ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.14ರಿಂದ ಭಾರತ–ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌

ವೇಗಿಗಳು ರೇಸ್‌ ಕುದುರೆಗಳಿದ್ದಂತೆ: ಅರುಣ್
Last Updated 13 ಡಿಸೆಂಬರ್ 2018, 15:46 IST
ಅಕ್ಷರ ಗಾತ್ರ

ಪರ್ತ್‌: ಭಾರತ ಕ್ರಿಕೆಟ್ ತಂಡದಲ್ಲಿರುವ ವೇಗದ ಬೌಲರ್‌ಗಳನ್ನು ರೇಸ್‌ ಕುದುರೆಗಳಂತೆ ಕಾಪಾಡಿಕೊಳ್ಳಬೇಕು. ಸದ್ಯ ಇರುವ ಬೌಲರ್‌ಗಳು ಶ್ರೇಷ್ಠ ಸಾಮರ್ಥ್ಯವುಳ್ಳವರಾಗಿದ್ದಾರೆ ಎಂದು ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತ ತಂಡದಲ್ಲಿ ಈಗ ಇರುವಷ್ಟುಉತ್ತಮ ವೇಗದ ಬೌಲರ್‌ಗಳು ಹಿಂದೆಂದೂ ಇರಲಿಲ್ಲ. ವಿದೇಶಿ ಪಿಚ್‌ಗಳಲ್ಲಿ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ಅವರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ.ರೇಸ್‌ ಕುದುರೆಗಳನ್ನು ಜತನ ಮಾಡುವ ರೀತಿಯಲ್ಲಿಯೇ ವೇಗಿಗಳನ್ನೂ ಕಾಪಾಡಿಕೊಳ್ಳಬೇಕು’ ಎಂದರು.

ಆಡಿಲೇಡ್ ಪಂದ್ಯದಲ್ಲಿ ಮಧ್ಯಮವೇಗಿಗಳು ಉತ್ತಮ ಸಾಧನೆ ಮಾಡಿದ್ದು ತಂಡದ ಗೆಲುವಿಗೆ ನೆರವಾಯಿತು’ ಎಂದರು.

‘ಈ ಹಿಂದೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿಯೂ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಮುಂಬರುವ ಪಂದ್ಯಗಳಲ್ಲಿಯೂ ಅವರು ಉತ್ತಮವಾಗಿ ಆಡಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಸತತವಾಗಿ ಶಿಸ್ತಿನ ಬೌಲಿಂಗ್ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಈಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವೇಗದ ಬೌಲರ್‌ಗಳು ಮೂರು ಟೆಸ್ಟ್‌ಗಳಲ್ಲಿ ಒಟ್ಟು 60 ವಿಕೆಟ್; ಇಂಗ್ಲೆಂಡ್ ಪ್ರವಾಸದ ಐದು ಟೆಸ್ಟ್‌ಗಳಲ್ಲಿ 82 ವಿಕೆಟ್‌ಗಳನ್ನು ಪಡೆದಿದ್ದರು.

‘ತಂಡದ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡುವ ಅರಿವು ಬೌಲರ್‌ಗಳಿಗೆ ಇರುವುದು ಅಗತ್ಯ. ಪಿಚ್‌ ಮರ್ಮ ಅರಿತು ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡಬೇಕು. ಆ ಚಾಣಾಕ್ಷತನವೂ ಈ ಬೌಲರ್‌ಗಳಿಗೆ ಇದೆ’ ಎಂದು ಭರತ್ ಹೇಳಿದ್ದಾರೆ.

ಶುಕ್ರವಾರದಿಂದ ಎರಡನೇ ಟೆಸ್ಟ್ ನಡೆಯಲಿರುವ ಪರ್ತ್‌ ಕ್ರೀಡಾಂಗಣದ ಪಿಚ್ ಕುರಿತು ಅವರು, ‘ಇದುವರೆಗೆ ಪಿಚ್‌ ವೀಕ್ಷಿಸಿಲ್ಲ. ಪಿಚ್‌ ಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುವ ಸಾಮರ್ಥ್ಯ ತಂಡದ ಬೌಲರ್‌ಗಳಿಗೆ ಇದೆ’ ಎಂದು ಹೇಳಿದರು.

‘ಸ್ಪಿನ್ನರ್‌ಗಳು ಅನುಭವ ಸಿಕ್ಕಷ್ಟು ಪರಿಪಕ್ವಗೊಳ್ಳುತ್ತಾರೆ. ಸಮಯ ಕಳೆದಂತೆ ರುಚಿಕಟ್ಟಾಗುವ ವೈನ್‌ನಂತೆ ಸ್ಪಿನ್ನರ್‌ಗಳು. ಆರ್. ಅಶ್ವಿನ್ ಕೂಡ ಪರಿಪಕ್ವಗೊಂಡಿದ್ದಾರೆ’ ಎಂದು ಭರತ್ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT