ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ರದ್ದಾದರೆ ಭಾರತೀಯ ಕ್ರಿಕೆಟ್‌ಗೆ ₹4000 ಕೋಟಿ ನಷ್ಟ

ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿಕೆ: ವೇತನ ಕಡಿತದ ಆಲೋಚನೆ ಸದ್ಯಕ್ಕಿಲ್ಲ
Last Updated 12 ಮೇ 2020, 16:03 IST
ಅಕ್ಷರ ಗಾತ್ರ

ನವದೆಹಲಿ: ‘ಒಂದೊಮ್ಮೆ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯು ರದ್ದಾದರೆ ₹4,000 ಕೋಟಿಗಿಂತಲೂ ಅಧಿಕ ನಷ್ಟವಾಗಲಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್ ಸಿಂಗ್‌‌ ಧುಮಾಲ್‌ ತಿಳಿಸಿದ್ದಾರೆ.

ಬಿಸಿಸಿಐಖಜಾಂಚಿ ಅರುಣ್ ಸಿಂಗ್‌‌ ಧುಮಾಲ್

ಐಪಿಎಲ್‌ 12ನೇ ಆವೃತ್ತಿಗೆ ಮಾರ್ಚ್‌ 29ರಂದು ಚಾಲನೆ ನೀಡಬೇಕಿತ್ತು. ಕೋವಿಡ್‌–19 ಪಿಡುಗಿನ ಕಾರಣ ಏಪ್ರಿಲ್‌ 15ಕ್ಕೆ ಲೀಗ್‌ ಮುಂದೂಡಲಾಗಿತ್ತು. ಕೇಂದ್ರ ಸರ್ಕಾರವು ಲಾಕ್‌ಡೌನ್‌ ವಿಸ್ತರಿಸಿದ್ದರಿಂದ ಬಿಸಿಸಿಐ, ಲೀಗ್‌ ಅನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿದೆ.

ಕೊರೊನಾ ವೈರಾಣುವಿನ ಉಪಟಳ ಹೆಚ್ಚುತ್ತಲೇ ಇರುವುದರಿಂದ ‘ಮಿಲಿಯನ್‌ ಡಾಲರ್‌ ಬೇಬಿ’ ಎಂದೇ ಕರೆಯಲ್ಪಡುವ ಐಪಿಎಲ್‌ ಭವಿಷ್ಯ ಈಗ ಡೋಲಾಯಮಾನವಾಗಿದೆ.

‘ಈ ಬಾರಿ ಐಪಿಎಲ್‌ ಆಯೋಜಿಸುವುದರ ಕುರಿತು ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಕೊರೊನಾ ಬಿಕ್ಕಟ್ಟಿನಿಂದಾಗಿ ಎಷ್ಟು ಪಂದ್ಯಗಳು ರದ್ದಾಗಲಿವೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕ ನಂತರವಷ್ಟೇ ನಮಗಾಗುವ ನಷ್ಟವನ್ನು ನಿಖರವಾಗಿ ಹೇಳಲು ಸಾಧ್ಯ’ ಎಂದಿದ್ದಾರೆ.

ಹೋದ ವರ್ಷ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ₹51 ಸಾವಿರ ಕೋಟಿ ಇತ್ತು ಎಂದುಡಫ್‌ ಆ್ಯಂಡ್‌ ಪೆಲ್ಪ್ಸ್‌ ಫೈನಾನ್ಶಿಯಲ್‌ ಕನ್ಸಲ್ಟೆನ್ಸಿಯು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಸ್ಟಾರ್‌ ಸ್ಪೋರ್ಟ್ಸ್‌ ಸಮೂಹವು ₹1,700 ಕೋಟಿಗೂ ಅಧಿಕ ಮೊತ್ತ ನೀಡಿ ಐದು ವರ್ಷಗಳ ಅವಧಿಯ ಟಿ.ವಿ.ಪ್ರಸಾರದ ಹಕ್ಕನ್ನು ಖರೀದಿಸಿತ್ತು. ಈ ಬಾರಿಯ ಲೀಗ್‌ನಿಂದಲೇ ಸ್ಟಾರ್‌ ಸ್ಪೋರ್ಟ್ಸ್‌ ಬೊಕ್ಕಸಕ್ಕೆ‌ ಸುಮಾರು ₹3,000 ಕೋಟಿ ಆದಾಯ ಹರಿದು ಬರುವ ನಿರೀಕ್ಷೆ ಇತ್ತು.

ಕೊರೊನಾ ಬಿಕ್ಕಟ್ಟಿನಿಂದಾಗಿ ಹಲವು ಕ್ರೀಡಾ ಮಂಡಳಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಪಾರಾಗುವ ಸಲುವಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ), ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಹಾಗೂ ಲಾ ಲಿಗಾ ಫುಟ್‌ಬಾಲ್‌ ಸಂಸ್ಥೆಗಳು ಈಗಾಗಲೇ ಆಟಗಾರರು, ನೆರವು ಸಿಬ್ಬಂದಿಗಳ ವೇತನ ಕಡಿತಕ್ಕೆ ಮುಂದಾಗಿವೆ.

ಈ ಕುರಿತು ಮಾತನಾಡಿದ ಧುಮಾಲ್‌ ‘ವೇತನ ಕಡಿತದ ಆಲೋಚನೆ ಸದ್ಯಕ್ಕಂತೂ ನಮ್ಮ ಮನದಲ್ಲಿ ಮೂಡಿಲ್ಲ. ನಷ್ಟದ ಕುರಿತ ಸ್ಪಷ್ಟ ಚಿತ್ರಣ ಸಿಕ್ಕ ನಂತರ ಮುಂದೇನು ಮಾಡಬೇಕೆಂಬುದನ್ನು ಯೋಚಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಜೂನ್‌ ವೇಳೆಗೆ ಕೊರೊನಾ ಬಿಕ್ಕಟ್ಟು ಬಗೆಹರಿದರೆ ನಮ್ಮ ತಂಡದವರು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದರೆ ಪ್ರವಾಸ ರದ್ದು ಮಾಡುವುದು ಅನಿವಾರ್ಯ. ಆಟಗಾರರು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಆದ್ಯತೆ’ ಎಂದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಸರಣಿಗಳು ನಿಗದಿಯಂತೆಯೇ ಈ ವರ್ಷಾಂತ್ಯದಲ್ಲಿ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿವಿರಾಟ್ ಕೊಹ್ಲಿ ಬಳಗವುಆಸ್ಟ್ರೇಲಿಯಾದಲ್ಲಿ ಎರಡು ವಾರಗಳ ಪ್ರತ್ಯೇಕವಾಸಕ್ಕೆ ಸಿದ್ಧವಾಗಿದೆ ಎಂದು ಕೆಲ ದಿನಗಳ ಹಿಂದೆ ಧುಮಾಲ್‌ ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಅವರು‌ ‘ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್‌ ರದ್ದಾದರೆ ಮಾತ್ರ ನಮ್ಮ ತಂಡದವರು ಆಸ್ಟ್ರೇಲಿಯಾದಲ್ಲಿ ಎರಡು ವಾರ ಪ್ರತ್ಯೇಕವಾಸದಲ್ಲಿರಲಿದ್ದಾರೆ. ವಿಶ್ವಕಪ್‌ ನಿಗದಿಯಂತೆ ನಡೆದರೆ ಪ್ರತ್ಯೇಕ ವಾಸದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಕ್ರಿಕೆಟ್‌ ಆಸ್ಟ್ರೇಲಿಯಾವು ಈಗ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಅಲ್ಲಿಯ ಸರ್ಕಾರವು ಈಗಾಗಲೇ ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರಿದೆ. ಹೀಗಾಗಿ ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT