ಗುರುವಾರ , ಏಪ್ರಿಲ್ 2, 2020
19 °C

ಕೋವಿಡ್–19 ಪರಿಣಾಮ | ಪರಿಸ್ಥಿತಿ ಸುಧಾರಿಸಲು ಎಷ್ಟು ಸಮಯಬೇಕು ಹೇಳಲಾಗದು: ಫಿಂಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ಕೊರೊನಾ ವೈರಸ್‌ ಭೀತಿಯಿಂದ ಉಂಟಾಗಿರುವ ಹಿನ್ನಡೆಯು ಕಾಲ ಕಳೆದಂತೆ ಸರಿಹೋಗಲಿದೆ. ಆದರೆ, ಅದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಹೇಳಲಾಗದು ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಆ್ಯರನ್‌ ಫಿಂಚ್‌ ಹೇಳಿದ್ದಾರೆ.

ಪ್ರಪಂಚದಾದ್ಯಂತ ಇದುವರೆಗೆ ಸುಮಾರು 2.2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8,900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಂತಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯನ್ನು ಏಪ್ರಿಲ್ 15ವರೆಗೆ ಮುಂದೂಡಲಾಗಿರುವ ಕುರಿತು ಅವರು, ಎಸ್‌ಇಎನ್ ರೇಡಿಯೋಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಐಪಿಎಲ್ ಮತ್ತು ತವರಿನಲ್ಲಿ ನಡೆಯಬೇಕಿದ್ದ ಸರಣಿಗಳಿಗೆ ಈಗ ಅಡ್ಡಿಯಾಗಿದೆ. ಆದಾಯ ಹಂಚಿಕೆ ಪದ್ಧತಿಯಡಿಯಲ್ಲಿ ಭಾಗಿಯಾಗಿರುವ ತಂಡಗಳು ಇಂತಹ ಸಂದರ್ಭದಲ್ಲಿ ಆರ್ಥಿಕ ಹಿನ್ನಡೆ ಅನುಭವಿಸುತ್ತವೆ. ನಾವೆಲ್ಲರೂ ಇದರ ಪರಿಣಾಮವನ್ನು ಅನುಭವಿಸಲೇಬೇಕು’ ಎಂದಿದ್ದಾರೆ.

‘ಒಂದೊಮ್ಮೆ ಪರಿಸ್ಥಿತಿ ಸುಧಾರಿಸಿದರೆ, ಕಾಲಕ್ರಮೇಣ ಮತ್ತೆ ಎಲ್ಲವೂ ಸುಸ್ಥಿತಿಗೆ ಬರುತ್ತದೆ. ಆದರೆ ಅದಕ್ಕೆ ಎಷ್ಟು ಕಾಲ ಬೇಕು ಮತ್ತು ಯಾವಾಗ ಆಗುತ್ತದೆ ಎಂದು ಹೇಳುವುದು ಕಠಿಣ’ ಎಂದು ಫಿಂಚ್ ಹೇಳಿದ್ದಾರೆ.

ಮಾರ್ಚ್‌ 29ರಿಂದ ಯೋಜಿಸಲಾಗಿದ್ದ ಈ ಬಾರಿಯ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಫಿಂಚ್, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿ  ಆಟಗಾರರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ.  ಆದ್ದರಿಂದ ಅವರು ಭಾರತಕ್ಕೆ ಬಂದಿಲ್ಲ.

‘ಇಂತಹ ಸಂದರ್ಭವನ್ನು ಹಿಂದೆಂದೂ ಅನುಭವಿಸಿರಲಿಲ್ಲ. ಪ್ರವಾಸ ನಿರ್ಬಂಧದ ಆದೇಶವು ಇನ್ನೂ ಎರಡು ಅಥವಾ ಮೂರು ವಾರಗಳವರೆಗೆ ಜಾರಿಯಲ್ಲಿದ್ದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಯೋಜನೆ ರೂಪಿಸಿಕೊಳ್ಳುವುದು ಕಷ್ಟ. ಆದರೆ, ನಾವು ಮತ್ತು ನಮ್ಮ ಸುತ್ತ ಇರುವವರೆಲ್ಲರೂ ಸುರಕ್ಷಿತವಾಗಿ ಬಾಳುವಂತಹ ವಾತಾವರಣ ಇರುವಂತೆ ನೋಡಿಕೊಳ್ಳುವುದು ಅವಶ್ಯಕ. ಅದಕ್ಕಾಗಿ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ವೈರಸ್ ಹರಡುವುದನ್ನು ತಡೆಯುವುದೊಂದೇ ಸದ್ಯದ ಗುರಿ’ ಎಂದಿದ್ದಾರೆ.

ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮಿನ್ಸ್‌ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಅತಿ ಹಚ್ಚಿನ ಬೆಲೆಗೆ ಮಾರಾಟವಾಗಿದ್ದರು. ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್, ರಾಜಸ್ಥಾನದ ರಾಯಲ್ಸ್‌ ತಂಡದ ಮಾರ್ಗದರ್ಶಕ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್, ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್‌ ಅವರು ಐಪಿಎಲ್ ಒಪ್ಪಂದದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು