ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿ ಕುರ್ಚಿ ಕ್ರಿಕೆಟ್‌...

ಕಾಲಿಲ್ಲದಿದ್ದರೇನಂತೆ ಕ್ರಿಕೆಟ್ ಆಡಲು
Last Updated 8 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಗಾಲಿ ಕುರ್ಚಿ ಕ್ರಿಕೆಟ್ ಅನ್ನು (ವ್ಹೀಲ್‍ಚೇರ್ ಲೆದ್‌ಬಾಲ್‌) ಪ್ರೋತ್ಸಾಹಿಸಿ, ಅಂಗವಿಕಲರಿಂದಲೇ ಹುಟ್ಟಿಕೊಂಡ ರಾಜ್ಯದ ಏಕೈಕ ಸಂಸ್ಥೆ ‘ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ’.

ಗಾಲಿಕುರ್ಚಿ ಟೆನಿಸ್ ಆಟಗಾರ ಎಸ್. ಶಿವಪ್ರಸಾದ್ ಅವರು ಮಲೇಷ್ಯಾದಲ್ಲಿ ನಡೆದ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಉತ್ತರ ಪ್ರದೇಶದದಿಂದ ಬಂದಿದ್ದ ಸಹ ಆಟಗಾರ ಗಾಲಿಕುರ್ಚಿ ಕ್ರಿಕೆಟ್ ಬಗ್ಗೆ ತಿಳಿಸಿದಾಗ ಈ ಬಗ್ಗೆ ಆಲೋಚಿಸಿ, ಸಮಾನ ಮನಸ್ಕರಾದ ದಿಲೀಪ್ ಕುಮಾರ್, ಎನ್.ಎಂ.ವಿಜಯ್, ದೇವೇಗೌಡ ಆಂಜಿನಪ್ಪ, ಅವರೊಂದಿಗೆ ಚರ್ಚಿಸಿ ಮಧುಸೂದನ್, ಮಾದೇಶ್ ಚಂದ್ರ, ನೀಲಾಂಜನಯ್ಯ, ವಂಶಿಧರ ರಾಟಕೊಂಡ, ಪಿಯುಶ್ ಶರ್ಮ ಸದಸ್ಯರೊಂದಿಗೆ 2016ರಲ್ಲಿ ಪ್ರಾರಂಭವಾದ ಅಕಾಡೆಮಿ, ಇಂದು 40 ಸದಸ್ಯರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಷ್ಟು ಎತ್ತರಕ್ಕೆ ಬೆಳೆದಿದೆ.

ಉತ್ತರ ಪ್ರದೇಶ, ಚೆನ್ನೈ, ಕರ್ನಾಟಕ ತಂಡಗಳ ತ್ರಿವಳಿ ಪಂದ್ಯಾವಳಿಯ ಅಯೋಜನೆಯೊಂದಿಗೆ ಸಂಸ್ಥೆಯ ಪ್ರಾರಂಭೋತ್ಸವ ನಡೆಯಿತು. ಫೆಬ್ರುವರಿ 2018 ರಲ್ಲಿ ವ್ಹೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಡೆದ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಿಭಾಗದಿಂದ ಗೆದ್ದು ಸೆಮಿಫೈನಲ್‍ಗೆ ಆಯ್ಕೆಯಾಯಿತು.

ಸೆಮಿಫೈನಲ್ ದೆಹಲಿಯಲ್ಲಿ ಇದ್ದುದರಿಂದ ಹಣದ ಕೊರತೆ ಎದುರಾಯಿತು. ಆಕಾಡೆಮಿಯ ಸದಸ್ಯರು ರೇಡಿಯೊ ಸಿಟಿ ಬಾಗಿಲು ತಟ್ಟಿದರು. ಅಲ್ಲಿ ಉಚಿತ ಜಾಹೀರಾತು ನೀಡಿದ ಕಾರಣ ಸಾರ್ವಜನಿಕರಿಂದ ₹20 ಸಾವಿರ ಸಂಗ್ರಹವಾಯಿತು. ವಿಜಯ್ ತಾವು ಎಂಜಿನಿಯರಿಂಗ್ ಪದವಿ ಪಡೆದ ಬಿಎಂಎಸ್ ತಾಂತ್ರಿಕ ಕಾಲೇಜಿನ ರಾಜೇಶ್ ಪ್ರಭುಕುಮಾರ್, ಡಾ.ಭೀಮ್‍ಶಾ ಆರ್ಯ, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು ಅವರ ಸಹಕಾರ ಕೋರಿದರು. ಬಿಎಂಎಸ್ ಟ್ರಸ್ಟಿ ಡಾ. ದಯಾನಂದ ಪೈ ಅವರನ್ನು ವಿನಂತಿಸಿದಾಗ ₹ 50 ಸಾವಿರಗಳ ನೆರವಿನ ಹಸ್ತ ದೊರೆಯಿತು.

ದೆಹಲಿಯಲ್ಲಿ ಚಂಡೀಗಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರು. ಉತ್ತರ ಪ್ರದೇಶದ ವಿರುದ್ಧ ಪರಾಭವಗೊಂಡು, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬಿ.ಎಂ.ಎಸ್ ತಾಂತ್ರಿಕ ಕಾಲೇಜು ಇವರನ್ನು ಪುರಸ್ಕರಿಸಿತು. ಎಎನ್‍ಜಡ್ ಬ್ಯಾಂಕಿಂಗ್ ಗ್ರೂಪ್ ಲಿಮಿಟೆಡ್‌ ಮತ್ತು ಟಿ.ಜಾನ್ಸ್ ಕಾಲೇಜಿನವರು ಕ್ರಿಕೆಟ್ ಆಡುವ ಸಂದರ್ಭಗಳಲ್ಲಿ ಸ್ವಯಂ ಸೇವಕರಾಗಿ ಕ್ರೀಡಾಂಗಣದಲ್ಲಿ ಕಾರ್ಯ ನಿರ್ವಹಿಸಲು ಮುಂದೆ ಬಂದದ್ದು ಮತ್ತು ಕಾರ್ಪೊರೇಟ್ ವಲಯದಲ್ಲಿ ಜಾಗೃತಿ ಮೂಡಿಸಲು ಇವರೊಂದಿಗೆ ಸಾಮಾನ್ಯರಾದ ತಾವೂ ವ್ಹೀಲ್‍ಚೇರ್ ಕ್ರಿಕೆಟ್ ಆಡುವುದಾಗಿ ಘೋಷಿಸಿದರು.

ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ಟಿ20 ತ್ರಿಕೋನ ಸರಣಿ ನಡೆಯಿತು. ಅಕಾಡೆಮಿಯ ಶಿವಪ್ರಸಾದ್ ಮತ್ತು ತಿಪ್ಪೇಸ್ವಾಮಿ ಅವರು ಕರ್ನಾಟಕದಿಂದ ಆಯ್ಕೆಯಾಗಿ ಭಾರತ ತಂಡವನ್ನು ಪ್ರತಿನಿಧಿಸಿದರು. ಭಾರತ ತಂಡ ಮೂರೂ ಪಂದ್ಯಗಳನ್ನು ಗೆದ್ದು ಸರಣಿ ಜಯಿಸಿತು. ಮುಂಬರುವ ವರ್ಷದಿಂದ ವ್ಹೀಲ್‍ಚೇರ್ ಕ್ರಿಕೆಟ್‍ನ್ನು ದಸರಾ ಕ್ರೀಡಾಕೂಟದಲ್ಲಿ ಸೇರಿಸಿದೆ.

’ವ್ಹೀಲ್‍ಚೇರ್ ಟೆಸ್ಟ್ ಪಂದ್ಯಾವಳಿಯನ್ನು ಆಯೋಜಿಸಿ, ಎರಡು ದಿನಗಳು ನಿರಂತರವಾಗಿ ಆಡಿಸಲು ಯೋಜಿಸಿದ್ದೇವೆ. ಕಂಠೀರವ ಸ್ಟೇಡಿಯಂನಲ್ಲಿ ಒಂದು ಕೊಠಡಿಯನ್ನು ದಿವ್ಯಾಂಗ್ ಅಕಾಡೆಮಿ ಕಚೇರಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಎಸ್.ಶಿವಪ್ರಸಾದ್.

ಪ್ರಸ್ತುತ ಜಕ್ಕೂರಿನಲ್ಲಿರುವ ವಿದ್ಯಾಶಿಲ್ಪ ಅಕಾಡೆಮಿಯವರು ಪಂದ್ಯಾವಳಿಗಳಿಗೆ ಕ್ರೀಡಾಂಗಣ ಸೌಲಭ್ಯ ಕಲ್ಪಿಸಿದ್ದು, ಜೆ.ಪಿ. ನಗರದ ಸಾರಕ್ಕಿಯ ಆಕ್ಸ್‌ಫರ್ಡ್‌ ಶಾಲೆ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದೇವೆ. ಬಿಎಂಎಸ್ ತಾಂತ್ರಿಕ ಕಾಲೇಜಿನವರು ಎಲ್ಲ ಆಟಗಾರರಿಗೂ ಕ್ರೀಡೆಗಾಗಿಯೆ ವಿನ್ಯಾಸಗೊಳಿಸಿದ, ತಾವೇ ತಯಾರಿಸಿದ ವಿಶೇಷ ವ್ಹೀಲ್ ಚೇರ್ ಮತ್ತು ಆಟದ ಪರಿಕರಗಳನ್ನು ಒದಗಿಸುತ್ತಿದೆ. ಈಗಾಗಲೆ ಗಾಲಿಕುರ್ಚಿ ಬ್ಯಾಸ್ಕೆಟ್‍ಬಾಲ್, ಟೇಬಲ್ ಟೆನಿಸ್ ಆಟಗಳನ್ನೂ ಪ್ರಾರಂಭಿಸಲಾಗಿದೆ. ಫೋರ್‍ಟೆಲ್ ಬಿಸಿನೆಸ್ ಸಲ್ಯೂಷನ್, ಡೈರಿಡೇ ಐಸ್‍ಕ್ರೀಮ್, ಸಿಬಿಎಂ, ಎಸ್‍ಜೆ ಫೌಂಡೇಷನ್, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ಸಮರ್ಥನಂ ಟ್ರಸ್ಟ್‌ ಬೆಂಬಲವಾಗಿ ನಿಂತಿವೆ ಎನ್ನುತ್ತಾರೆ ಸದಸ್ಯ ದಿಲೀಪ್ ಕುಮಾರ್.

ನವೆಂಬರ್ ಕೊನೆ ವಾರದಲ್ಲಿ ದಕ್ಷಿಣ ಭಾರತದ ಅಂಗವಿಕಲ ಕ್ರೀಡಪಟುಗಳಿಗೆ ವ್ಹೀಲ್ ಚೇರ್ ಕ್ರಿಕೆಟ್ ಕ್ಯಾಂಪ್‍ ಅನ್ನು ದಿವ್ಯಾಂಗ್ ಸಂಸ್ಥೆ ಮೈಸೂರಿನಲ್ಲಿ ಹಮ್ಮಿಕೊಂಡಿದೆ. ಡಿಸೆಂಬರ್‌ನಲ್ಲಿ ಎಎನ್‍ಜಡ್ ಬ್ಯಾಂಕಿಂಗ್ ಗ್ರೂಪ್ ಲಿಮಿಟೆಡ್‌ನ ಸಾಮಾನ್ಯರು ದಿವ್ಯಾಂಗ್ ಸಂಸ್ಥೆಯ ಸದಸ್ಯರೊಂದಿಗೆ ವ್ಹೀಲ್‍ಚೇರ್ ಕ್ರಿಕೆಟ್ ಆಡಲಿದ್ದಾರೆ.

ಐಪಿಎಲ್‌ ಮಾದರಿ ಪಂದ್ಯ

ದೇಶದಾದ್ಯಂತ ಎಲ್ಲ ಗಾಲಿಕುರ್ಚಿ ಕ್ರಿಕೆಟ್ ಆಟಗಾರರಿಗೂ ಅವಕಾಶ ಕೊಡಬೇಕು ಎಂದು ಐಪಿಎಲ್ ಮಾದರಿಯಲ್ಲಿ ಬೆಂಗಳೂರು (2 ತಂಡ), ಮೈಸೂರು, ಬಾಗಲಕೋಟೆ, ವಿಜಯಪುರ ಮತ್ತು ಚಿಕ್ಕಮಗಳೂರು ಒಟ್ಟು 6 ತಂಡಗಳ ಕರ್ನಾಟಕ ವ್ಹೀಲ್‍ಚೇರ್ ಪ್ರೀಮಿಯರ್ ಲೀಗ್ ಆಯೋಜನೆಯ ಯೋಜನೆ ಹಾಕಿಕೊಂಡಿದ್ದು, ತಂಡಗಳ ಮಾಲೀಕತ್ವ ವಹಿಸಿಕೊಳ್ಳಲು ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಾಜಿ ಕ್ರಿಕೆಟಿಗರನ್ನು ಮತ್ತು ಚಿತ್ರ ನಟರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ಅವರ ಭೇಟಿಗೆ ಅವಕಾಶವೇ ದೊರೆಯುತ್ತಿಲ್ಲ. ಆರ್ಥಿಕವಾಗಿ ಅಲ್ಲದಿದ್ದರೂ ತಮ್ಮನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡುವ ವಿಡಿಯೊ ತುಣುಕನ್ನು ನೀಡಿದರೂ ನಮಗೆ ನೈತಿಕ ಬೆಂಬಲ ಸಿಕ್ಕಂತಾಗುತ್ತದೆ. ಈಗಾಗಲೆ ನಟ ರಮೇಶ್‍ ಅರವಿಂದ್ ಮತ್ತು ಶರಣ್ ಅವರು ತಮ್ಮ ವಿಡಿಯೊ ನೀಡಿದ್ದಾರೆ. ಉಪೇಂದ್ರ ಅವರು ಪಂದ್ಯ ವೀಕ್ಷಣೆಗೆ ಬರುವುದಾಗಿ ತಿಳಿಸಿ ನಮ್ಮ ಉತ್ಸಾಹ ಇಮ್ಮಡಿಗೊಳಿಸಿದ್ದಾರೆ ಎಂದು ತಂಡದ ಸದಸ್ಯಎನ್.ಎಂ. ವಿಜಯ್ ಹೇಳುತ್ತಾರೆ.

ಹೆಚ್ಚಿನ ಮಾಹಿತಿಗೆ ಮೊ: 9845712020/ 9620115666/ 9986961117.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT