮೊದಲೇ ಕೆ.ಎಲ್‌.ರಾಹುಲ್ ಅವರ ವಿಕೆಟ್ ಕಳೆದುಕೊಂಡರೂ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟದ ಮೂಲಕ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದ್ದರು. ನಿರಾಯಾಸವಾಗಿ ಬ್ಯಾಟ್ ಬೀಸಿದ ಇಶಾನ್ 32 ಎಸೆತಗಳಲ್ಲಿ 56 ರನ್ ಕಲೆ ಹಾಕಿದ್ದರು. ವಿರಾಟ್ ಕೊಹ್ಲಿ, ಅಜೇಯವಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಮೊದಲ ಪಂದ್ಯದಲ್ಲಿ ಧಾರಾಳತನ ಮೆರೆದಿದ್ದ ಬೌಲರ್‌ಗಳು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. 164 ರನ್‌ಗಳಿಗೆ ತಂಡವನ್ನು ಕಟ್ಟಿಹಾಕಿದ್ದರು. ಅದೇ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಲು ಬೌಲರ್‌ಗಳು ಪ್ರಯತ್ನಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿರುವುದು ತಂಡದ ಭರವಸೆಯನ್ನು ಇಮ್ಮಡಿಗೊಳಿಸಿದೆ.

ಶ್ರೇಯಸ್ ಅಯ್ಯರ್ ಬದಲಿಗೆ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ರಿಷಭ್ ಪಂತ್ ಬ್ಯಾಟಿಂಗ್ ಇನ್ನಷ್ಟು ಕಳೆಗಟ್ಟಬೇಕಾಗಿದೆ. ಭರ್ಜರಿ ಹೊಡೆತಗಳ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಪಂತ್ ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ಕಂಡಿದ್ದಾರೆ. ಆದರೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.

ಎರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಇಶಾನ್ ಕಿಶನ್ ಮಿಂಚಿನ ಬ್ಯಾಟಿಂಗ್ ಮಾಡಿರುವುದರಿಂದ ರೋಹಿತ್ ಶರ್ಮಾ ಅವರಿಗಾಗಿ ಕೆ.ಎಲ್‌.ರಾಹುಲ್ ಬೆಂಚು ಕಾಯಬೇಕಾದೀತು. ಅವರು ಹಿಂದಿನ ಎರಡೂ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವುದು ಭಾರತ ತಂಡದ ಪ್ರಮುಖ ಗುರಿಯಾಗಿರುವುದರಿಂದ ಹೆಚ್ಚಿನ ಪ್ರಯೋಗಗಳಿಗೆ ಕೈಹಾಕಲು ತಂಡದ ಆಡಳಿತ ಮುಂದಾಗಲಾರದು ಎಂದು ನಿರೀಕ್ಷಿಸಲಾಗಿದೆ.

ಇಂಗ್ಲೆಂಡ್ ಪರವಾಗಿ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಜೇಸನ್ ರಾಯ್ ಪುಟಿದೆದ್ದರೆ ಭಾರತಕ್ಕೆ ಸ್ವಲ್ಪ ಸಂಕಷ್ಟವಾಗಲಿದೆ. ಸ್ಪಿನ್ನರ್‌ಗಳಿಗೆ ಪಿಚ್ ಅನುಕೂಲ ಆಗುವ ನಿರೀಕ್ಷೆ ಇರುವುದರಿಂದ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಅಂಬೋಣ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್‌.ರಾಹುಲ್‌, ಶಿಖರ್ ಧವನ್, ಶ್ರೇಯಸ್ ಆಯ್ಯರ್‌, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌ (ವಿಕೆಟ್ ಕೀಪರ್‌), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್‌, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್‌, ವಾಷಿಂಗ್ಟನ್‌ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ದೀಪಕ್ ಚಾಹರ್‌, ರಾಹುಲ್ ತೇವಟಿಯಾ, ಇಶಾನ್ ಕಿಶನ್‌.

ಇಂಗ್ಲೆಂಡ್‌: ಏಯನ್ ಮಾರ್ಗನ್‌ (ನಾಯಕ), ಜೋಸ್ ಬಟ್ಲರ್, ಜೇಸನ್ ರಾಯ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌, ಮೋಯಿನ್ ಅಲಿ, ಆದಿಲ್ ರಶೀದ್‌, ರೀಸಿ ಟೋಪ್ಲಿ, ಕ್ರಿಸ್ ಜೋರ್ಡಾನ್‌, ಮಾರ್ಕ್ ವುಡ್‌, ಸ್ಯಾಮ್ ಕರನ್‌, ಟಾಮ್ ಕರನ್‌, ಸ್ಯಾಮ್ ಬಿಲಿಂಗ್ಸ್‌, ಜಾನಿ ಬೆಸ್ಟೊ, ಜೊಫ್ರಾ ಆರ್ಚರ್‌.

ಆರಂಭ: ಸಂಜೆ 7.00

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT