ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ವೇಗಿಯ ವಯಸ್ಸು 2018ರಲ್ಲಿ 17, 2019ರಲ್ಲಿ 16!: ಟ್ವಿಟರ್‌ನಲ್ಲಿ ವ್ಯಂಗ್ಯ

Last Updated 25 ನವೆಂಬರ್ 2019, 8:52 IST
ಅಕ್ಷರ ಗಾತ್ರ

ಪಾಕಿಸ್ತಾನ ತಂಡ ಕ್ರಿಕೆಟ್‌ ಜಗತ್ತಿಗೆ ವಿಶ್ವವಿಖ್ಯಾತ ವೇಗದ ಬೌಲರ್‌ಗಳನ್ನು ಪರಿಚಯಿಸಿದೆ. ಈ ತಂಡದಲ್ಲಿ ಆಡಿದ್ದ ಶೊಯಬ್‌ ಅಕ್ತರ್‌, ವಾಕರ್‌ ಯೂನಿಸ್‌, ವಾಸಿಂ ಅಕ್ರಂ ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲ ತಮ್ಮ ವೇಗದ ಮೂಲಕ ಖ್ಯಾತಿ ಹೊಂದಿದ್ದವರು. ಈ ಪಟ್ಟಿಗೆ ಇದೀಗ ಹೊಸ ಸೇರ್ಪಡೆ ನಸೀಂ ಶಾ. ಈತನ ವಯಸ್ಸು ಕೇವಲ 16.

145–150ರ ಆಸುಪಾಸಿನಲ್ಲಿ ಬೌಲಿಂಗ್‌ ಮಾಡುವ ಶಾ, ಕಳೆದ ವಾರ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಟೆಸ್ಟ್‌ ಕ್ಯಾಪ್‌ ಸ್ವೀಕಾರ ವೇಳೆ ಕಣ್ಣೀರು ಹಾಕಿದ್ದ ಈತನ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಈ ಪಂದ್ಯದಲ್ಲಿ ಶಾ ಪಡೆದದ್ದು ಒಂದು ವಿಕೆಟ್‌.

ಆದರೆ, ಇದೀಗ ಶಾ ವಯಸ್ಸಿನ ಬಗ್ಗೆ ಕ್ರಿಕೆಟ್‌ ಲೋಕದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮೊಹಮದ್‌ ಕೈಫ್‌ ಅವರು,ಪಾಕಿಸ್ತಾನ ಪತ್ರಕರ್ತ ಸಾಜ್‌ ಸಾದಿಕ್‌ 2018ರಲ್ಲಿ ಮಾಡಿದ್ದ ಟ್ವೀಟ್‌ವೊಂದನ್ನು ಉಲ್ಲೇಖಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾದಿಕ್‌ 2018ರಲ್ಲಿ ನಸೀಂ ವಯಸ್ಸನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದರು. ಅದರಲ್ಲಿ, ‘ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಆಡಲು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವ 17 ವರ್ಷದ ವೇಗದ ಬೌಲರ್‌ ನಸೀಂ ಶಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅವರು ತರಬೇತಿಯಿಂದ ಹಿಂದೆ ಸರಿದಿದ್ದಾರೆ. ಪಿಎಸ್‌ಎಲ್‌ ನಾಲ್ಕನೇ ಆವೃತ್ತಿ ವೇಳೆಗೆ ಅವರು ಸುಧಾರಿಸುವ ನಿರೀಕ್ಷೆ ಇದೆ’ ಬರೆಯಲಾಗಿತ್ತು.

ಈ ಟ್ವೀಟ್‌ ಅನ್ನು ಉಲ್ಲೇಖಿಸಿರುವ ಕೈಫ್‌,‘16 ವರ್ಷ, ಇದಂತು ಅದ್ಭುತವಾಗಿ ತೋರುತ್ತಿದೆ. ಇದನ್ನು ನೋಡಿದರೆ ವಯಸ್ಸು ಹಿಂದಕ್ಕೆ ಸರಿಯುತ್ತಿದೆ ಎನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಸಾದಿಕ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಟ್ವೀಟಿಗರು, ‘2018ರಲ್ಲಿ 17 ಆಗಿದ್ದಶಾ ವಯಸ್ಸು 2019ರಲ್ಲಿ 16ಕ್ಕೆ ಇಳಿದಿದೆ’ ಎಂಬರ್ಥದಲ್ಲಿ ಟ್ವೀಟ್‌ ಮಾಡಿ ಕಿಚಾಯಿಸಿದ್ದಾರೆ.

ಈ ಹಿಂದೆ ಆಲ್ರೌಂಡರ್‌ಶಾಹಿದ್‌ ಅಫ್ರಿದಿ ಅವರ ವಯಸ್ಸಿನ ಬಗ್ಗೆಯೂ ಚರ್ಚೆಯಾಗಿದ್ದು. ಕೆಲವರು ಶಾ ಅವರನ್ನು ಅಫ್ರಿದಿಗೆ ಹೋಲಿಸಿದ್ದಾರೆ.

ವೆಸ್ಟ್‌ಇಂಡೀಸ್‌ ತಂಡದ ದಿಗ್ಗಜ ಆಟಗಾರ ಆ್ಯಂಡಿ ರೋಬರ್ಸ್‌ ಅವರು2016ರಲ್ಲಿ, ಶಾ ಬಗ್ಗೆ ಅವರ ವಯಸ್ಸನ್ನೂ(16 ವರ್ಷದ ) ಉಲ್ಲೇಖಿಸಿ ಮಾತನಾಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಅನುಮಾನಗಳ ಬಗ್ಗೆ ಅದರಲ್ಲೂ ಭಾರತದ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸಿಇಒ ವಾಸಿಂ ಖಾನ್‌, ‘ನೀವು ಆತನ ಮುಖವನ್ನು ಮಾತ್ರವೇ ನೋಡಿ. ಆತನ ಮುಖ್ಯದಲ್ಲಿ ವಯಸ್ಸಾಗಿದೆ ಎನ್ನಬಹುದಾದ ಚಹರೆ ಇಲ್ಲ. ಆತ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾನೆ ಎನ್ನುವ ಬಗ್ಗೆ ಜನರಲ್ಲಿ ಅನುಮಾನದ ಪ್ರಶ್ನೆಗಳಿವೆ. ಅವನೊಬ್ಬ ಪ್ರಬುದ್ಧ ಹುಡುಗ. ನಸೀಂ ಶಾಗೆ 16 ವರ್ಷ. ಈ ವಿಚಾರವಾಗಿ ಭಾರತ ಏನು ಯೋಚಿಸುತ್ತಿದೆ ಎಂಬುದರ ಬಗ್ಗೆ ನಾವು ಚಿಂತಿಸುವುದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT