ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ಗೆ ಕೊರೊನಾ ಭೀತಿ | ಚುಟುಕು ಕ್ರಿಕೆಟ್ ಟೂರ್ನಿಯ ಭವಿಷ್ಯ ಶನಿವಾರ ನಿರ್ಧಾರ

Last Updated 12 ಮಾರ್ಚ್ 2020, 13:36 IST
ಅಕ್ಷರ ಗಾತ್ರ
ADVERTISEMENT
""
"2019 ಟೂರ್ನಿ ವೇಳೆ ಆರ್‌ಸಿಬಿ ಆಟಗಾರರು"
"2019 ಟೂರ್ನಿ ವೇಳೆ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಸುರೇಶ್‌ ರೈನಾ ತಮ್ಮ ಮಕ್ಕಳೊಂದಿಗೆ ಕ್ರೀಡಾಂಗಣದಲ್ಲಿ ಆಟವಾಡಿದರು"

ವಿಶ್ವದಾದ್ಯಂತ ಸುಮಾರು 4 ಸಾವಿರ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ (ಕೋವಿಡ್‌–19) ಭೀತಿಯಿಂದಾಗಿ ಈಗಾಗಲೇ ಹಲವು ಪ್ರಮುಖ ಕ್ರೀಡಾಕೂಟಗಳನ್ನು ರದ್ದುಪಡಿಸಲಾಗಿದೆ. ಭಾರತದಲ್ಲಿ ನಡೆಯುವ ಪ್ರಮುಖ ಕ್ರಿಕೆಟ್‌ ಟೂರ್ನಿ ಎನಿಸಿರುವ ಐಪಿಎಲ್‌ ಆಯೋಜನೆಗೂ ಇದರಿಂದ ಅಡ್ಡಿಯಾಗುವ ಸಾಧ್ಯತೆಗಳಿವೆ. ದೇಶದಲ್ಲಿ ಸದ್ಯ ಸುಮಾರು 73 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಐಪಿಎಲ್‌–2020 ನಡೆಯುವ ಬಗ್ಗೆ ಗೊಂದಲಗಳು ಮೂಡಿವೆ.

ಈ ಸಂಬಂಧಮಾರ್ಚ್‌ 14ರಂದು (ಶನಿವಾರ) ಮುಂಬೈನಲ್ಲಿ ನಡೆಯುವ ಐಪಿಎಲ್‌ ಆಡಳಿತ ಮಂಡಳಿ ಸಭೆಯು, ಚುಟುಕು ಕ್ರಿಕೆಟ್‌ ಟೂರ್ನಿಯ ಹಣೆಬರಹ ನಿರ್ಧರಿಸಲಿದೆ.

ಸಭೆ ಬಳಿಕ ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೆ ಬಂದರೆ, ಕ್ಯಾಲೆಂಡರ್‌ ವರ್ಷದಲ್ಲಿ 6–7 ವಾರಗಳನ್ನುಐಪಿಲ್‌ಗಾಗಿ ಮೀಸಲಿಡುವುದು ಸುಲಭವಲ್ಲ ಎಂದು ಕ್ರಿಕೆಟ್‌ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಒಂದುವೇಳೆ ಟೂರ್ನಿ ರದ್ದಾದರೆ, ಐಪಿಎಲ್‌–2020 ಪ್ರಸಾರ ಹಕ್ಕು ಪಡೆದಿರುವ ಸ್ಟಾರ್‌ ನೆಟ್‌ವರ್ಕ್‌ ಸೇರಿದಂತೆ ಬೇರೆ ಮಾಧ್ಯಮಗಳು ಮತ್ತು ಪ್ರಾಯೋಜಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ ಎಂದು ಮನಿ ಕಂಟ್ರೋಲ್‌ ಸುದ್ದಿ ತಾಣ ವರದಿಮಾಡಿದೆ.

‘ಈ ಟೂರ್ನಿಗೆ ಸದ್ಯ ಸುಮಾರು ₹ 50 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯವಿದೆ’ ಎಂದು ತಿಳಿಸಿರುವಮೊಗಾಯ್‌ ಮೀಡಿಯಾ ನೆಟ್‌ವರ್ಕ್ಸ್‌ನ ಮುಖ್ಯಸ್ಥ ಸಂದೀಪ್‌ ಗೋಯಲ್, ‘ಐಪಿಎಲ್‌ ಟೂರ್ನಿ ಮೇಲೆ ಬಿಸಿಸಿಐ ಕೂಡ ಸಾಕಷ್ಟು ಹಣ ವ್ಯಯಿಸಿದೆ’ ಎಂದಿದ್ದಾರೆ.

‘ಬಿಸಿಸಿಐ, ಪ್ರಸಾರಕರಿಂದ ಈಗಾಗಲೇ ದೊಡ್ಡ ಮೊತ್ತದ ಹಣ ಜೇಬಿಗಿಳಿಸಿದೆ.ಪ್ರಾಂಚೈಸ್‌ ಶುಲ್ಕ, ಪ್ರಾಯೋಜಕತ್ವ ಮೂಲದಿಂದಲೂ ಸಾಕಷ್ಟು ಹಣ ಹರಿದುಬರಲಿದೆ’ ಎಂದೂ ಅವರು ಹೇಳಿದ್ದಾರೆ. ಮುಂದುವರಿದು, ‘ಸ್ಟಾರ್‌ ನೆಟ್‌ವರ್ಕ್‌, ಐಪಿಎಲ್‌ನ ಐದು ವರ್ಷಗಳ ಪ್ರಸಾರದ ಹಕ್ಕು ಪಡೆಯಲು ಬರೋಬ್ಬರಿ ₹ 16 ಸಾವಿರ ಕೋಟಿ ನೀಡಿದೆ. ಈ ಮೊತ್ತವನ್ನು ಭರಿಸಿಕೊಳ್ಳಲು ಅದು, ಪ್ರತಿ ವರ್ಷಕನಿಷ್ಠ ಶೇ.20ರಷ್ಡಾದರೂಸಂಪಾದನೆ ಮಾಡಿಕೊಳ್ಳಬೇಕಿದೆ’ ಎಂದು ಅಂದಾಜಿಸಿದ್ದಾರೆ.

‘ಪ್ರಾಂಚೈಸ್‌ಗಳೂ ಆಟಗಾರರನ್ನು ಖರೀದಿಸಲು, ಸಿಬ್ಬಂದಿ ಮತ್ತು ಇನ್ನಿತರ ಸೌಲಭ್ಯಗಳ ಸಲುವಾಗಿ ₹ 300–500 ಕೋಟಿ ವ್ಯಯಿಸಿರುತ್ತವೆ. ಅದರಲ್ಲಿ ₹ 100–300 ಕೋಟಿ ಹಣವು ಪ್ರಾಯೋಜಿಕರಿಂದ ಬರಬಹುದಾದರೂ, ಉಳಿದ ಹಣ ಬರುವುದು ಟಿಕೆಟ್‌ ಮಾರಾಟದಿಂದಲೇ.ಹಿಂದಿನ ಅಂಕಿ–ಅಂಶಗಳ ಪ್ರಕಾರ ಸುಮಾರು ₹ 400 ಕೋಟಿ ಆದಾಯ ಟಿಕೆಟ್‌ ಮಾರಾಟದಿಂದ ಬಂದಿದೆ. ಜೊತೆಗೆ ಸುಮಾರು ₹ 50 ಕೋಟಿ ಹಣ ಫ್ಯಾನ್‌ ಪಾರ್ಕ್‌ಗಳಿಂದ ಹರಿದುಬಂದಿದೆ’ ಎಂದೂ ಸಂದೀಪ್‌ ಗೋಯಲ್‌ ತಿಳಿಸಿದ್ದಾರೆ.

2019 ಟೂರ್ನಿ ವೇಳೆ ಆರ್‌ಸಿಬಿ ಆಟಗಾರರು

ಡಿಸಿಎಂಎನ್ ಇಂಡಿಯಾ ಮಾಧ್ಯಮ ಸಂಸ್ಥೆಯ ನಿರ್ದೇಶಕ ಸುಧೀರ್‌ ಕುಮಾರ್‌ ಅವರು, ‘ಐಪಿಎಲ್‌ ನಿಗದಿಯಂತೆ ನಡೆದರೆ, ಮೂಲ ಆದಾಯದಲ್ಲಿ ಕೇವಲ ಶೇ. 5ರಿಂದ 10 ರಷ್ಟು ಕುಸಿತ ಉಂಟಾಗಲುವೈರಸ್‌ ಕಾರಣವಾಗಬಹುದು’ ಎಂದಿದ್ದಾರೆ.

ಸುಧೀರ್‌ ಕುಮಾರ್‌ ಮಾತನ್ನೇ ಒತ್ತಿಹೇಳಿರುವ ಗೋಯಲ್‌, ‘ಜಾಹೀರಾತುದಾರರು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಐಪಿಎಲ್‌ ವೇಳೆಸುಮಾರು 200 ಬ್ರ್ಯಾಂಡ್‌ಗಳು ಜಾಹೀರಾತು ನೀಡಲಿವೆ. ಈ ಆವೃತ್ತಿಗೆ ಲಭ್ಯವಿರುವ ಸುಮಾರು ಶೇ. 70 ರಿಂದ 80 ರಷ್ಟು ಜಾಹೀರಾತು ಸ್ಪಾಟ್‌ಗಳು ಬಿಕರಿಯಾಗಿವೆ’ ಎಂದಿದ್ದಾರೆ.

‘ಯಾವುದೇ ಆತಂಕವಿಲ್ಲದೆ ಕ್ರೀಡಾಂಗಣಗಳು ಭರ್ತಿಯಾಗಿ ಪಂದ್ಯಗಳು ನಡೆದರೆ, ಪ್ರಾಯೋಜಕರು ಮತ್ತು ಜಾಹೀರಾತುದಾರರ ಉತ್ಸಾಹ ಇಮ್ಮಡಿಯಾಗುತ್ತದೆ. ಇನ್ನೂ ಹಲವು ಬ್ರಾಂಡ್‌ಗಳಿಂದ ಬೇಡಿಕೆ ಬರಲಿದೆ. ಒಂದುವೇಳೆ ಹಾಗಾಗದೆ ಕೊರನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾದರೆ, ಟೂರ್ನಿಯನ್ನು ರದ್ದುಪಡಿಸುವುದು ಅಥವಾ ಪಂದ್ಯಗಳನ್ನು ಮುಂದೂಡಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರದ್ದುಪಡಿಸುವುದು ಅಥವಾ ಮುಂದೂಡುವುದನ್ನು ಬಿಟ್ಟು ಇನ್ನೊಂದು ಸಾಧ್ಯತೆಯ ಬಗ್ಗೆಯೂ ಗೋಯಲ್‌ ಹೇಳಿದ್ದು, ಐಪಿಎಲ್‌–2020ಯನ್ನು ದೃಶ್ಯ ಮತ್ತು ಡಿಜಿಟಲ್‌ ಟೂರ್ನಿಯನ್ನಾಗಿಸುವ ಅವಕಾಶವಿದೆ ಎಂದಿದ್ದಾರೆ.

2019ರ ಐಪಿಎಲ್‌ ಆವೃತ್ತಿಯನ್ನು ಬರೋಬ್ಬರಿ 49.2 ಕೋಟಿ ಜನರು ಟಿವಿಯಲ್ಲಿ ನೋಡಿದ್ದಾರೆ. ಸ್ಟಾರ್‌ ವಾಹಿನಿಯ ಡಿಜಿಟಲ್‌ ವೇದಿಕೆಯಾಗಿರುವ ಹಾಟ್‌ ಸ್ಟಾರ್‌ ಮೂಲಕ ಸುಮಾರು 30 ಕೋಟಿ ಜನರು ಐಪಿಎಲ್‌ ವೀಕ್ಷಿಸಿದ್ದಾರೆ.

‘ವರ್ಷದಿಂದ ವರ್ಷಕ್ಕೆ ಐಪಿಎಲ್‌ ವೀಕ್ಷಕರ ಸಂಖ್ಯೆ ಏರಿಕೆಯಾಗಿದೆ. ಈ ಕ್ರೀಡೆಯ ಬಗ್ಗೆಆಸಕ್ತಿ ವೃದ್ಧಿಸಿರುವುದು ಮತ್ತು ಮಹಿಳಾ ವೀಕ್ಷಕರ ಸಂಖ್ಯೆ ಹೆಚ್ಚಾಗಿರುವುದು ಅದಕ್ಕೆ ಕಾರಣ. ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುವುದು, ಅದರಲ್ಲೂ ದಕ್ಷಿಣ ಭಾರತದ ಭಾಷೆಗಳಲ್ಲಿ ಇದು ಲಭ್ಯವಿರುವುದು ನೋಡುಗರ ಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣ’ ಎಂದು ಅವರು ತಿಳಿಸಿದ್ದಾರೆ. ಈಮಾತನ್ನು ಸಮರ್ಥಿಸಿಕೊಂಡಿರುವಸುಧೀರ್‌ ಕುಮಾರ್‌, ‘ಅಂದುಕೊಂಡಂತೆ ಈ ಟೂರ್ನಿ ನಡೆದರೆ, ಕಳೆದ ಬಾರಿಗಿಂತಲೂ ಹೆಚ್ಚು ಜನರು ಐಪಿಎಲ್‌ ವೀಕ್ಷಿಸಲಿದ್ದಾರೆ’ ಎಂದಿದ್ದಾರೆ.

ಸ್ಟಾರ್ ವಾಹಿನಿಯು, ಲೀಗ್‌ ಹಂತದ ಕೆಲವು ಪಂದ್ಯಗಳನ್ನು ಸ್ಟಾರ್‌ ಗೋಲ್ಡ್‌ ಮತ್ತು ಸ್ಟಾರ್‌ ಪ್ಲಸ್‌ನಲ್ಲಿಯೂ ಪ್ರಸಾರ ಮಾಡುವ ಯೋಜನೆಯಲ್ಲಿದೆ. ಆ ಮೂಲಕ ಹೆಚ್ಚು ವೀಕ್ಷಕರನ್ನು ತಲುಪುವಉದ್ದೇಶ ಅದರದ್ದು.

2019 ಟೂರ್ನಿ ವೇಳೆ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಸುರೇಶ್‌ ರೈನಾ ತಮ್ಮ ಮಕ್ಕಳೊಂದಿಗೆ ಕ್ರೀಡಾಂಗಣದಲ್ಲಿ ಆಟವಾಡಿದರು

ಅಂದಹಾಗೆಈ ಬಾರಿಯ ಟೂರ್ನಿಯು 13ನೇ ಆವೃತ್ತಿಯಾಗಿದ್ದು,ಇದೇ ತಿಂಗಳು 29ರಿಂದ ಮೇ 17ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಇದುವರೆಗೆ ಮುಂಬೈ ಇಂಡಿಯನ್ಸ್‌ 4 ಬಾರಿ, ಚೆನ್ನೈ ಸೂಪರ್‌ ಕಿಂಗ್ಸ್‌ 3 ಸಲ, ಕೋಲ್ಕತ್ತ ನೈಟ್‌ ರೈಡರ್ಸ್‌ 2 ಬಾರಿ ಮತ್ತು ರಾಜಸ್ಥಾನ ರಾಯಲ್ಸ್‌, ಡೆಕ್ಕನ್‌ ಚಾರ್ಚರ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ತಲಾ ಒಮ್ಮೊಮ್ಮೆ ಪ್ರಶಸ್ತಿ ಜಯಿಸಿವೆ.

ಕ್ರೀಡಾ ವಲಯದ ಪ್ರತಿಷ್ಠಿತ ಕೂಟ ಎನಿಸಿರುವ ಒಲಿಂಪಿಕ್ಸ್‌ಗೂ ಕೊರೊನಾ ಭೀತಿ ಆವರಿಸಿದೆ. ಇದೇ ವರ್ಷ ಜುಲೈನಲ್ಲಿ ಜಪಾನ್‌ ರಾಜಧಾನಿ ಟೊಕಿಯೊದಲ್ಲಿ ನಡೆಸಲು ಉದ್ದೇಶಿಸಲಾಗಿದೆಯಾದರೂ, ಸೊಂಕು ಭೀತಿಯಿಂದಾಗಿ ನಿಗದಿಯಂತೆ ಆಯೋಜನೆಯಾಗುವುದು ಅನುಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT